Friday, January 9, 2026
Homeರಾಜ್ಯಹುಬ್ಬಳ್ಳಿಯಲ್ಲಿ ಪೊಲೀಸರು ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ ಸಿಐಡಿ ತನಿಖೆಗೆ

ಹುಬ್ಬಳ್ಳಿಯಲ್ಲಿ ಪೊಲೀಸರು ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ ಸಿಐಡಿ ತನಿಖೆಗೆ

Police in Hubballi undressed woman's assault case to be investigated by CID

ಬೆಂಗಳೂರು, ಜ.9- ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲೆ ದಾಖಲಾಗಿದ್ದ ಪ್ರಕರಣಗಳ ಹಿನ್ನೆಲೆ ಹಾಗೂ ಇತರ ವಿಚಾರಗಳ ಬಗ್ಗೆ ಸ್ಪಷ್ಟತೆ ಇಲ್ಲ. ತನಿಖೆ ಮಾಡಿದಾಗ ಎಲ್ಲಾ ವಾಸ್ತವಾಂಶಗಳು ಗೊತ್ತಾಗಲಿದೆ. ಅದಕ್ಕಾಗಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಗೆ ಸಂಬಂಧಪಟ್ಟಂತೆ ತಾವು ಕೆಲ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಮಹಿಳೆಯ ಸ್ವಯಂ ವಿವಸ್ತ್ರಗೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ದೊರೆತಿರುವ ಮಾಹಿತಿ. ಆ ಸಂದರ್ಭದಲ್ಲಿ ಅಲ್ಲಿದ್ದ ಪೊಲೀಸರು, ಮಹಿಳೆ ಸಂಪೂರ್ಣವಾಗಿ ವಿವಸ್ತ್ರಗೊಳ್ಳಲು ಬಿಟ್ಟಿಲ್ಲ. ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಅದರ ನಂತರವೂ ಸಂಪೂರ್ಣ ವಿವರ ಕಲೆಹಾಕಲು ತನಿಖೆ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಘಟನೆಯ ತನಿಖೆಯನ್ನು ಸಿಐಡಿಗೆ ವಹಿಸಲು ಚಿಂತನೆ ನಡೆಸಲಾಗಿದೆ. ಈ ಕುರಿತು ನಾನೇ ತೀರ್ಮಾನ ತೆಗೆದುಕೊಳ್ಳಬಹುದು. ಆದರೆ ನಾವೆಲ್ಲ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳಿಗೆ ರಾಜ್ಯದ ಜವಾಬ್ದಾರಿ ಇದೆ. ಅವರ ಗಮನಕ್ಕೆ ತಂದು ತೀರ್ಮಾನ ಪ್ರಕಟಿಸಬೇಕಾಗುತ್ತದೆ ಎಂದರು.

ಬಳ್ಳಾರಿ ಘಟನೆ ಹಿನ್ನೆಲೆಯಲ್ಲಿ ಐಜಿಪಿಯವರನ್ನು ವರ್ಗಾವಣೆ ಮಾಡಿರುವುದು ನನಗೆ ಸಂಬಂಧ ಪಡದ ವಿಷಯ. ಐಪಿಎಸ್‌‍ ಹಿರಿಯ ಅಧಿಕಾರಿಗಳ ವರ್ಗಾವಣೆಗೆ ಮುಖ್ಯಮಂತ್ರಿ ಸಹಿ ಹಾಕಬೇಕು. ಬಳ್ಳಾರಿಯ ಐಜಿಪಿ ಅವರನ್ನು ವರ್ಗಾವಣೆ ಮಾಡಿ ಆ ಸ್ಥಾನಕ್ಕೆ ಹರ್ಷ ಅವರನ್ನು ನೇಮಿಸುವ ಬಗ್ಗೆ ನನಗೆ ಮಾಹಿತಿ ಇತ್ತು. ಬೇರೆ ಯಾವುದೇ ಸಚಿವರು ತಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಸ್ಪಷ್ಟ ಪಡಿಸಿದರು.

ಡಿ.ಕೆ.ಶಿವಕುಮಾರ್‌ ಸಭೆ ನಡೆಸಿದ್ದು ತಪ್ಪಲ್ಲ:
ಬ್ಯಾನರ್‌ ಗಲಾಟೆಯ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬಳ್ಳಾರಿಯಲ್ಲಿ ಹಿರಿಯ ಪೊಲೀಸ್‌‍ ಅಧಿಕಾರಿಗಳ ಸಭೆ ನಡೆಸಿರುವುದರಲ್ಲಿ ತಪ್ಪಿಲ್ಲ ಎಂದು ಪರಮೇಶ್ವರ್‌ ಸಮರ್ಥಿಸಿಕೊಂಡರು.

ಉಪಮುಖ್ಯಮಂತ್ರಿ ಎಂಬುದು ಸಚಿವ ಸ್ಥಾನಕ್ಕೆ ಸಮವಾಗಿದೆ. ಹೀಗಾಗಿ ಸಭೆ ನಡೆಸಿರುವುದು ಕಾನೂನುಬಾಹಿರ ಎಂದು ಟೀಕೆ ಮಾಡುತ್ತಿರುವ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಹೇಳುತ್ತಿದ್ದಾರೆ. ರಾಜ್ಯಪಾಲರು ಪ್ರಮಾಣವಚನ ಬೋಧಿಸುವಾಗ ಉಪಮುಖ್ಯಮಂತ್ರಿ ಎಂದೇ ಉಲ್ಲೇಖಿಸಲಾಗಿರುತ್ತದೆ. ಆ ಜವಾಬ್ದಾರಿಯಿಂದಲೇ ಅವರು ಅಲ್ಲಿಗೆ ಹೋಗಿ ಸಭೆ ಮಾಡಿದ್ದಾರೆ ಎಂದರು.

ಘಟನೆ ನಡೆದ ತಕ್ಷಣ ನಾನು ಸ್ಥಳಕ್ಕೆ ಹೋಗಿ ಪೊಲೀಸ್‌‍ ಅಧಿಕಾರಿಗಳ ಸಭೆ ನಡೆಸಿದ್ದರೆ ಗೃಹಸಚಿವರು ಹೋಗಿ, ಏನೇನೋ ಸೂಚನೆಗಳನ್ನು ನೀಡಿದ್ದಾರೆ ಎಂಬ ಟೀಕೆಗಳು ಕೇಳಿ ಬರುತ್ತಿದ್ದವು. ಅದಕ್ಕಾಗಿ ಗೃಹಸಚಿವರಾದವರು ತಕ್ಷಣ ಸ್ಥಳಕ್ಕೆ ಭೇಟಿ ನೀಡುವುದಿಲ್ಲ. ತಡವಾಗಿ ಹೋಗುವುದು ವಾಡಿಕೆ. ತಾವು ಬೆಂಗಳೂರಿನಲ್ಲಿ ಕುಳಿತು ಪರಿಸ್ಥಿತಿಯನ್ನು ಗಮನಿಸಿದ್ದೇನೆ. ಸ್ಥಳೀಯವಾಗಿ ನಿಷ್ಪಕ್ಷಪಾತವಾದ ತನಿಖೆ ನಡೆಯಬೇಕು. ಯಾವುದೇ ಹಸ್ತಕ್ಷೇಪಗಳು ಇರಬಾರದು ಎಂಬ ಕಾರಣಕ್ಕೆ ಸ್ವಲ್ಪ ತಡವಾಗಿ ಹೋಗಿದ್ದೇನೆ. ಗಂಭೀರ ಪ್ರಮಾಣದ ತುರ್ತು ಸಂದರ್ಭ ಇದ್ದರೆ ಮಾತ್ರ ಗೃಹ ಸಚಿವರಾದವರು ತಕ್ಷಣ ಹೋಗುತ್ತಾರೆ ಎಂದರು.

ಉಪಮುಖ್ಯಮಂತ್ರಿಯವರು ಸರ್ಕಾರದ ಪ್ರತಿನಿಧಿಯಾಗಿ ಸ್ಥಳಕ್ಕೆ ಹೋಗಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಮೃತಪಟ್ಟ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ್ದಾರೆ. ಅದು ಕೂಡ ತಪ್ಪು ಎಂದಾದರೆ ಕುಮಾರಸ್ವಾಮಿ ಅವರಿಗೆ ಏನು ಹೇಳಬೇಕು? ಎಂದು ತಿರುಗೇಟು ನೀಡಿದರು.
ಡಿ.ಕೆ.ಶಿವಕುಮಾರ್‌ ಸರ್ಕಾರದ ಪ್ರತಿನಿಧಿಯಾಗಿದ್ದಾರೆ. ಅವರಿಗೆ ಅಧಿಕಾರಿಗಳ ಸಭೆ ನಡೆಸಲು ಯಾರ ಅನುಮತಿಯೂ ಬೇಕಿಲ್ಲ. ಜಲಸಂಪನೂಲ ಇಲಾಖೆಯನ್ನು ಡಿ.ಕೆ.ಶಿವಕುಮಾರ್‌ ನಿರ್ವಹಿಸುತ್ತಾರೆ. ನಾನು ಭದ್ರಾ ಯೋಜನೆ ಪ್ರಗತಿಯಲ್ಲಿರುವ ಸ್ಥಳಕ್ಕೆ ಹೋಗಿದ್ದೆ. ಅಧಿಕಾರಿಗಳನ್ನು ಕರೆದು ಪ್ರಗತಿಪರಿಶೀಲನೆ ನಡೆಸಿದ್ದೆ. ಅದನ್ನು ತಪ್ಪು ಎಂದು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಸಂಪುಟ ಸ್ಥಾನ ಎಂದರೇನು? ಅವರು ಸರ್ಕಾರದ ಪ್ರತಿನಿಧಿಯಲ್ಲವೇ. ಬೇರೆ ಖಾತೆಗಳ ಕೆಲಸ ನಿರ್ವಹಣೆಯಲ್ಲಿ ಕೆಲವೊಮೆ ಸಲಹೆ ಸೂಚನೆ ನೀಡಬೇಕಾಗುತ್ತದೆ. ಕೆಲ ಸಚಿವರು ಯಾವುದೋ ಪ್ರಸ್ತಾವನೆ ತಂದಿರುತ್ತಾರೆ. ಬೇರೆ ಸಚಿವರು ಅದರ ಬಗ್ಗೆ ಮಾತನಾಡಿ ತಡೆಹಿಡಿಯುತ್ತಾರೆ. ಅದೆಲ್ಲವೂ ಸಂಪುಟದಲ್ಲಿ ಸಹಜ ಬೆಳವಣಿಗೆ. ಸರ್ಕಾರದ ಪ್ರತಿನಿಧಿಯಾಗಿ ಜವಾಬ್ದಾರಿಯುತ ಕೆಲಸಗಳನ್ನು ಮಾಡಿದರೆ ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಡಿ.ಕೆ.ಶಿವಕುಮಾರ್‌ ಗೃಹ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಗೃಹ ಇಲಾಖೆಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಮತ್ತು ನಾನು ಇಬ್ಬರು ಮಾತ್ರ ತೀರ್ಮಾನ ತೆಗೆದುಕೊಳ್ಳುತ್ತೇವೆ. ಡಿ.ಕೆ.ಶಿವಕುಮಾರ್‌ ಬಳ್ಳಾರಿಗೆ ಹೋಗಿ ಪೊಲೀಸ್‌‍ ಅಧಿಕಾರಿಗಳಿಗೆ ಯಾವುದೇ ಸೂಚನೆಗಳನ್ನು ನೀಡಿಲ್ಲ. ವಾಸ್ತವಂಶದ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ ಎಂದರು.

ಮಹಾತ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಬದಲಾವಣೆ ಒಂದು ಭಾಗವಾದರೆ, ಮೂಲ ನಿಯಮಗಳಲ್ಲೇ ಸಾಕಷ್ಟು ವ್ಯತ್ಯಾಸಗಳನ್ನು ಮಾಡಿ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಸಿಗದಂತೆ ಮಾಡಲಾಗಿದೆ. ಇದರ ವಿರುದ್ಧ ಕಾಂಗ್ರೆಸ್‌‍ ಪಕ್ಷ ದೇಶಾದ್ಯಂತ ಜನ ಜಾಗೃತಿ ಮತ್ತು ಪ್ರತಿಭಟನೆ ನಡೆಸಲಿದೆ. ಕೇಂದ್ರ ಸರ್ಕಾರ ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್‌ ಗ್ರಾಮೀಣ ಕಾಯ್ದೆಯ ಮೂಲಕ ವಿಕೇಂದ್ರಿಕರಣಕ್ಕೆ ವಿರುದ್ಧವಾದ ನಿರ್ಧಾರಗಳನ್ನು ಮಾಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಯಾವ ಕೆಲಸಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಸ್ಥಳೀಯ ಅಧಿಕಾರಿಗಳೇ ಚರ್ಚಿಸಿ ನಿರ್ಣಾಯಕಗೊಳ್ಳುತ್ತಿದ್ದರು. ಈಗ ಎಲ್ಲವೂ ದೆಹಲಿಯಲ್ಲಿ ತೀರ್ಮಾನವಾಗುತ್ತದೆ. ರಾಜ್ಯ ಸರ್ಕಾರಗಳ ಜೊತೆ ಯಾವುದೇ ಚರ್ಚೆ ಮಾಡದೇ ಕಾನೂನು ತಿದ್ದುಪಡಿ ಮಾಡಿರುವುದು ಸರಿಯಲ್ಲ ಎಂದು ಹೇಳಿದರು.

RELATED ARTICLES

Latest News