ಬೆಂಗಳೂರು,ಡಿ.20- ಕೇಂದ್ರ ಗೃಹಸಚಿವ ಅಮಿತ್ ಷಾ ವಿರುದ್ದ ಸದನದಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಗ್ರಾಮೀಣಭಿವೃದ್ದಿ ಮತ್ತು ಪಂಚಾಯತ್ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೂಡಲೇ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ನಿಮ ವೈಫಲ್ಯಗಳನ್ನು, ನಿಮ ಅಸಾಮರ್ಥ್ಯವನ್ನು ಮುಚ್ಚಿಕೊಳ್ಳಲು, ಹೀಗೆ ಮತಿಭ್ರಮಣೆಗೊಂಡವರಂತೆ ಮಾತನಾಡಿದರೆ, ನಿಮನ್ನು ನಂಬಲು ಜನರೇನೂ ನಿಮಂತೆ ಕಾಮಾಲೆ ಕಣ್ಣಿನವರಲ್ಲ ಎಂದು ಮಾಡಿದ್ದಾರೆ.
ಏಕಪಕ್ಷೀಯವಾಗಿ ದ್ವೇಷ ಭಾಷಣ ತಡೆ ಕಾಯ್ದೆ ಅನುಮೋದಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರದ ಸಚಿವರಿಗೇ ತಮ ನಾಲಿಗೆಯ ಮೇಲೆ ಹಿಡಿತವಿಲ್ಲ! ಸಂಸ್ಕಾರ ಇಲ್ಲದವರಿಗೆ ಸಚಿವ ಸ್ಥಾನ ಕೊಟ್ಟರೆ ಆ ಸ್ಥಾನದ ಘನತೆ ಕಡಿಮೆಯಾದೀತೆ ಹೊರತು, ಕುಳಿತವರಿಗೆ ಅರ್ಹತೆ ಬರುವುದಿಲ್ಲ ಎನ್ನುವುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದ್ದೀರಿ. ಕೇಂದ್ರ ಗೃಹ ಸಚಿವರ ಬಗ್ಗೆ ಮಾತನಾಡುವ ಮುನ್ನ ರಾಜ್ಯದಲ್ಲಿ ಕುಸಿದಿರುವ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡಿ ಎಂದು ಒತ್ತಾಯಿಸಿದ್ದಾರೆ.
ದ್ವೇಷ ಭಾಷಣ ತಡೆ ವಿಧೇಯಕ ಹೆಸರಲ್ಲಿ ಪ್ರಜಾಪ್ರಭುತ್ವ ದ್ವೇಷಿ ಕಾಯ್ದೆ ಕುರಿತಂತೆ ವಿಧಾನ ಪರಿಷತ್ತಿನಲ್ಲಿ ಚರ್ಚೆ ನಡೆಸುತ್ತಿದ್ದ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಬಗ್ಗೆ ದ್ವೇಷ ಪೂರಿತ ಪದ ಬಳಕೆ ಮಾಡಿರುವುದು ಕಾಂಗ್ರೆಸ್ ನಾಯಕರ ಆಷಾಢಭೂತಿತನ ತೋರಿಸುತ್ತದೆ ಎಂದು ವಾಗ್ದಳಿ ನಡೆಸಿದ್ದಾರೆ.
ಅಧಿಕಾರದ ಮದ, ಪ್ರಚಾರದ ಹುಚ್ಚು ಇದೆಲ್ಲವುಗಳ ಒಟ್ಟು ಮೊತ್ತವೇ ಪ್ರಿಯಾಂಕ್ ಖರ್ಗೆ ಎಂಬಂತೆ ಸಚಿವರು ಮಾತನಾಡುತ್ತಿದ್ದಾರೆ. ಕನಿಷ್ಠ ನೀವು ಕುಳಿತಿರುವ ಸ್ಥಾನಕ್ಕಾದರೂ ಗೌರವ ತರುವಂತೆ ನಿಮ ನಡೆ ಇರಬೇಕಲ್ಲವೇ? ಭಾರತದ ಗೃಹಸಚಿವರ ಬಗ್ಗೆ, ಅವರ ಸಾಮಥ್ರ್ಯದ ಬಗ್ಗೆ ಸದನದಲ್ಲಿ ಉಲ್ಲೀಖಿಸಲು ನಿಮಗೆ ಯಾವ ಅಧಿಕಾರವಿದೆ? ಆಕಾಶಕ್ಕೆ ಮುಖ ಮಾಡಿ ಉಗಿದರೆ ಅದು ಯಾರ ಮುಖವನ್ನು ಹೊಲಸು ಮಾಡುತ್ತದೆ ಎಂಬ ಅರಿವು ನಿಮಗೆ ಇರಬೇಕಿತ್ತು ಎಂದು ಹೇಳಿದ್ದಾರೆ.
ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ, ವಿಚಾರವಿಲ್ಲದೆ ಪರರ ದೂಷಿಸುವುದಕ್ಕೆ ಚಾಚಿ ಕೊಂಡಿರುವಂತ ನಾಲಿಗೆ.ಪುರಂದರ ದಾಸರು ಹೀಗೆ ಹೇಳುವಾಗ ಬಹುಶಃ ನಮ ರಾಜ್ಯದ ಐಟಿ-ಬಿಟಿ, ಗ್ರಾಮೀಣಾಭಿವೃದ್ಧಿಯಂತಹ ಮಹತ್ವದ ಖಾತೆ ಹೊಂದಿರುವ ಪ್ರಿಯಾಂಕ ಖರ್ಗೆ ಅವರನ್ನು ನೋಡಿದ್ದರೆ ಇನ್ನೂ ಎಷ್ಟೊಂದು ಕಟುವಾದ ಶಬ್ದಗಳಲ್ಲಿ ಟೀಕಿಸುತ್ತಿದ್ದರೋ ಏನೋ? ಎಂದು ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.
