ಬೆಳಗಾವಿ,ಡಿ.13- ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು, ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು, ನಗರ ಪುನರ್ವಸತಿ ಕಾರ್ಯಕರ್ತರ ಗೌರವಧನವನ್ನು ಕನಿಷ್ಠ ವೇತನ ಕಾಯ್ದೆಯಡಿ ತರುವ ಪ್ರಸ್ತಾವನೆಯನ್ನು ಕಾರ್ಮಿಕ ಇಲಾಖೆ ಅಭಿಪ್ರಾಯ ಪಡೆಯಲು ಸಲ್ಲಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಯಕರ ಸಬಲೀಕರಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ವಿಧಾನಸಭೆಗೆ ತಿಳಿಸಿದ್ದಾರೆ.
ಶಾಸಕ ಎಸ್.ಸುರೇಶ್‌ಕುಮಾರ್ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿರುವ ಸಚಿವರು, ಗ್ರಾಮೀಣ ಪುರ್ನವಸತಿ ಯೋಜನೆಯಡಿ ತಾಲ್ಲೂಕು ಪಂಚಾಯ್ತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 176 ವಿವಿದ್ಧೋದ್ದೇಶ ಕಾರ್ಯಕರ್ತರಿಗೆ 16 ಸಾವಿರ ರೂ. ಗೌರವಧನ ನೀಡಲಾಗುತ್ತಿದೆ ಎಂದಿದ್ದಾರೆ.
6,022 ಗ್ರಾಮಪಂಚಾಯ್ತಿಗಳಲ್ಲಿನ ಗ್ರಾಮೀಣ ಪುರ್ನವಸತಿ ಕಾರ್ಯಕರ್ತರಿಗೆ 10 ಸಾವಿರ ರೂ. ಹಾಗೂ 613 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಗರ ಪುರ್ನವಸತಿ ಕಾರ್ಯಕರ್ತರಿಗೆ 10 ಸಾವಿರ ರೂ. ಗೌರವಧನ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
