ಬೆಂಗಳೂರು,ಜ.10- ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ತಮ್ಮ ತಮ್ಮ ಊರುಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ವಿಶೇಷ ರೈಲು ಸೇವೆಯನ್ನು ಕಲ್ಪಿಸಲಾಗಿದೆ.
ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ಮತ್ತು ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಡಲು ಬೆಂಗಳೂರಿನಿಂದ ಶಿವಮೊಗ್ಗದ ತಾಳಗುಪ್ಪ, ಗೋವಾದ ಮಡ್ಗಾಂವ್ ಮತ್ತು ಕೇರಳದ ಕಣ್ಣೂರು ಹಾಗೂ ಕೊಲ್ಲಂಗೆ ವಿಶೇಷ ರೈಲುಗಳನ್ನು ಬಿಡಲು ನಿರ್ಧರಿಸಲಾಗಿದೆ.
ಶಿವಮೊಗ್ಗ ಮತ್ತು ಮಲೆನಾಡು ಭಾಗಕ್ಕೆ ತೆರಳುವ ಪ್ರಯಾಣಿಕರಿಗಾಗಿ ಯಶವಂತಪುರದಿಂದ ತಾಳಗುಪ್ಪಕ್ಕೆ ಎರಡು ಟ್ರಿಪ್ ವಿಶೇಷ ರೈಲು ನಿಗಧಿಪಡಿಸಲಾಗಿದೆ. ರೈಲು ಸಂಖ್ಯೆ 06585 ಯಶವಂತಪುರ ತಾಳಗುಪ್ಪ ಎಕ್‌್ಸಪ್ರೆಸ್ ವಿಶೇಷ ರೈಲು ಜ.13 ಮತ್ತು ಜ.23 ರಂದು (ಮಂಗಳವಾರ ಮತ್ತು ಶುಕ್ರವಾರ) ರಾತ್ರಿ 10.45 ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಿಗ್ಗೆ 4.45 ಕ್ಕೆ ತಾಳಗುಪ್ಪ ತಲುಪಲಿದೆ.
ಮರು ಪ್ರಯಾಣದ ವೇಳೆ ರೈಲು ಸಂಖ್ಯೆ 06586 ತಾಳಗುಪ್ಪ ಯಶವಂತಪುರ ಎಕ್‌್ಸಪ್ರೆಸ್ ಜ. 14 ಮತ್ತು ಜ.24 ರಂದು (ಬುಧವಾರ ಮತ್ತು ಶನಿವಾರ) ಬೆಳಿಗ್ಗೆ 10.00 ಗಂಟೆಗೆ ತಾಳಗುಪ್ಪದಿಂದ ಹೊರಟು ಅದೇ ದಿನ ಸಂಜೆ 5.15 ಕ್ಕೆ ಯಶವಂತಪುರ ತಲುಪಲಿದೆ. ಈ ರೈಲುಗಳು ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ತರೀಕೆರೆ, ಭದ್ರಾವತಿ, ಶಿವಮೊಗ್ಗ ಟೌನ್, ಆನಂದಪುರ ಮತ್ತು ಸಾಗರ ಜಂಬಗಾರು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ. ಇದರಲ್ಲಿ ಎಸಿ, ಸ್ಲೀಪರ್ ಮತ್ತು ಜನರಲ್ ಕೋಚ್‌ಗಳು ಇರಲಿವೆ.
ಕರಾವಳಿ ಮತ್ತು ಗೋವಾಗೆ ಹೋಗುವವರಿಗೆ ಅನುಕೂಲ :
ಕರಾವಳಿ ಕರ್ನಾಟಕ ಮತ್ತು ಗೋವಾಗೆ ಪ್ರವಾಸ ಹೋಗುವವರಿಗಾಗಿ ಯಶವಂತಪುರ ಮಡ್ಗಾಂವ್ ನಡುವೆ ವಿಶೇಷ ರೈಲು ಓಡಲಿದೆ. ರೈಲು ಸಂಖ್ಯೆ 06287 ಯಶವಂತಪುರ ಮಡ್ಗಾಂವ್ ಎಕ್‌್ಸಪ್ರೆಸ್ ಜ.13 ಮತ್ತು 23 ರಂದು ಯಶವಂತಪುರದಿಂದ ಬೆಳಿಗ್ಗೆ 11.50 ಕ್ಕೆ ಹೊರಟು ಮರುದಿನ ಬೆಳಿಗ್ಗೆ 6.45 ಕ್ಕೆ ಮಡ್ಗಾಂವ್ ತಲುಪಲಿದೆ.
ಹಾಗೆಯೇ, ರೈಲು ಸಂಖ್ಯೆ 06288 ಮಡ್ಗಾಂವ್ ಯಶವಂತಪುರ ಎಕ್‌್ಸಪ್ರೆಸ್ ಜ.18 ಮತ್ತು 26 ರಂದು ಮಡ್ಗಾಂವ್‌ನಿಂದ ಬೆಳಿಗ್ಗೆ 11 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 4.5 ಕ್ಕೆ ಯಶವಂತಪುರ ತಲುಪಲಿದೆ. ಈ ರೈಲು ಹಾಸನ, ಸಕಲೇಶಪುರ, ಸುಬ್ರಹಣ್ಯ ರಸ್ತೆ, ಪುತ್ತೂರು, ಬಂಟ್ವಾಳ, ಸುರತ್ಕಲ್, ಉಡುಪಿ, ಕುಂದಾಪುರ, ಬೈಂದೂರು, ಭಟ್ಕಳ, ಮುರುಡೇಶ್ವರ, ಹೊನ್ನಾವರ, ಗೋಕರ್ಣ ಮತ್ತು ಕಾರವಾರ ಮಾರ್ಗವಾಗಿ ಸಂಚರಿಸಲಿದ್ದು, ಪ್ರವಾಸಿಗರಿಗೆ ಮತ್ತು ಯಾತ್ರಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ.
ಕೇರಳಕ್ಕೆ ಹೆಚ್ಚುವರಿ ರೈಲುಗಳ ವ್ಯವಸ್ಥೆ :
ಪೊಂಗಲ್ ಮತ್ತು ಸಂಕ್ರಾಂತಿ ರಜೆಗೆ ಕೇರಳಕ್ಕೆ ತೆರಳುವವರಿಗಾಗಿಯೂ ವಿಶೇಷ ರೈಲುಗಳನ್ನು ಘೋಷಿಸಲಾಗಿದೆ. ಬೆಂಗಳೂರು ಕಂಟೋನ್ಮೆಂಟ್ ಮತ್ತು ಕಣ್ಣೂರು ನಡುವೆ ಜ.9 ಮತ್ತು 13 ರಂದು ವಿಶೇಷ ರೈಲುಗಳು ಸಂಚರಿಸಲಿವೆ. ಈ ರೈಲುಗಳು ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ಪಾಲಕ್ಕಾಡ್ ಮತ್ತು ಕೋಝಿಕ್ಕೋಡ್ ಮಾರ್ಗವಾಗಿ ಸಂಚರಿಸಲಿವೆ.
ಜೊತೆಗೆ, ಎಸ್‌ಎಂವಿಟಿ ಬೆಂಗಳೂರು ಮತ್ತು ಕೊಲ್ಲಂ ನಡುವೆ (ರೈಲು ಸಂಖ್ಯೆ 06219/06220) ಜ.13 ರಂದು ಮತ್ತೊಂದು ವಿಶೇಷ ರೈಲು ಸಂಚರಿಸಲಿದೆ. ಈ ರೈಲು ಕೊಟ್ಟಾಯಂ, ಚೆಂಗನ್ನೂರು ಮೂಲಕ ಕೊಲ್ಲಂ ತಲುಪಲಿದೆ. ಹಬ್ಬದ ರಜೆಯಲ್ಲಿ ಊರಿಗೆ ಹೋಗುವವರು ಕೊನೆಯ ಗಳಿಗೆಯ ಗೊಂದಲ ತಪ್ಪಿಸಲು ಈಗಲೇ ಟಿಕೆಟ್ ಕಾಯ್ದಿರಿಸಿಕೊಳ್ಳುವುದು ಉತ್ತಮ. ಒಟ್ಟಿನಲ್ಲಿ, ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಈ ಸ್ಪೆಷಲ್ ರೈಲುಗಳು ದೊಡ್ಡ ಅನುಕೂಲ ನೀಡಲಿದ್ದು, ಪ್ರಯಾಣ ಇನ್ನಷ್ಟು ಸುಗಮವಾಗಲಿದೆ.
