ಬೆಳಗಾವಿ,ಡಿ.18- ಬಿಪಿಎಲ್ ಕಾರ್ಡ್ ಪಡೆಯಲು ಅರ್ಹತಾ ಮಾನದಂಡದ ಪ್ರಕಾರ ನಿಗದಿಯಾಗಿರುವ 1.20 ಲಕ್ಷ ರೂಪಾಯಿಗಳ ಆದಾಯದ ಮಿತಿಯನ್ನು ಹೆಚ್ಚಳ ಮಾಡುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ಮಾಡುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ ಭರವಸೆ ನೀಡಿದ್ದಾರೆ.
ವಿಧಾನಸಭೆಯಲ್ಲಿಂದು ಪ್ರಶ್ನೋತ್ತರದ ಅವಧಿಯಲ್ಲಿ ಬಂಟವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯಕ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಪ್ರಸ್ತುತ ದಿನಮಾನಗಳಲ್ಲಿ ದಿನದ ಕೂಲಿಯೇ 500 ರೂಪಾಯಿಗಳಿದೆ. ಇದನ್ನು ಒಟ್ಟು ಲೆಕ್ಕ ಹಾಕಿದರೆ ವಾರ್ಷಿಕ ಆದಾಯ 1.80 ಲಕ್ಷ ರೂಪಾಯಿಗಳಾಗಲಿದೆ. ಬಿಪಿಎಲ್ ಗೆ 1.20 ಲಕ್ಷ ರೂಪಾಯಿಗಳ ಆದಾಯ ಮಿತಿ ಇದೆ. ಇದಕ್ಕಿಂತ ಮೇಲ್ಪಟ್ಟ ಆದಾಯ ಇರುವ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ನೀಡುವಂತಿಲ್ಲ ಎಂದರು.
ಈ ಮಾನದಂಡದಿಂದ ಅರ್ಹತೆ ಹೊಂದಿದ್ದರೂ ಕೂಡ ಬಹಳಷ್ಟು ಕುಟುಂಬಗಳು ಬಿಪಿಎಲ್ ಸೌಲಭ್ಯದಿಂದ ವಂಚಿತವಾಗುತ್ತಿವೆ. ಇದನ್ನು ಪರಿಷ್ಕರಣೆ ಮಾಡುವ ಅಗತ್ಯ ಇದೆ ಎಂದು ಹೇಳಿದರು.
7.5 ಎಕರೆ ಜಮೀನು ಹೊಂದಿರುವವರು, ನಿರಂತರವಾಗಿ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು ಮತ್ತು ನಾಮನಿರ್ದೇಶಿತ ನಿರ್ದೇಶಕರನ್ನು ಹೊರತುಪಡಿಸಿ ಉಳಿದಂತೆ, ಬಿಪಿಎಲ್ ಕಾರ್ಡ್ ನಿಂದ ಎಪಿಎಲ್ ಗೆ ಪರಿವರ್ತನೆಯಾಗಿರುವ 5 ಲಕ್ಷ ಕಾರ್ಡ್‌ಗಳನ್ನು ಪುನರ್ ಪರಿಶೀಲಿಸಲು ನಿನ್ನೆ ನಡೆದ ಅಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಿದ್ದೇನೆ.
ಪುನರ್ ಪರಿಶೀಲನೆಯಾಗುವವರೆಗೂ ಬಿಪಿಎಲ್ ಕಾರ್ಡ್ ರದ್ದತಿಯ ವಿಚಾರವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ತಾಳೆಯಿಂದಿರುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದೇನೆ ಎಂದರು. ಕುಟುಂಬದಲ್ಲಿ ಒಬ್ಬರು ಕೆಲಸದಲ್ಲಿ ಇರುತ್ತಾರೆ. ಆದರೆ ಅವರು ಬೇರೆ ಕಡೆ ವಾಸ ಇರಬಹುದು. ಇಂಥ ಸಂದರ್ಭಗಳಲ್ಲಿ ತಂದೆ ತಾಯಿಗಳಿಗೆ ಆದಾಯ ಇರುವುದಿಲ್ಲ. ಕುಟುಂಬದ ನಿರ್ವಹಣೆ ಕಷ್ಟವಾಗುತ್ತದೆ. ಇಂತಹ ನೈಜ ಪ್ರಕರಣಗಳಲ್ಲಿ ಪುನರ್ ಪರಿಶೀಲನೆಗೆ ಫಲಾನುಭವಿಗಳು ಅರ್ಜಿ ಸಲ್ಲಿಸಿದರೆ 15 ದಿನಗಳಲ್ಲಿ ಪರಿಶೀಲನೆ ನಡೆಸಿ ಬಿಪಿಎಲ್ ಕಾರ್ಡನ್ನು ನೀಡುವುದಾಗಿ ಭರವಸೆ ನೀಡಿದರು.
ಕೇಂದ್ರ ಸರ್ಕಾರ ಸಮೀಕ್ಷೆ ನಡೆಸಿ 7,76,602 ಬಿಪಿಎಲ್ ಕಾರ್ಡ್‌ಳನ್ನು ಎಪಿಎಲ್ ಗಳೆಂದು ಪರಿವರ್ತಿಸಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಶೇ.73.3ರಷ್ಟು ಬಿಪಿಎಲ್ ಕಾರ್ಡ್‌ಗಳಿವೆ. ಕರ್ನಾಟಕದ ಏಳು ಕೋಟಿ ಜನರಲ್ಲಿ 4.53 ಕೋಟಿ ಜನ ಬಿಪಿಎಲ್ ಪಟ್ಟಿಯಲ್ಲಿದ್ದಾರೆ.1.25 ಕೋಟಿ ಬಿಪಿಎಲ್ ಕಾರ್ಡ್‌ಗಳಿವೆ. ಕರ್ನಾಟಕ ದೇಶದಲ್ಲೇ ಜಿ ಎಸ್ ಟಿ ತೆರಿಗೆ ಪಾವತಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಸಾಮಾನ್ಯವಾಗಿ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇ. 50ರಷ್ಟು ಮೀರಬಾರದು. ನಮಲ್ಲಿ ಅದನ್ನು ಮೀರಿ ಬಿಪಿಎಲ್ ಕಾರ್ಡ್‌ಗಳಿವೆ ಎಂದರು.
ಕೆಲವರು ಸಾಲ ಪಡೆಯಲು ಆದಾಯ ತೆರಿಗೆ ಪಾವತಿಯ ಪ್ರಮಾಣವನ್ನು ಹೆಚ್ಚಳ ಮಾಡಿರುತ್ತಾರೆ. ಅಂತಹ ಪ್ರಕರಣದಲ್ಲೂ ಪರಿಶೀಲನೆ ನಡೆಸಲಾಗುವುದು. ಅರ್ಹ ಫಲಾನುಭವಿಗಳು ಬಿಪಿಎಲ್ ಸೌಲಭ್ಯದಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಲಾಗುವುದು. ಅರ್ಹರು ತಹಸೀಲ್ದಾರರಿಗೆ ಅರ್ಜಿ ನೀಡಿದರೆ 15 ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಶ್ರವಣಬೆಳಗೊಳ ಕ್ಷೇತ್ರದ ಸಿ.ಎನ್.ಬಾಲಕೃಷ್ಣ ಪ್ರಶ್ನೆ ಕೇಳಿ, ತಮ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 920 ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಆಗಿ ಪರಿವರ್ತಿಸಲಾಗಿದೆ. ಅರ್ಹ ಫಲಾನುಭವಿಗಳನ್ನು ತುರ್ತಾಗಿ ಮರು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಕೂಲಿ ಮಾಡುವವರು ಸಣ್ಣ ಪ್ರಮಾಣದ ಕಾರು ಇಟ್ಟುಕೊಂಡಿರುತ್ತಾರೆ. ನಾಲ್ಕು ಚಕ್ರದ ವಾಹನ ಇದೆ ಎಂಬ ಕಾರಣಕ್ಕೆ ಬಿಪಿಎಲ್ ಕಾರ್ಡ್ ರದ್ದು ಮಾಡುವುದು ಸರಿಯಲ್ಲ ಎಂದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷರು, ಕಡಿಮೆ ಬೆಲೆಗೆ ಕಾರು ಖರೀದಿಸಿದ್ದರೂ, ಅದಕ್ಕೆ ಪೆಟ್ರೋಲ್, ಡೀಸೆಲ್, ಅನಿಲ ಸೇರಿದಂತೆ ನಾನಾ ರೀತಿಯ ಖರ್ಚುಗಳು ಇರುತ್ತವೆ. ಅದನ್ನೆಲ್ಲ ನಿಭಾಯಿಸಲು, ಶಕ್ತಿ ಇರುವುದಾದರೆ ಕುಟುಂಬಕ್ಕೆ ಅಕ್ಕಿ ಖರೀದಿಸಲು ಸಾಧ್ಯವಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಸಚಿವ ಕೆ.ಹೆಚ್.ಮುನಿಯಪ್ಪ ಪ್ರತಿಕ್ರಿಯಿಸಿ, ಮಾನದಂಡಗಳ ಅನುಸಾರ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಗಳನ್ನಾಗಿ ಪರಿವರ್ತಿಸಲಾಗಿದೆ. ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿದರೆ 15 ದಿನಗಳಲ್ಲಿ ಮತ್ತೆ ಬಿಪಿಎಲ್ ನೀಡುತ್ತೇವೆ ಎಂದು ಪುನರುಚ್ಚರಿಸಿದರು.
