Monday, January 12, 2026
Homeರಾಜ್ಯಎಸ್‌‍ಎಸ್‌‍ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ : ಮುಖ್ಯ ಶಿಕ್ಷಕರು ಸೇರಿ 6 ಮಂದಿ...

ಎಸ್‌‍ಎಸ್‌‍ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ : ಮುಖ್ಯ ಶಿಕ್ಷಕರು ಸೇರಿ 6 ಮಂದಿ ಅರೆಸ್ಟ್

SSLC Preparatory Exam Question Paper Leak Case: 6 people including Head Teacher arrested

ಬೆಂಗಳೂರು,ಜ.12-ಪರೀಕ್ಷಾ ಅಕ್ರಮ ತಡೆಯಲು ಶಿಕ್ಷಣ ಇಲಾಖೆ ಹಲವು ಸುಧಾರಣ ಕ್ರಮ ಕೈಗೊಂಡರೂ ಸಹ ವಂಚಕರು ತಮ ಕರಾಮತ್ತು ತೋರಿ ಎಸ್‌‍ಎಸ್‌‍ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದು,ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಶಿಕ್ಷಕರು ಸೇರಿ 6 ಆರೋಪಿಗಳನ್ನು ಉತ್ತರ ವಿಭಾಗದ ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಳೆದ ಜ.9 ರಂದು ಎಸ್‌‍ಎಸ್‌‍ಎಲ್‌ಸಿ ಪೂರ್ವಸಿದ್ಧತಾ ಹಿಂದಿ ಪರೀಕ್ಷೆ ನಡೆದಿತ್ತು ಆದರೆ ಜ. 8 ರಂದು ನಿರಂಜನ್‌ ಶೆಟ್ಟಿ ಹೆಸರಿನ ಯೂಟ್ಯೂಬ್‌ ಚಾನೆಲ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಈ ಸಂಬಂಧ ಪದವಿ ಪೂರ್ವ ಶಿಕ್ಷಣಾ ಇಲಾಖೆಯ ಜಂಟಿ ನಿರ್ದೇಶಕ ರಾಜು ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಉತ್ತರ ವಿಭಾಗದ ಸೈಬರ್‌ ಸೆನ್‌ ಪೊಲೀಸ್‌‍ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

ತನಿಖೆಗೆ ಇಳಿದ ಪೊಲೀಸರು ಮುಖ್ಯ ಶಿಕ್ಷಕರುಗಳು ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ 10 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಪ್ರಸ್ತುತ ತುಮಕೂರಿನ ಶಾಲೆಯೊಂದರ ಮುಖ್ಯೋಪಾಧ್ಯಾಯ ಗಿರೀಶ್‌, ರಾಮನಗರದ ಸಹ ಶಿಕ್ಷಕ ಅಮ್ಜದ್‌ ಖಾನ್‌, ಕಲಬುರಗಿಯ ಮುಖ್ಯ ಶಿಕ್ಷಕಿ ಶಾಹಿದಾ ಬೇಗಂ,ಸಹ ಶಿಕ್ಷಕಿ ಫಾಹಿದಾ,ಶಿಕ್ಷಕ ಮೊಹಮದ್‌ ಸಿರಾಜುದ್ದೀನ್‌, ಶಿಕ್ಷಕಿ ಫರ್ಜಾನಾ ಬೇಗಂ ಅವರನ್ನು ಬಂಧಿಸಲಾಗಿದೆ ಮತ್ತು ನಾಲ್ವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ .

ತುಮಕೂರು, ರಾಮನಗರ, ಕಲಬುರಗಿ ಜಿಲ್ಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಶ್ನೆಪತ್ರಿಕೆಯನ್ನು ವೈರಲ್‌ ಮಾಡಿದವರ ವಾಟ್ಸಪ್‌, ಇನ್‌ಸ್ಟಾ, ಟೆಲಿಗ್ರಾಂ ಖಾತೆಯ ಜೊತೆ ಮೊಬೈಲ್‌ ಪರಿಶೀಲನೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ಮತ್ತಷ್ಟು ಮಂದಿ ಬಂಧನವಾಗುವ ಸಾಧ್ಯತೆಯಿದೆ.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಪರೀಕ್ಷಾ ಮಂಡಳಿ ಮುಖ್ಯಸ್ಥ ಗೋಪಾಲಕೃಷ್ಣ ತಿಳಿಸಿದ್ದಾರೆ.

RELATED ARTICLES

Latest News