ಬೆಂಗಳೂರು,ಡಿ.20- ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಶೇ.60 ರಷ್ಟು ಸಹಾಯಧನವನ್ನು ನುಗ್ಗೆ ಬೆಳೆಯಲು ನೀಡಲಾಗುತ್ತದೆ ಎಂದು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಶಾಸಕ ಡಾ.ಅವಿನಾಶ್ ಉಮೇಶ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಒಂದು ಹೆಕ್ಟೇರ್ ಪ್ರದೇಶದಲ್ಲಿ ನುಗ್ಗೆ ಬೆಳೆಯಲು 60 ಸಾವಿರ ರೂ. ವೆಚ್ಚವಾಗಲಿದ್ದು, ಶೇ.40ರಂತೆ 24 ಸಾವಿರ ರೂ. ಸಹಾಯಧನವನ್ನು ನೀಡಲಾಗುತ್ತಿದೆ. ಅರ್ಹ ಫಲಾನುಭವಿಗಳು 2 ಹೆಕ್ಟೇರ್‌ವರೆಗೂ ಸಹಾಯಧನ ಪಡೆಯಬಹುದು ಎಂದು ಹೇಳಿದ್ದಾರೆ.
ಮಹಾತಗಾಂಧಿ ನರೇಗಾ ಯೋಜನೆಯಡಿ 1 ಹೆಕ್ಟೇರ್ ನುಗ್ಗೆ ಬೆಳೆ ಪ್ರದೇಶದ ವಿಸ್ತರಣೆಗೆ 48,889 ರೂ. ಕೂಲಿ ವೆಚ್ಚ ಹಾಗೂ 11,760 ಸಾಮಗ್ರಿ ವೆಚ್ಚ ಸೇರಿ 60,649 ರೂ.ಗಳ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದ್ದಾರೆ.
ತೋಟಗಾರಿಕಾ ಇಲಾಖೆ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ನುಗ್ಗೆ ಸಸಿಗಳನ್ನು ಸಸ್ಯೋತ್ಪಾದನೆ ಮಾಡಿ ಯೋಗ್ಯದರದಲ್ಲಿ ರೈತರಿಗೆ ನೀಡಲಾಗುತ್ತಿದೆ. ಅರಣ್ಯ ಬೆಳೆಗಳೊಂದಿಗೆ ನುಗ್ಗೆಯನ್ನು ಮಿಶ್ರ ಬೆಳೆಯಾಗಿ ಬೆಳೆಯುವ ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಸಹಾಯಧನ ನೀಡಲು ಅವಕಾಶವಿಲ್ಲ. ಆದರೆ ಏಕರೂಪದ ಬೆಳೆ ಅಥವಾ ತೋಟಗಾರಿಕೆ ಬೆಳೆಗಳಲ್ಲಿ ಮಿಶ್ರ ಬೆಳೆಯಾಗಿ ನುಗ್ಗೆ ಬೆಳೆದರೆ ಸಹಾಯಧನ ಪಡೆಯಬಹುದಾಗಿದೆ ಎಂದು ಅವರು ಹೇಳಿದ್ದಾರೆ.
