ಬೆಂಗಳೂರು,ಜ.24-ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡ ಅವರಿಗೆ ನಿಂದಿಸಿ ಬಂಧನ ಭೀತಿಯಿಂದ ತಲೆ ಮರೆಸಿಕೊಂಡಿರುವ ರಾಜೀವ್‌ಗೌಡನ ಮನೆ ಮೇಲೆ ಚಿಕ್ಕಬಳ್ಳಾಪುರ ಠಾಣೆ ಪೊಲೀಸರು ದಾಳಿ ಮಾಡಿದ್ದಾರೆ.
ನಗರದ ಸಂಜಯ ನಗರದಲ್ಲಿರುವ ಆತನ ಮನೆ ಮೇಲೆ ಪೊಲೀಸರು ದಾಳಿ ಮಾಡಿ ಪರಿಶೀಲಿಸಿದಾಗ ರಾಜೀವ್‌ಗೌಡ ಪತ್ತೆಯಾಗಿಲ್ಲ. ಆಯುಕ್ತೆ ಅವರಿಗೆ ಬೆದರಿಕೆ ನಂತರ ರಾಜೀವ್‌ಗೌಡ ತಲೆಮರೆಸಿ ಕೊಂಡಿದ್ದು ಆತ ವಿದೇಶಕ್ಕೆ ಹೋಗದ ಹಾಗೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಈಗಾಗಲೇ ರಾಜೀವ್‌ಗೌಡನನ್ನು ಕೆಪಿಸಿಸಿ ವತಿಯಿಂದ ಅಮಾನತು ಮಾಡಲಾಗಿದೆ.ಈ ಎಲ್ಲಾ ಬೆಳವಣಿಗೆಗಳ ನಡುವೆ ಅಮೃತಾಗೌಡ ರವರಿಗೆ ಆ್ಯಸಿಡ್ ದಾಳಿ ಬೆದರಿಕೆಯ ಪತ್ರ ಅವರ ಕಚೇರಿಗೆ ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಅಮೃತಾಗೌಡ ಅವರ ನಿವಾಸ ಹಾಗೂ ಕಚೇರಿಗೆ ಭದ್ರತೆ ಹೆಚ್ಚಿಸಿದ್ದಾರೆ.
ಪೌರಾಯುಕ್ತರಿಗೆ ಬೆದರಿಕೆ ಹಾಕಿದ ಪ್ರಕರಣ ಕಾವೇರುತ್ತಿದ್ದಂತೆ ತಲೆಮರೆಸಿಕೊಂಡಿದ್ದ ರಾಜೀವ್‌ಗೌಡ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ರಾಜೀವ್‌ಗೌಡ ಅವರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಅಧಿಕಾರಿಗಳಿಗೆ ಬೆದರಿಕೆ ಹಾಕುವ ಪ್ರಕರಣ ಸಣ್ಣದಲ್ಲ. ಅಂತಹವರಿಗೆ ಜಾಮೀನು ಕೊಡುವ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿತ್ತು. ರಾಜೀವ್‌ಗೌಡ ಅವರ ಜಾಮೀನು ನಿರಾಕರಣೆಯಾಗುತ್ತಿದ್ದಂತೆ ಪೊಲೀಸರು ಅವರ ಬಂಧನಕ್ಕಾಗಿ ಜಾಲ ಬೀಸಿದ್ದರು.
