Thursday, December 18, 2025
Homeರಾಜ್ಯಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪೊಲೀಸರು ಶಾಮೀಲಾದರೆ ಸೇವೆಯಿಂದ ವಜಾ

ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪೊಲೀಸರು ಶಾಮೀಲಾದರೆ ಸೇವೆಯಿಂದ ವಜಾ

Policemen involved in illegal activities will be dismissed from service

ಬೆಳಗಾವಿ,ಡಿ.18- ಕಳ್ಳತನ, ದರೋಡೆ, ಕೊಲೆ, ಸುಲಿಗೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪೊಲೀಸರು ಶಾಮೀಲಾಗಿರುವುದು ಕಂಡುಬಂದರೆ ಅಂಥವರನ್ನು ಮುಲಾಜಿಲ್ಲದೆ ಸೇವೆಯಿಂದ ವಜಾಗೊಳಿಸುವ ಕಾನೂನು ಜಾರಿ ಮಾಡಿದ್ದೇವೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಎಚ್ಚರಿಸಿದ್ದಾರೆ.

ವಿಧಾನಪರಿಷತ್‌ನಲ್ಲಿ ಜೆಡಿಎಸ್‌‍ನ ಶರವಣ.ಟಿ.ಎ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಕಾರಣಕ್ಕೂ ಇಲಾಖೆಯ ಪೊಲೀಸರು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು. ಒಂದು ವೇಳೆ ಯಾರಾದರೂ ಇಂಥ ಕೃತ್ಯಗಳಲ್ಲಿ ಶಾಮೀಲಾಗಿರುವುದು ಕಂಡುಬಂದರೆ ಅವರನ್ನು ಸೇವೆಯಿಂದ ಅಮಾನತುಪಡಿಸುವುದು, ಬಂಧಿಸುವುದು, ನೋಟಿಸ್‌‍ ಕೊಡುವ ಪ್ರಕ್ರಿಯೆ ಜರುಗಿಸಬೇಕಾಗುತ್ತದೆ. ಅವರ ಮೇಲಿನ ಆರೋಪ ಸಾಬೀತಾದರೆ ಸೇವೆಯಿಂದ ವಜಾಗೊಳಿಸುತ್ತೇವೆ ಎಂದು ಎಚ್ಚರಿಕೆ ಕೊಟ್ಟರು.

ಈಗಾಗಲೇ ಗೃಹ ಇಲಾಖೆಯು ಕಾನೂನು ಇಲಾಖೆಗೆ ಪತ್ರವೊಂದನ್ನು ಬರೆದಿದೆ. ಇದಕ್ಕೆ ಅನುಮತಿ ಸಿಕ್ಕರೆ ಅಪರಾಧ ಚಟುವಟಿಕೆಗಳಲ್ಲಿ ತೊಡಗುವ ಪೊಲೀಸರು ಸೇವೆಯಿಂದಲೇ ವಜಾಗೊಳ್ಳಲಿದ್ದಾರೆ. ಯಾರ ವಿರುದ್ಧವೂ ನಾವು ಕರುಣೆಯನ್ನು ತೋರಿಸುವುದಿಲ್ಲ. ಪ್ರಕರಣವನ್ನು ಮುಚ್ಚಿ ಹಾಕುವುದಿಲ್ಲ. ಎಲ್ಲರಿಗೂ ನ್ಯಾಯವೊಂದೇ, ಕಾನೂನು ಒಂದೇ. ಮುಲಾಜಿಲ್ಲದೆ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲು ಸೂಚಿಸಿರುವುದಾಗಿ ತಿಳಿಸಿದರು.

ಹಾಗಂತ ಇಡೀ ಪೊಲೀಸ್‌‍ ವ್ಯವಸ್ಥೆಯನ್ನು ಅನುಮಾನದ ದೃಷ್ಟಿಯಿಂದ ನೋಡುವುದು ಇಲ್ಲವೇ ಇಲಾಖೆಯಲ್ಲಿರುವ ಎಲ್ಲರೂ ಅಪರಾಧಿಗಳು, ಕಳ್ಳರು, ವಸೂಲಿಗಾರರು ಎಂದು ಸಂಶಯದಿಂದ ನೋಡುವುದು ಬೇಡ. ನಮಲ್ಲಿರುವ ಅನೇಕ ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಅನೇಕರು ಪ್ರಾಮಾಣಿಕರಿದ್ದಾರೆ. ಎಲ್ಲರನ್ನೂ ಒಂದೇ ತಕ್ಕಡಿಯಿಂದ ತೂಗುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಷ್ಟರಮಟ್ಟಿಗೆ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇತರೆ ರಾಜ್ಯಗಳಲ್ಲಿನ ಕಾನೂನು, ಅಲ್ಲಿನ ಆಡಳಿತದ ಬಗ್ಗೆ ನಾನು ಮಾತನಾಡುವುದಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಸಾಕಷ್ಟು ಮುಂದೆ ಇದೆ ಎಂದು ಪ್ರಶ್ನಿಸಿದರು.

ಪೊಲೀಸರು ಉತ್ತಮವಾಗಿ ಮತ್ತು ಸಕ್ರಿಯವಾಗಿ ಕೆಲಸ ಮಾಡುತ್ತಿರುವುದರಿಂದಲೇ ಅನೇಕ ಅಪರಾಧ ಪ್ರಕರಣಗಳನ್ನು ಬೇಧಿಸಿದ್ದಾರೆ. ಸಾವಿರಾರು ಕೋಟಿ ಡ್ರಗ್‌್ಸ ವಶಪಡಿಸಿಕೊಂಡಿದ್ದೇವೆ. ಅಲ್ಲೊಂದು ಇಲ್ಲೊಂದು ಇಂತಹ ಪ್ರಕರಣಗಳು ಮರುಕಳಿಸುತ್ತವೆ. ನಮ ಪೊಲೀಸರು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಬಾರದೆಂಬುದು ನಮ ಮೊದಲ ಷರತ್ತು. ಪ್ರತಿ ತಿಂಗಳು ಹಿರಿಯ ಅಧಿಕಾರಿಗಳು ಅವರಿಗೆ ಕೆಳಹಂತದವರಿಗೆ ಕರ್ತವ್ಯ ನಿರ್ವಹಣೆ ಕುರಿತು ಮೌಲ್ಯ ಮಾಪನ ನಡೆಸುತ್ತಾರೆ ಎಂದು ತಿಳಿಸಿದರು.

ನಮ ಸರ್ಕಾರ ಬಂದ ಎರಡು ವರ್ಷಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿದೆ. ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂದು ಹೇಳುವುದು ಸರಿಯಲ್ಲ. ಇದು ಹಿಂದೆಯೂ ಇತ್ತು. ಮುಂದೆಯೂ ಇರುತ್ತದೆ. ಆದರೆ ಆಯಾ ಕಾಲಕ್ಕೆ ಕಾನೂನು ವ್ಯವಸ್ಥೆ ಕಾಪಾಡಿ ಶಾಂತಿ ನೆಲೆಸುವಂತೆ ಮಾಡುವುದು ನಮ ಕರ್ತವ್ಯ ಎಂದರು.

ರಾಜ್ಯದಲ್ಲಿ ಒಟ್ಟು 1999 ಪೊಲೀಸ್‌‍ ಠಾಣೆಗಳಿವೆ. ಇದರಲ್ಲಿ 1,06,000 ಸಿಬ್ಬಂದಿಗಳಿದ್ದಾರೆ. ಪ್ರತಿಯೊಬ್ಬರಿಗೂ ಅಪರಾಧದಲ್ಲಿ ಶಾಮೀಲಾಗದಂತೆ ಸೂಚನೆ ನೀಡುತ್ತೇವೆ. ಆದರೂ ಕೆಲವು ಪ್ರಕರಣಗಳಲ್ಲಿ ಶಾಮೀಲಾಗುತ್ತಾರೆ. ಅಂಥವರ ವಿರುದ್ಧ ಎಫ್‌ಐಆರ್‌ ದಾಖಲಿಸುತ್ತೇವೆ ಎಂದು ಹೇಳಿದರು.

2023ರಲ್ಲಿ 177 ದರೋಡೆ, 2,155 ಮನೆಗಳ್ಳತನ, 22,596 ಸಾಮಾನ್ಯ ಕಳ್ಳತನ, 1173 ಹಗಲು ಕಳ್ಳತನ, 4876 ರಾತ್ರಿ ಮನೆಗಳ್ಳತನ ನಡೆದಿವೆ. 2024ರಲ್ಲಿ ದರೋಡೆ 148, ಮನೆಗಳ್ಳತನ 1926 , ಸಾಮಾನ್ಯ ಮನೆಗಳ್ಳತನ 20401, ಹಗಲು ಕಳ್ಳತನ 1132, ರಾತ್ರಿ ಕಳವು 4329, 2024ರಲ್ಲಿ ದರೋಡೆ 120, ಮನೆಗಳ್ಳತನ 1673 , ಸಾಮಾನ್ಯ ಮನೆಗಳ್ಳತನ 15799, ಹಗಲು ಕಳ್ಳತನ 937, ರಾತ್ರಿ ಕಳವು 3405 ನಡೆದಿವೆ ಎಂದು ಅಂಕಿಸಂಖ್ಯೆಗಳ ವಿವರ ನೀಡಿದರು.

RELATED ARTICLES

Latest News