ಬೆಂಗಳೂರು,ಡಿ.17- ಕಾರಾಗೃಹಗಳಲ್ಲಿನ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಎಐ ತಂತ್ರಜ್ಞಾನ ಬಳಕೆ ಮಾಡಲು ಕಾರಾಗೃಹಗಳ ಡಿಜಿಪಿ ಅಲೋಕ್ಕುಮಾರ್ ಅವರು ಚಿಂತನೆ ಮಾಡುತ್ತಿದ್ದಾರೆ. ಜೈಲುಗಳಲ್ಲಿ ಮೊಬೈಲ್ ಬಳಕೆ, ಮಾದಕ ವಸ್ತುಗಳ ಸಾಗಾಣೆ ಹಾಗೂ ಇನ್ನಿತರ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಎಐ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಲಿದೆ ಎಂಬುದು ಅವರಿಗೆ ಮನವರಿಕೆಯಾಗಿದೆ.
ಕಾರಾಗೃಹ ಸಿಬ್ಬಂದಿಯ ಬೇಜವಾಬ್ದಾರಿ ಮತ್ತು ಲೋಪಗಳನ್ನು ತಪ್ಪಿಸುವ ಸಲುವಾಗಿ ಎಐ ತಂತ್ರಜ್ಞಾನ ಬಳಕೆ ಮಾಡಿದರೆ ಸುಲಭವಾಗಿ ಅಕ್ರಮ ಪತ್ತೆಹಚ್ಚಲು ಸಹಕಾರಿಯಾಗಲಿದೆ ಎಂಬುದು ಅವರಿಗೆ ಗೊತ್ತಾಗಿದೆ. ಹಾಗಾಗಿ ಎಐ ತಂತ್ರಜ್ಞಾನ ಬಳಕೆ ಮಾಡಲು ಚಿಂತಿಸಲಾಗುತ್ತಿದೆ.
ಜೈಲುಗಳಿಗೆ ಗಾಂಜಾ, ಮೊಬೈಲ್ ಸಾಗಾಣೆಯಂತಹ ಅಕ್ರಮ ಚಟುವಟಿಕೆಗಳ ಸಂಪೂರ್ಣ ಜಾಲವನ್ನು ಭೇದಿಸುವುದು ಅವರ ಮುಖ್ಯ ಗುರಿಯಾಗಿದೆ.ಕಾರಾಗೃಹಗಳ ಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅಲೋಕ್ಕುಮಾರ್ ಅವರು ಅಧಿಕಾರಿಗಳ ಸಭೆ ನಡೆಸಿ ಯಾವುದೇ ಕಾರಾಗೃಹಗಳಲ್ಲಿ ಅಕ್ರಮ ಚಟುವಟಿಕೆ ನಡೆಯಬಾರದು. ಜೈಲಿನೊಳಗೆ ಮಾದಕ ವಸ್ತುಗಳು, ಮೊಬೈಲ್ ಫೋನ್ ಹಾಗೂ ಇನ್ನಿತರ ವಸ್ತುಗಳು ಹೋಗದಂತೆ ನೋಡಿಕೊಳ್ಳಬೇಕು ಎಂದು ಖಡಕ್ ಸೂಚನೆ ನೀಡಿದ್ದರು.
ಒಂದು ವೇಳೆ ಕರ್ತವ್ಯ ಲೋಪವೆಸಗುವ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ಸಹ ನೀಡಿದ್ದರು.ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಕೈದಿಗಳು ಮತ್ತು ವಿಚಾರಣಾಧೀನ ಕೈದಿಗಳು ಅಲೋಕ್ಕುಮಾರ್ ಅವರ ಕಾರ್ಯಾಚರಣೆಯಿಂದ ಬೆಚ್ಚಿ ಬಿದ್ದಿದ್ದಾರೆ. ಸೋಮವಾರ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಭೇಟಿ ನೀಡಿದ ಅಲೋಕ್ ಕುಮಾರ್ ಅವರು ಬ್ಯಾರಕ್ಗಳು ಹಾಗೂ ಆಸ್ಪತ್ರೆ ಪರಿಶೀಲಿಸಿ ನಂತರ ಜೈಲಿನ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೆಲವು ಸಲಹೆ-ಸೂಚನೆ ನೀಡಿದ್ದರು.
