ಬೆಂಗಳೂರು,ಡಿ.30- ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿರುವ ನಗರದ ಕೋಗಿಲು ಲೇಔಟ್‌ನಲ್ಲಿ ವಲಸಿಗರ ಮನೆ ನಿರ್ಮಾಣ ತೆರವುಗೊಳಿಸಿದ ಬೆನ್ನಲ್ಲೇ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ನಡೆಸಲಾಯಿತು. ಯಲಹಂಕ ಉತ್ತರ ವಲಯದ ಜಂಟಿ ಆಯುಕ್ತ ಮೊಹಮದ್ ನಹೀಮ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಜೀವ್ ಗಾಂಧಿ ವಸತಿ ಯೋಜನೆ ಅಧಿಕಾರಿಗಳು, ಬೆಂಗಳೂರು ಉತ್ತರ ಪಾಲಿಕೆ ಅಧಿಕಾರಿಗಳು, ಜಿಲ್ಲಾಡಳಿತದಿಂದ ದಾಖಲೆ ಪರಿಶೀಲನೆ ನಡೆದಿದ್ದು, ಯಲಹಂಕ ತಹಶೀಲ್ದಾರ್ ಶ್ರೇಯಸ್ ರಾಜೀವ್ ಗಾಂಧಿ ವಸತಿ ನಿಗಮ ಡೈರೆಕ್ಟರ್ ಪರಶುರಾಮ್ ಸ್ಥಳಕ್ಕೆ ಭೇಟಿ ನೀಡಿದ್ದರು.
ಯಾರ ಬಳಿ ಕರ್ನಾಟಕದವರು ಅನ್ನೋದಕ್ಕೆ ದಾಖಲೆ ಇರುತ್ತೆ ಅಂತಹವರಿಗೆ ಮಾತ್ರ ರಾಜೀವ್ ಗಾಂಧಿ ಯೋಜನೆಯಡಿ ಮನೆ ಲಭ್ಯವಾಗಲಿದೆ. ಸದ್ಯ ಸ್ಥಳದಲ್ಲಿ 3 ಟೀಮ್ ದಾಖಲೆ ಪರಿಶೀಲನೆ ನಡೆಸಿದ್ದಾರೆ.ಎರಡು ದಿನದಲ್ಲಿ ಸ್ಥಳಕ್ಕೆ ಭೇಟಿ ಕೊಟ್ಟು ಸಮೀಕ್ಷೆ ನಡೆಸಿ ವರದಿ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ಕೊಟ್ಟ ಬೆನ್ನಲ್ಲೇ ವಿವಿಧ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಸತಿ ಇಲಾಖೆಯಡಿ ನಿರ್ಗತಿಕರಿಗೆ ಮನೆ ಕಟ್ಟಿಸಿಕೊಡುವುದಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖಚಿತಪಡಿಸಿದ್ದಾರೆ. ಹೀಗಾಗಿ ಕೋಗಿಲು ಲೇಔಟ್‌ನಲ್ಲಿ ಜಿಬಿಎ ಮತ್ತು ಜಿಲ್ಲಾಡಳಿತದಿಂದ ಸರ್ವೆ ನಡೆಸಿದೆ. ನಿರಾಶ್ರಿತರಿಂದ ದಾಖಲಾತಿ ಸಂಗ್ರಹ ಕಾರ್ಯ ನಡೆಸಲಾಯಿತು.
ಈ ಪ್ರದೇಶಕ್ಕೆ ನೀವು ಯಾವಾಗ ಬಂದಿದ್ದೀರಿ?, ಇಲ್ಲಿ ಮನೆ ನಿರ್ಮಾಣ ಮಾಡಲು ಅವಕಾಶ ಕೊಟ್ಟ ಸ್ಥಳೀಯ ಆಡಳಿತ ಯಾವುದು?, ನಿಮ ಬಳಿ ಯಾರಾದರೂ ಖಾಯಂ ನಿವಾಸ ಪತ್ರ ನೀಡುತ್ತೇನೆಂದು ಹಣ ಪಡೆದಿದ್ದರೇ?, ಆಧಾರ್ ಕಾರ್ಡ್ , ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಕೊಟ್ಟವರು ಯಾರು?, ಇದಕ್ಕೆ ಸಲ್ಲಿಸಿದ ಸಾಕ್ಷ್ಯಾಧಾರಗಳು ಏನು? ಎಂಬುದೂ ಸೇರಿದಂತೆ ಅಧಿಕಾರಿಗಳ ತಂಡ ಸಂತ್ರಸ್ತರಿಂದ ಮಾಹಿತಿ ಪಡೆದುಕೊಂಡಿತು. ಮನೆ ನೀಡಲು ನಿರಾಶ್ರಿತರಿಂದ ದಾಖಲಾತಿ ಸಂಗ್ರಹ ಕಾರ್ಯ ನಡೆಸಲಾಯಿತು. ರಾಜೀವ್ ಗಾಂಧಿ ವಸತಿ ಯೋಜನೆ ಅಧಿಕಾರಿಗಳಿಂದ ಕೂಡ ದಾಖಲಾತಿ ಸಂಗ್ರಹವಾಗಿದೆ. ಮೂರು ಇಲಾಖೆಯ ಅಧಿಕಾರಿಗಳಿಂದ ಪರಿಶೀಲನೆ ಕಾರ್ಯ ನಡೆಸಿದರು. ರಾಜೀವ್ ಗಾಂಧಿ ಮತ್ತು ಒಂಟಿ ಮನೆ ಯೋಜನೆ ಅಡಿ ಸೌಲಭ್ಯ ನೀಡಲು ದಾಖಲಾತಿ ಸಂಗ್ರಹ ಕಾರ್ಯ ನಡೆಸಿದರು.
ಪ್ರತಿ ಮನೆಯಿಂದ ಐದು ದಾಖಲೆಗಳನ್ನು ಪರಿಶೀಲನೆ ನಡೆಸಿದ ಅಧಿಕಾರಿಗಳು ಗುರುತಿನ ಚೀಟಿ, ಕರೆಂಟ್ ಬಿಲ್, ಆಧಾರ್ ಕಾರ್ಡ್, ತಾತ್ಕಾಲಿಕ ಆದೇಶ ಪ್ರತಿ, ರೇಷನ್ ಕಾರ್ಡ್ ಗಳ ಇಂಚಿಂಚು ಮಾಹಿತಿ ಪಡೆದುಕೊಂಡರು.
ಕರ್ನಾಟಕದವರಿಗೆ ಮಾತ್ರ ಮನೆ : ಕೋಗಿಲು ಲೇಔಟ್‌ನಲ್ಲಿ ಒತ್ತುವರಿ ತೆರವಾದ ಅಷ್ಟೂ ಕುಟುಂಬಗಳಿಗೆ ವಸತಿ ಭಾಗ್ಯ ಸಿಗಲ್ಲ, ಜಿಬಿಎ ಇಂದ 167 ಮನೆಗಳ ತೆರವು ಆಗಿತ್ತು. ಆದರೆ ಈ ಸ್ಥಳದಲ್ಲಿ 200ಕ್ಕಿಂತ ಅಧಿಕ ಕುಟುಂಬಗಳು ಜಾಗ ಒತ್ತುವರಿ ಮಾಡಿವೆ. ಸದ್ಯ ಮಾನವೀಯತೆ ಆಧಾರದ ಮೇಲೆ ಮಾತ್ರ ಮನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹೀಗಾಗಿ ಸ್ಥಳೀಯರಿಗೆ ಮಾತ್ರ ಯೋಜನೆಯಡಿ ಮನೆ ಲಭ್ಯವಾಗಲಿದೆ.
ಯಲಹಂಕ ವಿಧಾನಸಭಾ ಕ್ಷೇತ್ರದ ಕೋಗಿಲು ಲೇಔಟ್ ಹಾಗೂ ಫಕೀರ್ ಕಾಲೋನಿಯಲ್ಲಿ ನೂರಾರು ಮನೆಗಳನ್ನು ಧ್ವಂಸಗೊಳಿಸಿ ಮತ್ತೆ ಸರ್ಕಾರವೇ ಪರಿಹಾರ ಘೋಷಿಸಿದ ವಿಚಾರ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
