Monday, December 15, 2025
Homeರಾಜ್ಯಅಜಾತ ಶತ್ರು ಶಾಮನೂರು ಶಿವಶಂಕರಪ್ಪ ಅಸ್ತಂಗತ : ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಅಂತ್ಯಕ್ರಿಯೆ

ಅಜಾತ ಶತ್ರು ಶಾಮನೂರು ಶಿವಶಂಕರಪ್ಪ ಅಸ್ತಂಗತ : ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಅಂತ್ಯಕ್ರಿಯೆ

Shamanurt Shivashankarappa passes away: Funeral today with full state honours

ದಾವಣಗೆರೆ,ಡಿ.15- ಕಾಂಗ್ರೆಸ್‌‍ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರ ಅಂತ್ಯಸಂಸ್ಕಾರ ಇಂದು ಸಂಜೆ ಸಕಲ ಸರ್ಕಾರಿ ಗೌರವದೊಂದಿಗೆ ಕಲ್ಲೇಶ್ವರ ರೈಸ್‌‍ ಮಿಲ್‌ನ ಆವರಣದಲ್ಲಿ ನಡೆಯಲಿದೆ. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಪತ್ನಿ ಪಾರ್ವತಮ ಅವರ ಸಮಾಧಿ ಪಕ್ಕದಲ್ಲೇ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಗೆ ಸಿದ್ಧತೆ ನಡೆದಿದೆ.ಬೆಂಗಳೂರಿನ ಸದಾಶಿವನಗರದ ನಿವಾಸದಿಂದ ಮಧ್ಯರಾತ್ರಿ ಹೊರಟಿದ್ದ ಮೃತದೇಹ ಇಂದು ಬೆಳಗ್ಗೆ 4 ಗಂಟೆಯ ವೇಳೆಗೆ ದಾವಣಗೆರೆಗೆ ತಲುಪಿದ್ದು, ಮೊದಲು ಹಿರಿಯ ಮಗ ಎಸ್‌‍ಎಸ್‌‍ ಬಕ್ಕೇಶ್‌ ನಿವಾಸ, ನಂತರ ಎಸ್‌‍ ಎಸ್‌‍ ಗಣೇಶ ಅವರ ಮನೆ, ಕೊನೆಗೆ ಮೂರನೇ ಮಗ ಸಚಿವ ಎಸ್‌‍.ಎಸ್‌‍ ಮಲ್ಲಿಕಾರ್ಜುನ್‌ಅವರ ಮನೆಯಲ್ಲಿ ಕಣ್ವೆಕುಪ್ಪೆ ಶ್ರೀಗಳ ಸಮ್ಮುಖದಲ್ಲಿ ವಿಧಿ ವಿಧಾನ ನಡೆಯಿತು. ಮೂವರು ಮಕ್ಕಳ ಮನೆಗಳಲ್ಲಿ ವಿಧಿ ವಿಧಾನ ಮುಕ್ತಾಯದ ನಂತರ ಶಾಮನೂರು ಶಿವಶಂಕರಪ್ಪ ನಿವಾಸದ ಮುಂಭಾಗ ಸಾರ್ವಜನಿಕ ದರ್ಶನಕ್ಕೆ ಮೃತದೇಹವನ್ನು ಇಡಲಾಗಿತ್ತು. ನಂತರ ಮಧ್ಯಾಹ್ನ 12 ಗಂಟೆಗೆ ಹೈಸ್ಕೂಲ್‌ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಸಾರ್ವಜನಿಕರ ದರ್ಶನ ಮುಕ್ತಾಯವಾದ ನಂತರ ಸಂಜೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ಹೈಸ್ಕೂಲ್‌ ಮೈದಾನದಿಂದ ಕಲ್ಲೇಶ್ವರ ರೈಸ್‌‍ ಮಿಲ್‌ವರೆಗೆ ಅಂತಿಮ ಯಾತ್ರೆ ನಡೆಯಲಿದೆ.ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜನ ಖರ್ಗೆ,ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸಿಎಂ ಡಿ.ಕೆ ಶಿವಕುಮಾರ್‌ ಸೇರಿದಂತೆ ಹಲವಾರು ಸಚಿವರು, ಶಾಸಕರು ,ಮುಖಂಡರು ಆಗಮಿಸಿ ಅಗಲಿದ ಚೇತನಕ್ಕೆ ನಮನ ಸಲ್ಲಿಸಿದ್ದಾರೆ.

ಸಾವಿರಾರು ಜನರು ಅಂತಿಮ ದರ್ಶನ ಪಡೆದಿದ್ದು ನಗರದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ದಾವಣಗೆರೆಯ ಧಣಿ ಎಂದೇ ಕರೆಸಿಕೊಳ್ಳುತ್ತಿದ್ದ ಶಾಮನೂರು ಅವರಿಗೆ ಅಂತಿಮ ಗೌರವ ಸಲ್ಲಿಸಲು ಅಭಿಮಾನಿಗಳ ಒತ್ತಾಸೆಯಾಗಿತ್ತು. ಅಭಿಮಾನಿಗಳ ಮನವಿಯಂತೆ 15 ಕಿ.ಮೀ ಅಂತಿಮಯಾತ್ರೆಯ ಮೆರವಣಿಗೆ ಸಾಗಿದ ಬಳಿಕ ಸಂಜೆ 6 ಗಂಟೆಯ ವೇಳೆಗೆ ಅಂತ್ಯಸಂಸ್ಕಾರ ನಡೆಯಲಿದೆ.

ಅಂತ್ಯಕ್ರಿಯೆಗೆ ಶ್ರೀ ಸಿದ್ದಗಂಗಾ ಮಠದಿಂದ ಸುಮಾರು 100 ವಿಶೇಷ ವಿಭೂತಿ ಗಟ್ಟಿಯನ್ನು ರವಾನಿಸಲಾಗಿದೆ. ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ತಮ ವಾಹನದಲ್ಲೇ ದಾವಣಗೆರೆಗೆ ವಿಶೇಷ ವಿಭೂತಿ ಗಟ್ಟಿಗಳನ್ನು ತಂದಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀಗಳು, ಶಿವಶಂಕರಪ್ಪನವರು ನಮ ಸಮಾಜದ ಮುಖಂಡರು. ಸುಧೀರ್ಘ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸೇವೆ ಕೈಗೊಂಡವರು. ಇಡೀ ನಾಡಿಗೆ, ಜಗತ್ತಿಗೆ ಶಾಮನೂರು ಶಿವಶಂಕರಪ್ಪ ಅವರು ಪರಿಚಯವಿದೆ. ವಾಣಿಜ್ಯ ನಗರಿ ದಾವಣಗೆರೆಯನ್ನು ಶೈಕ್ಷಣಿಕ ನಗರಿಯನ್ನಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಶಾಮನೂರು ಶಿವಶಂಕರಪ್ಪ ಅವರ ಪುತ್ರ, ಸಚಿವ ಎಸ್‌‍.ಎಸ್‌‍ ಮಲ್ಲಿಕಾರ್ಜುನ್‌ ಅವರು ವರದಿಗಾರರ ಜೊತೆ ಮಾತನಾಡುವಾಗ ತಂದೆಯನ್ನು ನೆನೆದು ಭಾವುಕರಾದರು. ಕಳೆದ 15 ದಿನಗಳಿಂದ ತೀವ್ರ ಆರೋಗ್ಯ ಸಮಸ್ಯೆ ಅನುಭವುಸುತ್ತಿದ್ದರು. ಇದು ವಯೋ ಸಹಜ ಕಾಯಿಲೆ ಹೀಗಾಗಿ ಅವರು ನಮನ್ನಗಲಿದ್ದಾರೆ. ಬಹಳ ಕಷ್ಟದಿಂದ ಬೆಳೆದವರು ನನಗೆ ಆ ಕಷ್ಟ ಇಲ್ಲ. ತಮ ತಂದೆ ಕಷ್ಟದಲ್ಲಿಯೇ ಹುಟ್ಟಿ, ಕಷ್ಟ ಅನುಭವಿಸಿಯೇ ಬೆಳೆದರು. ಅವರಲ್ಲಿ ಇರುವ ಸಾಮಾನ್ಯಜ್ಞಾನ ಮೆಚ್ಚುವಂತಹದ್ದು. ಮೊದಲು ಉದ್ಯಮ ಹಾಗೂ ನಂತರ ರಾಜಕೀಯದಲ್ಲಿ ಬೆಳೆದರು. ನಮ ತಾತ ಕೂಡಾ ಕಳೆದ ಡಿ.16ಕ್ಕೆ ನಿಧನರಾಗಿದ್ದಾರೆ. ಇದೀಗ ನಮ ತಂದೆ ಡಿ.14ಕ್ಕೆ ನಿಧನರಾಗಿದ್ದಾರೆ ಎಂದು ಭಾವುಕರಾದರು.

ಅವರಗೊಳ್ಳ ಓಂಕಾರ ಶಿವಚಾರ್ಯ ಸ್ವಾಮೀಜಿ, ಕಣ್ವಕುಪ್ಪೇ ಶ್ರೀಗಳ ಸಮುಖದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರಕ್ಕೆ ಹಿರಿಯ ಮಗ ಬಕ್ಕೇಶ್‌ ಹಾಗೂ ಕಿರಿಯ ಮಗ ಎಸ್‌‍.ಎಸ್‌‍ ಮಲ್ಲಿಕಾರ್ಜುನ್‌ ಅವರು ವಿಧಿವಿಧಾನ ಪೂರೈಸಿದ್ದಾರೆ. ಮಲ್ಲಿಕಾರ್ಜುನ್‌ ಅವರ ಪತ್ನಿ ಸಂಸದೆ ಪ್ರಭಾ ಮಲ್ಲಿಕಾರ್ಜುನ್‌, ಪುತ್ರಿ ಶ್ರೇಷ್ಟಾ ಶಾಮನೂರು, ಸಮರ್ಥ್‌ ಶಾಮನೂರು, ಶಿವು ಶಾಮನೂರು ಸೇರಿದಂತೆ ಕುಟುಂಬಸ್ಥರು ಭಾಗಿಯಾಗಿದ್ದರು.

ಶಾಮನೂರು ಶಿವಶಂಕರಪ್ಪನವರ ನಿಧನಕ್ಕೆ ತರಳಬಾಳು ಶ್ರೀಗಳ ಸಂತಾಪ
ಕರ್ನಾಟಕ ವಿಧಾನಸಭೆಯ ಹಿರಿಯ ಶಾಸಕರು, ಮಾಜಿ ಸಚಿವರೂ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರೂ ಆದ ಶಾಮನೂರು ಶಿವಶಂಕರಪ್ಪ ಅವರು ನಮ ಮಠದ ಶಿಷ್ಯರು. ಸಮಾಜದ ಏಳಿಗೆಗಾಗಿ ಶ್ರಮಿಸಿದ, ಕೊಡುಗೈ ದಾನಿ ಗಳಾಗಿದ್ದ ಅವರ ಆತಕ್ಕೆ ಸದ್ಗತಿ ಸಿಗಲಿ ಎಂದು ಸಿರಿಗೆರೆಯ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಂತಾಪ ಸೂಚಿಸಿದ್ದಾರೆ.

ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಯನ್ನು ಆ ಪರಶಿವನು ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ, ಹಿತೈಷಿಗಳಿಗೆ ನೀಡಲೆಂದು ಹಾರೈಸಿದ್ದಾರೆ. ದಾವಣಗೆರೆಯಲ್ಲಿ ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾಗಿ, ವ್ಯಾಪಾರ ಉದ್ದಿಮೆಯಲ್ಲಿ ಕರ್ನಾಟಕದ ಮ್ಯಾಂಚೆಸ್ಟರ್‌ ಎನಿಸಿದ್ದ ದಾವಣಗೆರೆಯನ್ನು ಕರ್ನಾಟಕದ ಆಕ್‌್ಸ ಫರ್ಡ್‌ ಅನ್ನಾಗಿ ಮಾಡಿದವರು ಆವರು ಎಂದು ಪ್ರಶಂಸಿಸಿದ್ದಾರೆ.

ದಶಕಗಳ ರಾಜಕೀಯ ಅನುಭವ :
ಕರ್ನಾಟಕದ ರಾಜಕೀಯ ದಲ್ಲಿ ಅಜಾತಶತ್ರು ಎಂದೇ ಗುರುತಿಸಿಕೊಂಡಿದ್ದ ಶಾಮನೂರು ಶಿವಶಂಕರಪ್ಪ ಅವರು ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿದ್ದರು. ಅವರು ಆರು ಬಾರಿ ಶಾಸಕರಾಗಿ ಹಾಗೂ ಒಂದು ಬಾರಿ ಸಂಸದ ರಾಗಿ ಜನಪ್ರತಿನಿಧಿಯಾಗಿ ರಾಜಕೀಯ ವಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯದ ವಿವಿಧ ಸರ್ಕಾರಗಳಲ್ಲಿ ಪ್ರಮುಖ ಖಾತೆಗಳನ್ನು ನಿಭಾಯಿಸುವ ಮೂಲಕ ಸಚಿವರಾಗಿ ಕೂಡ ಅಪಾರ ಕೊಡುಗೆಯನ್ನು ನೀಡಿದ್ದಾರೆ.

ಸಮಾಜದ ಹಿರಿಯರು, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರು, ಗುರು-ಲಿಂಗ ಜಂಗಮ ಆರಾಧಕರು, ಬೀಗದೆ ಬಾಗುವ ಶಾಮನೂರು ಶಿವಶಂಕರಪ್ಪನವರ ಅಗಲುವಿಕೆ ನಿಜಕ್ಕೂ ದುಃಖಕರ ಅವರ ತುಂಬು ಜೀವನ ಭವ್ಯ ಯಶೋಗಾಥೆ ಸದಾ ಸ್ಪೂರ್ತಿದಾಯಕ ಎಂದು ಹೇಳಿದ್ದಾರೆ.

ಶಿಕ್ಷಣ ಕ್ಷೇತ್ರಕ್ಕೆ ಶ್ಯಾಮನೂರು ಕೊಡುಗೆ ಅಪಾರ:ರಣದೀಪ್‌ಸಿಂಗ್‌ ಸುರ್ಜೆವಾಲ
ಆರು ದಶಕಗಳಿಗೂ ಅಧಿಕ ಕಾಲ ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸಿದ ಹಿರಿಯ ಕಾಂಗ್ರೆಸ್‌‍ ನಾಯಕರಾದ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ಅತೀವ ದುಃಖಿತನಾಗಿದ್ದೇನೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೆವಾಲ ಸಂತಾಪ ವ್ಯಕ್ತಪಡಿಸಿದ್ದಾರೆ.

ಶಿಕ್ಷಣತಜ್ಞರಾಗಿ ಹಲವು ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸಿ, ದಾವಣಗೆರೆಯನ್ನು ಜ್ಞಾನಕೇಂದ್ರವನ್ನಾಗಿ ರೂಪಿಸಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಪಾತ್ರವಹಿಸಿದ್ದರು. ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಕುಟುಂಬಕ್ಕೆ ದಾರಿದೀಪವಾಗಿದ್ದರು. ಅವರ ಸರಳತೆ, ಸಾರ್ವಜನಿಕ ಸೇವೆಯಲ್ಲಿನ ನಿಷ್ಠೆ, ಎಲ್ಲಾ ಪಕ್ಷಗಳ ನಾಯಕರಿಂದಲೂ ಗೌರವಕ್ಕೆ ಪಾತ್ರರಾಗಿದ್ದರು. ಅವರ ಸೇವಾ ಪರಂಪರೆ ಸದಾಕಾಲ ಉಳಿಯುತ್ತದೆ. ಶಾಮನೂರು ಶಿವಶಂಕರಪ್ಪ ಅವರ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬ, ಅಭಿಮಾನಿಗಳಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ರಾಜಕೀಯ ಭೀಷನಿಗೆ ರೇವಣ್ಣ ಸಂತಾಪ..
ನಾಡಿನ ಹಿರಿಯ ಮುತ್ಸದ್ದಿ, ರಾಜಕೀಯ ಭೀಷ್ಮ, ಬಡವರ-ದೀನದಲಿತರ ಬಗ್ಗೆ ಕಾಳಜಿ ಹೊಂದಿದ್ದ ಶಾಸಕ ಹಾಗೂ ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಸಂತಾಪ ಸೂಚಿಸಿದ್ದಾರೆ.

ಶಿವಶಂಕರಪ್ಪ ಅವರು ರಾಜಕೀಯ ಕ್ಷೇತ್ರವಲ್ಲದೆ ಉದ್ಯಮಿಗಳಾಗಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿ ಬಡವರ ಪಾಲಿನ ಅನ್ನದಾತರಾಗಿದ್ದರು. ಬಾಪೂಜಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಲಕ್ಷಾಂತರ ಮಂದಿಗೆ ಶಿಕ್ಷಣ ನೀಡಿದ್ದಾರೆ. ಅವರ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಮೃತರ ಆತ್ಮಕ್ಕೆ ಸದ್ಗತಿ ಸಿಗಲಿ. ಅವರ ಕುಟುಂಬಕ್ಕೆ, ಹಿತೈಷಿಗಳಿಗೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಅವರು ತಿಳಿಸಿದ್ದಾರೆ.

RELATED ARTICLES

Latest News