ಬೆಳಗಾವಿ,ಡಿ.19- ಮಾನಸಿಕ ಆರೋಗ್ಯ ಸಂಸ್ಥೆಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆಯ ಪರಿಭಾಷೆಯೊಳಗೆ ಸೇರಿಸಲು ಹಾಗೂ ಇತರೆ ವೈದ್ಯಕೀಯ ಸಂಸ್ಥೆಗಳ ನೊಂದಣಿಯನ್ನು ಸರಳಗೊಳಿಸುವ ಉದ್ದೇಶದಿಂದ ರೂಪಿಸಲಾದ 2025 ನೇ ಸಾಲಿನ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕಕ್ಕೆ ವಿಧಾನ ಪರಿಷತ್‌ನಲ್ಲಿ ಇಂದು ಅಂಗೀಕಾರ ದೊರಕಿತು.
ವಿಧಾನಸಭೆಯಲ್ಲಿ ಅಂಗೀಕೃತವಾಗಿದ್ದ ವಿಧೇಯಕದ ಮೇಲೆ ನಡೆದ ಪರ- ವಿರೋಧದ ಚರ್ಚೆಯ ನಡುವೆ ಖಾಸಗಿ ವೈದ್ಯಕೀಯ ಸಂಸ್ಥೆಗಳ ವ್ಯಾಪ್ತಿಯ ಒಳಗೆ ಮಾನಸಿಕ ಆರೋಗ್ಯ ಸಂಸ್ಥೆಯನ್ನೂ ಸೇರಿಸಲು ಹಾಗೂ ವೈದ್ಯಕೀಯ ಸಂಸ್ಥೆಗಳಿಗೆ ಆರು ತಿಂಗಳ ಅವಧಿಗೆ ತಾತ್ಕಾಲಿಕ ನೋಂದಣಿ ಪ್ರಮಾಣಪತ್ರ ನೀಡಲು ಅವಕಾಶ ಕಲ್ಪಿಸುವ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ 2025ಕ್ಕೆ ಮೇಲನೆ ಅನುಮೋದನೆ ನೀಡಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕವನ್ನು ಮಂಡಿಸಿದರು. ಈ ವಿಧೇಯಕದ ಮೇಲೆ ಐವಾನ್ ಡಿಸೋಜಾ, ಭೋಜೇಗೌಡ, ಸಂಕನೂರು ಸೇರಿದಂತೆ ಹಲವಾರು ಸದಸ್ಯರು ಮಾತನಾಡಿದರು.
ಬಳಿಕ ವಿವರಣೆ ನೀಡಿದ ಸಚಿವ ದಿನೇಶ್ ಗುಂಡೂರಾವ್, ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007 ಅನ್ನು ತಿದ್ದುಪಡಿ ಮಾಡಲು ಉದ್ದೇಶಿಸಿದ್ದು, ಪ್ರಸ್ತುತ ಖಾಸಗಿ ವೈದ್ಯಕೀಯ ಸಂಸ್ಥೆಗಳು ಈ ಅಧಿನಿಯಮದಡಿ ಸೇರ್ಪಡೆಗೊಂಡಿರಲಿಲ್ಲ, ಇದರಿಂದಾಗಿ ಕೆಲವು ನಿಯಮಗಳನ್ನು ಪಾಲಿಸುವುದರಲ್ಲಿ ತೊಡಕಿತ್ತು. ಹೀಗಾಗಿ ಮಾನಸಿಕ ಆರೋಗ್ಯ ಸಂಸ್ಥೆಗಳನ್ನೂ ಕೂಡ ಅಧಿನಿಯಮದಡಿ ಖಾಸಗಿ ವೈದ್ಯಕೀಯ ಸಂಸ್ಥೆಯ ಪರಿಭಾಷೆಯೊಳಗೆ ಸೇರ್ಪಡೆಗೊಳಿಸಲಾಗುತ್ತಿದೆ. ನೋಂದಣಿ ಮತ್ತು ಕುಂದುಕೊರತೆ ಪ್ರಾಧಿಕಾರಕ್ಕೆ ಭಾರತೀಯ ವೈದ್ಯಕೀಯ ಸಂಘದ ಒಬ್ಬರು ಮತ್ತು ನೋಂದಾಯಿತ ಖಾಸಗಿ ವೈದ್ಯಕೀಯ ಅಥವಾ ಆಯುಷ್ ವೈದ್ಯಕೀಯ ವೃತ್ತಿನಿರತರ ಸಂಘವನ್ನು ಪ್ರತಿನಿಧಿಸುವ ಒಬ್ಬರನ್ನು ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲು ಈ ಮಸೂದೆ ಅವಕಾಶ ಮಾಡಿಕೊಡಲಿದೆ ಎಂದರು.
ಖಾಸಗಿ ವೈದ್ಯಕೀಯ ಸಂಸ್ಥೆಗಳು ತಾತ್ಕಾಲಿಕ ನೋಂದಣಿ ಪ್ರಮಾಣಪತ್ರ ಪಡೆದ ಆರು ತಿಂಗಳ ಒಳಗೆ ಎಲ್ಲ 17 ಷರತ್ತುಗಳನ್ನು ಪೂರೈಸಿದರೆ ಮಾತ್ರ ಶಾಶ್ವತ ಪ್ರಮಾಣಪತ್ರ ನೀಡಲಾಗುವುದು. ಅವಧಿ ಮುಗಿದ ಮುಗಿದ 90 ದಿನಗಳ ಒಳಗೆ ಪ್ರಮಾಣಪತ್ರವನ್ನು ನವೀಕರಿಸಿಕೊಳ್ಳಬೇಕು. ಯಾವುದೇ ಅಪಘಾತ ಸಂಭವಿಸಿದರೆ ವೈದ್ಯಕೀಯ ವರದಿಯನ್ನು ಪೋರ್ಟಲ್‌ಗೆ ಅಪ್‌ಲೋಡ್ ಮಾಡಲು ಹಾಗೂ ಯಾವುದಾದರೂ ಅಧಿಕೃತ ಮಾನ್ಯತಾ ಸಂಸ್ಥೆಯಿಂದ ಮಾನ್ಯತಾ ಪ್ರಮಾಣಪತ್ರ ತಂದರೆ ಅರ್ಜಿ ಸಲ್ಲಿಸಿದ 10 ದಿನಗಳಲ್ಲಿ ಯಾವುದೇ ತಪಾಸಣೆ ಇಲ್ಲದೆ ನೋಂದಣಿ ಅಥವಾ ನವೀಕರಣಕ್ಕೆ ಮಂಜೂರು ಮಾಡಲು ಕೂಡಾ ಈ ತಿದ್ದುಪಡಿ ಮಸೂದೆ ಅವಕಾಶ ಮಾಡಿಕೊಡಲಿದೆ ಎಂದರು.
ಅಲ್ಲದೆ, ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಕೆಪಿಎಂಇ ಸಮಿತಿಯಡಿ ನೋಂದಣಿ ಮತ್ತು ಪರವಾನಗಿ ಪಡೆಯುವ ನಿಟ್ಟಿನಲ್ಲಿ ವಿಳಂಬವಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿದ್ದವು. ಹೀಗಾಗಿ ತಾತ್ಕಾಲಿಕ ನೋಂದಣಿ ಪ್ರಮಾಣ ಪತ್ರ ಮಂಜೂರು ಮಾಡಲು ಅಥವಾ ನವೀಕರಣ ಮಾಡುವುದೂ ಸೇರಿದಂತೆ ವಿವಿಧ ಪ್ರಕ್ರಿಯೆಗಳ ಸರಳೀಕರಣಕ್ಕಾಗಿ ಈ ಅಧಿನಿಯಮಕ್ಕೆ ತಿದ್ದುಪಡಿ ತರಲಾಗುತ್ತಿದೆ. ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ ಮತ್ತು ಕುಂದುಕೊರತೆ ಪರಿಹಾರ ಪ್ರಾಧಿಕಾರಕ್ಕೆ ನಾಮನಿರ್ದೇಶನ ಮಾಡಲು ವಿಧೇಯಕದಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.
ಖಾಸಗಿ ಕ್ಲಿನಿಕ್‌ಗಳಿಗೆ ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ನೀಡುವುದನ್ನು ಕಡ್ಡಾಯಗೊಳಿಸಿದ್ದು, ಇದರಿಂದ ಸಣ್ಣ ಪುಟ್ಟ ಖಾಸಗಿ ಕ್ಲಿನಿಕ್‌ಗಳಿಗೂ ತೊಂದರೆಯಾಗುತ್ತಿದೆ. ಇದನ್ನು ಸಡಿಲಗೊಳಿಸುವಂತೆ ಹಲವರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ಆಸ್ಪತ್ರೆ ಸೇರಿದಂತೆ ವಿವಿಧ ಬಗೆಯ ವಾಣಿಜ್ಯ ಕಟ್ಟಡಗಳಲ್ಲಿ ಅಗ್ನಿ ಆಕಸಿಕದಿಂದ ಜೀವ ಹಾನಿ ಅಥವಾ ಆಸ್ತಿ ಹಾನಿಯಾಗದಂತೆ ತಡೆಗಟ್ಟುವ ಉದ್ದೇಶದಿಂದ ಅಗ್ನಿಶಾಮಕ ಇಲಾಖೆ ಈ ನಿಯಮ ರೂಪಿಸಿದೆ. ಹೀಗಾಗಿ ನಿಯಮಗಳನ್ನು ಸಡಿಲಗೊಳಿಸುವ ಅಧಿಕಾರ ವ್ಯಾಪ್ತಿ ಆರೋಗ್ಯ ಇಲಾಖೆಗೆ ಬರುವುದಿಲ್ಲ ಎಂದರು. ಬಳಿಕ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಪರಿಷತ್‌ನಲ್ಲಿ ಅಂಗೀಕಾರ ನೀಡಲಾಯಿತು.
