ಬೆಂಗಳೂರು, ಡಿ.12– ನಗರದ ರಸ್ತೆಗುಂಡಿಗಳನ್ನು ಮುಚ್ಚಲು ಸಾಧ್ಯವಾಗದೇ ಪರದಾಡುತ್ತಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಇದೀಗ ರಸ್ತೆಗಳ ನಿರ್ವಹಣೆಯನ್ನೇ ಖಾಸಗಿ ಸಂಸ್ಥೆಗಳಿಗೆ ವಹಿಸಲು ಮುಂದಾಗಿದೆ.
ಅದರಲ್ಲೂ ನಗರದ ಪ್ರಮುಖ ರಸ್ತೆಗಳಾದ ಎಂಜಿ ರೋಡ್, ಬ್ರಿಗೇಡ್ ರೋಡ್ನಂತಹ ರಸ್ತೆಗಳನ್ನೇ ಖಾಸಗಿ ನಿರ್ವಹಣೆಗೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಬ್ರ್ಯಾಂಡ್ ಬೆಂಗಳೂರು ಮಾಡುತ್ತೇವೆ ಎಂದು ಬೊಬ್ಬೆ ಹೊಡೆಯುವ ಸರ್ಕಾರದವರು ನಗರದ ರಸ್ತೆಗಳನ್ನು ನಿರ್ವಹಿಸಲು ಸಾಧ್ಯವಿಲ್ಲದಿದ್ದರೆ ಗ್ರೇಟರ್ ಬೆಂಗಳೂರು ಏಕೆ ರಚನೆ ಮಾಡಬೇಕಿತ್ತು ಎಂದು ಪ್ರಜ್ಞಾವಂತ ನಾಗರೀಕರು ಪ್ರಶ್ನಿಸುತ್ತಿದ್ದಾರೆ.
ನಗರದ ಪ್ರಮುಖ ರಸ್ತೆಗಳ ನಿರ್ವಹಣೆ ಜವಾಬ್ದಾರಿಯನ್ನು ಖಾಸಗಿ ಕಂಪನಿಯವರಿಗೆ ವಹಿಸಿ ರಸ್ತೆಗಳ ಅಭಿವೃದ್ಧಿ ಮಾಡಲು ನಿರ್ಧರಿಸಲಾಗಿದೆ. ಮೊದಲಿಗೆ ಎಂಜಿ ರೋಡ್, ಬ್ರಿಗೇಡ್ ರೋಡ್ನ ಹೊಣೆ ನೀಡಲು ತೀರ್ಮಾನಿಸಲಾಗಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಒಂದು ವೇಳೆ ನಗರದ ರಸ್ತೆಗಳನ್ನು ಖಾಸಗಿಯವರಿಗೆ ನೀಡಿದರೆ ರಸ್ತೆಗಳಲ್ಲಿ ಓಡಾಡಲು ದುಡ್ಡು ನೀಡಬೇಕಾದಂತಹ ಪರಿಸ್ಥಿತಿ ಬಂದರೂ ಅಚ್ಚರಿಪಡಬೇಕಿಲ್ಲ.
