ಬೆಂಗಳೂರು,ಡಿ.25- ಚಿತ್ರದುರ್ಗದ ಹಿರಿಯೂರು ಬಳಿ ಇಂದು ಬೆಳಗಿನ ಜಾವ ಸಂಭವಿಸಿದ ರಸ್ತೆ ಅಪಘಾತದ ಮಾರ್ಗದಲ್ಲಿ ಶಾಲಾ ಮಕ್ಕಳು ಪ್ರಯಾಣಿಸುತ್ತಿದ್ದ ಪ್ರವಾಸದ ಬಸ್ ಕೂದಲೆಳೆಯ ಅಂತರದಿಂದ ಪಾರಾಗಿದೆ.ಟಿ ದಾಸರಹಳ್ಳಿಯ ಶಾಲೆಯೊಂದರ 42 ಮಕ್ಕಳನ್ನು ದಾಂಡೇಲಿಗೆ ಪ್ರವಾಸಕ್ಕಾಗಿ ಬಸ್‌ನಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು.
ರಾಷ್ಟ್ರೀಯ ಹೆದ್ದಾರಿ 48ರ ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿ ಇಂದು ಬೆಳಗಿನ ಜಾವ ಗೋಕರ್ಣಕ್ಕೆ ಹೋಗುತ್ತಿದ್ದ ಸೀಬರ್ಡ್ ಖಾಸಗಿ ಬಸ್ ಪಕ್ಕದಲ್ಲೇ ಸಮನಾಂತರದಲ್ಲಿ ಈ ಶಾಲಾ ಪ್ರವಾಸಿ ಬಸ್ ಹೋಗುತ್ತಿತ್ತು. ಖಾಸಗಿ ಬಸ್‌ಗೆ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಬಸ್ ನಿಯಂತ್ರಣ ಕಳೆದುಕೊಂಡು ಶಾಲಾ ಪ್ರವಾಸಿ ಬಸ್‌ಗೆ ತಾಗಿದೆ. ಈ ಬಸ್ ಚಾಲಕನ ಸಮಯಪ್ರಜ್ಞೆಯಿಂದ ಬಸ್‌ನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಸ್ವಲ್ಪ ಮುಂದೆ ಹೋಗಿ ಚರಂಡಿ ಸಮೀಪ ನಿಲ್ಲಿಸುವ ಮೂಲಕ ಶಾಲಾ ಮಕ್ಕಳ ಪ್ರಾಣ ಉಳಿಸಿ ನಿಟ್ಟುಸಿರು ಬಿಟ್ಟಿದ್ದಾರೆ.
ನಂತರ ಈ ವಿಷಯವನ್ನು ತಿಳಿಸಿ ಬೇರೆ ಬಸ್‌ನ್ನು ಸ್ಥಳಕ್ಕೆ ಕರೆಸಿಕೊಂಡು ಶಾಲಾ ಮಕ್ಕಳನ್ನು ಆ ಬಸ್‌ನಲ್ಲಿ ಕಳುಹಿಸಿದ್ದು, ಮಕ್ಕಳು ತಮ ಪ್ರವಾಸ ಮುಂದುವರೆಸಿದ್ದಾರೆ. ಈ ಪ್ರವಾಸಿ ಬಸ್ ಚಾಲಕ ಸ್ಥಳದಲ್ಲಿದ್ದು, ಪೊಲೀಸರ ತನಿಖೆಗೆ ಸಹಕರಿಸಿದ್ದಾರೆ.
ಏಳು ಪ್ರಯಾಣಿಕರನ್ನು ರಕ್ಷಿಸಿದೆ:
ಅಪಘಾತ ಸಂಭವಿಸಿದಾಗ ಅದೇ ಬಸ್ ಪಕ್ಕದಲ್ಲೇ ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ಬಸ್‌ನ ಚಾಲಕ ಕಣ್ಣಾರೆ ಕಂಡ ಘಟನೆಯನ್ನು ವಿವರಿಸಿದ್ದಾರೆ. ಶಾಲಾ ಪ್ರವಾಸಿ ಬಸ್ ಚಾಲಕ ಸಚಿನ್ ಅಪಘಾತದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿ, ಬೆಳಗಿನ ಜಾವ 2 ಗಂಟೆ ಸುಮಾರಿಗೆ ಲಾರಿಯೊಂದು ಡಿವೈಡರ್ ಹಾರಿ ಪಕ್ಕದ ರಸ್ತೆಗೆ ನುಗ್ಗಿ ಬಸ್‌ಗೆ ಡಿಕ್ಕಿ ಹೊಡೆದಿದ್ದರಿಂದ ಬೆಂಕಿ ಕಾಣಿಸಿಕೊಂಡು ಸ್ಫೋಟವು ಸಂಭವಿಸಿತು.ತಕ್ಷಣ ನಾನು ಶಾಲಾ ಬಸ್‌ನ್ನು ಸ್ವಲ್ಪ ದೂರ ನಿಲ್ಲಿಸಿ, ಪ್ರಯಾಣಿಕರ ರಕ್ಷಣೆಗೆ ಬಂದು ಏಳು ಜನರನ್ನು ರಕ್ಷಿಸಿದೆ ಎಂದು ತಿಳಿಸಿದ್ದಾರೆ.
ಗಾಯಗೊಂಡವರನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಮತ್ತು ಶಿರಾ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಯಿತು ಎಂದು ಅವರು ವಿವರಿಸಿದರು.ತಮ ಬಸ್‌ಗೆ ಸ್ವಲ್ಪ ಹಾನಿಯಾಗಿದ್ದರೂ ಅದೃಷ್ಟವಶಾತ್ ಮಕ್ಕಳಿಗಾಗಲೀ, ಶಿಕ್ಷಕರಿಗಾಗಲೀ ಯಾರಿಗೂ ಗಾಯಗಳಾಗಿಲ್ಲ ಎಂದು ಶಾಲಾ ಬಸ್ ಚಾಲಕ ಸಚಿನ್ ಹೇಳಿದ್ದಾರೆ.
