ಬೆಂಗಳೂರು,ಡಿ.31- ಪ್ರತಿ ವರ್ಷದಂತೆ ಈ ವರ್ಷವು ರಾಜ್ಯ ಸರ್ಕಾರ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಲಿದೆ. ನಾಳೆಯಿಂದ ಜಾರಿಗೆ ಬರುವಂತೆ ಮುಂಬಡ್ತಿ ನೀಡಲಾಗುತ್ತದೆ. ಇಂದು ಸಂಜೆಯೊಳಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಕುರಿತು ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ.
ಈ ಸಂದರ್ಭದಲ್ಲಿ ಆಡಳಿತಕ್ಕೆ ಅನುಕೂಲವಾಗುವಂತೆ ಕೆಲವು ವರ್ಗಾವಣೆಗಳಾಗುವ ಸಾಧ್ಯತೆ ಇದೆ. 1996ರ ಕರ್ನಾಟಕ ಬ್ಯಾಚ್‌ನ ಐಎಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ನೀಡಲಾಗುತ್ತದೆ. ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಹೆಚ್ಚುವರಿ ಕಾರ್ಯದರ್ಶಿ( ಎಸಿಎಸ್) ಹುದ್ದೆಗೆ ನಾಲ್ವರು ಐಎಎಸ್ ಅಧಿಕಾರಿಗಳು ಬಡ್ತಿ ಪಡೆಯುವ ಸಾಧ್ಯತೆಗಳಿವೆ.
2001ರ ಬ್ಯಾಚ್‌ನ ಮೂವರು ಐಎಎಸ್ ಅಧಿಕಾರಿಗಳಿಗೆ ಕಾರ್ಯದರ್ಶಿ ಹುದ್ದೆಯಿಂದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಹಾಗೂ 2010ರ ಬ್ಯಾಚ್‌ನ ಸುಮಾರು 15 ಐಎಎಸ್ ಅಧಿಕಾರಿಗಳಿಗೆ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡುವ ಸಾಧ್ಯತೆಗಳಿವೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಐಪಿಎಸ್ ಅಧಿಕಾರಿಗಳಿಗೆ ಬಡ್ತಿ:
2008ನೇ ಬ್ಯಾಚ್‌ನ ಐವರು ಐಪಿಎಸ್ ಅಧಿಕಾರಿಗಳು ಡಿಐಜಿ ಹುದ್ದೆಯಿಂದ ಐಜಿ ಹುದ್ದೆಗೆ ಬಡ್ತಿ ಪಡೆಯಲು ಅರ್ಹರಾಗಿದ್ದು, ಈ ಬ್ಯಾಚ್‌ನಲ್ಲಿ ಐವರು ಅಧಿಕಾರಿಗಳಿದ್ದಾರೆ. ಇವರಲ್ಲಿ ಮೂವರು ಕೇಂದ್ರ ಸರ್ಕಾರದ ಸೇವೆಯಲ್ಲಿದ್ದಾರೆ. ಇಬ್ಬರು ಅಧಿಕಾರಿಗಳಿಗೆ ಬಡ್ತಿ ನೀಡುವ ಸಾಧ್ಯತೆ ಹೆಚ್ಚಿದೆ.
2012ನೇ ಬ್ಯಾಚ್‌ನ ಸುಮಾರು 24 ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡುವ ಸಾಧ್ಯತೆ ಹೆಚ್ಚಾಗಿದೆ. ಎಸ್‌ಪಿ ಹುದ್ದೆಯಿಂದ ಡಿಐಜಿ ಹುದ್ದೆಗೆ ಮುಂಬಡ್ತಿ ನೀಡಿ ಸರ್ಕಾರ ಆದೇಶ ಹೊರಡಿಸುವ ಸಾಧ್ಯತೆಗಳಿವೆ.
