ಬೆಂಗಳೂರು, ಜ. 9- ಅಂತೂ ಇಂತೂ ಜಿಬಿಎ ಚುನಾವಣೆಗೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದೆ. ಕಳೆದ ಹತ್ತು ವರ್ಷಗಳ ಹಿಂದೆ ಚುನಾವಣೆ ನಡೆದಿದ್ದ ಬಿಬಿಎಂಪಿಯನ್ನು ರದ್ದುಗೊಳಿಸಿ ಜಿಬಿಎ ರಚನೆ ಮಾಡಿದ್ದರೂ ಇದುವರೆಗೂ ಚುನಾವಣೆ ನಡೆದಿರಲಿಲ್ಲ.198 ವಾರ್ಡ್‌ಗಳಿದ್ದ ಬಿಬಿಎಂಪಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನಾಗಿ ರಚನೆ ಮಾಡಿರುವ ರಾಜ್ಯ ಸರ್ಕಾರ ಜಿಬಿಎ ಅಡಿಯಲ್ಲಿ ಐದು ನಗರ ಪಾಲಿಕೆಗಳನ್ನು ರಚನೆ ಮಾಡಿ ಅವುಗಳಿಗೆ ಪ್ರತ್ಯೇಕ ಆಯುಕ್ತರನ್ನು ನೇಮಕ ಮಾಡಿದೆ.
ಐದು ನಗರ ಪಾಲಿಕೆಗಳನ್ನು 369 ವಾರ್ಡ್‌ಗಳನ್ನಾಗಿ ವಿಂಗಡಿಸಿ ಚುನಾವಣೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ 25 ರಿಂದ 30 ಸಾವಿರ ಮತದಾರರನ್ನು ಒಳಗೊಂಡ ಒಂದೊಂದು ವಾರ್ಡ್‌ಗಳನ್ನು ರಚನೆ ಮಾಡಿ ವಾರ್ಡ್ ಪುನರ್‌ವಿಂಗಡಣೆ ಮಾಡಲಾಗಿದೆ. ಇದೀಗ ವಾರ್ಡ್‌ಗಳ ಮೀಸಲಾತಿ ಕೂಡ ಪ್ರಕಟವಾಗಿರುವುದರಿಂದ ಜಿಬಿಎ ಚುನಾವಣೆಗೆ ಕಾಲ ಸನ್ನಿಹಿತವಾಗುತ್ತಿದೆ.
ಜಿಬಿಎ ಚುನಾವಣೆಗೆ ರಾಜ್ಯ ಸರ್ಕಾರ ಜ.9ರೊಳಗೆ ಮೀಸಲಾತಿ ಪ್ರಕಟಿಸಿ ಅದನ್ನು ನ್ಯಾಯಾಲಯಕ್ಕೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಪೀಠ ಸೂಚನೆ ನೀಡಿ ವಿಚಾರಣೆಯನ್ನು ಜ.12ಕ್ಕೆ ಮುಂದೂಡಿತ್ತು.ನ್ಯಾಯಾಲಯದ ಸೂಚನೆಯಂತೆ ಇದೀಗ ಮೀಸಲಾತಿ ಪಟ್ಟಿ ಪ್ರಕಟವಾಗಿರುವುದರಿಂದ ಜ.12 ರಂದು ವಿಚಾರಣೆ ನಡೆಸಲಿರುವ ನ್ಯಾಯ ಪೀಠ ಜಿಬಿಎ ಚುನಾವಣೆಗೆ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ.
ಮೀಸಲಾತಿ ಪಟ್ಟಿ ನಮಗೆ ಸಿಕ್ಕ ನಂತರ ಚುನಾವಣಾ ತಯಾರಿಗೆ ಮೂರು ತಿಂಗಳ ಕಾಲಾವಕಾಶ ಬೇಕು ಎಂದು ಚುನಾವಣಾ ಆಯೋಗ ಈ ಹಿಂದೆಯೇ ತಿಳಿಸಿರುವುದರಿಂದ ಸುಪ್ರೀಂ ಸೂಚನೆ ಪ್ರಕಾರ ಮೇ ಅಥವಾ ಜೂನ್ ತಿಂಗಳಿನಲ್ಲಿ ಜಿಬಿಎ ವ್ಯಾಪ್ತಿಯ ಐದು ನಗರಪಾಲಿಕೆಗಳಿಗೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ.
ಮೀಸಲಾತಿ ಪಟ್ಟಿ; ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ, 2024ರ ಸೆಕ್ಷನ್ 29ರಡಿ ನೀಡಲಾದ ಅಧಿಕಾರವನ್ನು ಚಲಾಯಿಸಿ, ಹೊಸದಾಗಿ ಸ್ಥಾಪಿಸಲಾದ ಐದು ನಗರ ಪಾಲಿಕೆಗಳಿಗೆ 2011 ರ ಜನಗಣತಿಯ ಆಧಾರದ ಮೇಲೆ ಕರಡು ವಾರ್ಡ್‌ವಾರು ಮೀಸಲಾತಿ ಪಟ್ಟಿ ಪ್ರಕಟಿಸಲಾಗಿದೆ.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಎ ಮತ್ತು ಹಿಂದುಳಿದ ವರ್ಗಬಿ ಮತ್ತು ಸಾಮಾನ್ಯ ಮಹಿಳೆಯರಿಗೇ ಶೇ.50 ರ ಅನುಪಾತ ಹಾಗೂ ಸಾಮಾನ್ಯ ವರ್ಗಗಳಿಗೆ ಅನುಗುಣವಾಗಿ ಆಯಾ ಪಾಲಿಕೆಗಳ ಮೀಸಲಾತಿ ನಿಗದಿಪಡಿಸಲಾಗಿದೆ.
ಐದು ಪಾಲಿಕೆಗಳ ವಾರ್ಡ್‌ವಾರು ಮೀಸಲಾತಿಯಿಂದ ಅಸಮಾಧಾನಗೊಂಡ ವ್ಯಕ್ತಿಗಳು ತಮ್ಮ ಆಕ್ಷೇಪಣೆಗಳನ್ನು 15 (ಹದಿನೈದು) ದಿನಗಳಲ್ಲಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅವಧಿಯೊಳಗೆ ಸ್ವೀಕರಿಸಿದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಪರಿಗಣಿಸಿ ಅಂತಿಮ ಮೀಸಲಾತಿ ಪಟ್ಟಿ ತಯಾರಾಗಲಿದೆ.
ಗರಿಗೆದರದ ಚಟುವಟಿಕೆ; ಬರುವ ಏಪ್ರಿಲ್ ಇಲ್ಲವೇ ಮೇ ತಿಂಗಳಿನಲ್ಲಿ ಜಿಬಿಎ ಚುನಾವಣೆ ನಡೆಯುವುದು ಬಹುತೇಕ ಖಚಿತ ಎನ್ನುವುದು ತಿಳಿದಿದ್ದರೂ ಕೆಲವು ಆಕಾಂಕ್ಷಿಗಳು ಮೀಸಲಾತಿ ಪಟ್ಟಿ ಪ್ರಕಟವಾಗದೆ ಆಖಾಡಕ್ಕೆ ಇಳಿಯೋದು ಬೇಡ ಎಂದು ಸುಮನಿದ್ದರು. ಇದೀಗ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಆಯಾ ವಾರ್ಡ್‌ಗಳ ಮೀಸಲಾತಿಗೆ ಒಳಪಡುವ ಅಭ್ಯರ್ಥಿಗಳು ತಮ ಗಾಢ್‌ಪಾಧರ್‌ಗಳ ಮೂಲಕ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಲು ಮುಗಿ ಬೀಳುತ್ತಿದ್ದಾರೆ.




