Sunday, January 11, 2026
Homeರಾಜ್ಯಎಸ್‌‍ಎಸ್‌‍ಎಲ್‌ಸಿ ಪೂರ್ವ ಸಿದ್ದತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ..!

ಎಸ್‌‍ಎಸ್‌‍ಎಲ್‌ಸಿ ಪೂರ್ವ ಸಿದ್ದತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ..!

SSLC Preparatory Exam Question Paper Leaked..!

ಬೆಂಗಳೂರು,ಜ.10- ವಿದ್ಯಾರ್ಥಿ ಜೀವನದ ಅತಿ ಮಹತ್ವದ ಘಟ್ಟ ಎಂದೇ ಪರಿಗಣಿಸಲಾದ ಎಸ್‌‍ಎಸ್‌‍ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಯ ಪತ್ರಿಕೆ ಸೋರಿಕೆಯಾದ ಬೆನ್ನಲ್ಲೇ ಎಸ್‌‍ಎಸ್‌‍ಎಲ್‌ಸಿಯ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆಯೂ ಇದೇ ಆರೋಪಕ್ಕೆ ಸಿಲುಕಿದೆ.

ಎಸ್‌‍ಎಸ್‌‍ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇವಲ 30 ರೂಪಾಯಿಗೆ ಮರಾಟವಾಗುತ್ತಿವೆ. ಅದರಲ್ಲೂ ಇನ್ಸ್ಟಾಗ್ರಾಮ್‌ ಮತ್ತು ಟೆಲಿಗ್ರಾಮ್‌ನಲ್ಲಿ ಕೆಲವರು ಪ್ರಶೆ ಪತ್ರಿಕೆಯನ್ನೇ
ಟ್ಯಾಗ್‌ ಮಾಡಿ ಸೋರಿಕೆ ಮಾಡಿದ್ದಾರೆ.

ಪ್ರಶ್ನೆಪತ್ರಿಕೆ ಬೇಕೇ? ಎಂದು ಕೇಳಲಾಗುತ್ತಿದ್ದು, ಕೇವಲ 30 ರೂ. ಕೊಟ್ಟರೆ ತಲುಪಿಸಲಾಗುವುದು ಎಂದು ಬೇಡಿಕೆ ಇಟ್ಟಿದ್ದಾರೆ. ಯಾವುದೋ ಮೊಬೈಲ್‌ ಪ್ರಮೋಷನ್‌ ವಿಡಿಯೋ ಮಾಡುವಂತೆ ಕಿಡಿಗೇಡಿಗಳು ಇನ್‌ಸ್ಟಾಗ್ರಾಮ್‌ ಮತ್ತು ಟೆಲಿಗ್ರಾಮ್‌ನಲ್ಲಿ ಪ್ರಶ್ನೆ ಪತ್ರಿಕೆ ಬೇಕಿದ್ದರೆ ಡಿಎಂ ಮಾಡಿ ಎಂದು ಬಹಿರಂಗವಾಗಿ ಪೋಸ್ಟ್‌ ಹಾಕುತ್ತಿದ್ದಾರೆ.

ಪರೀಕ್ಷೆ ಆರಂಭಕ್ಕೂ ಮುನ್ನ ಬೆಳಿಗ್ಗೆ 8.15ಕ್ಕೆ ಸರಿಯಾಗಿ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುತ್ತಿವೆ. ಇಷ್ಟೇ ಅಲ್ಲದೆ, ಕ್ಯೂಆರ್‌ ಕೋಡ್‌ ಕಳುಹಿಸಿ 30 ರೂ.ಗಳಿಂದ 50 ರೂ. ಹಣ ಪಾವತಿಸಿದರೆ ಸಾಕು, ನಿಮ ಕೈಗೆ ಪ್ರಶ್ನೆ ಪತ್ರಿಕೆ ಸೇರುತ್ತದೆ ಎಂಬ ಆಫರ್‌ಗಳು ಬರುತ್ತಿವೆ. ಇದರಿಂದ ವಿದ್ಯಾರ್ಥಿಗಳು ಕೂಡ ಆತಂಕಕ್ಕೊಳಗಾಗಿದ್ದಾರೆ. ಕೇವಲ ಹಣಕ್ಕಾಗಿ ಮಾತ್ರವಲ್ಲದೆ, ತಮ ಇನ್‌ಸ್ಟಾಗ್ರಾಮ್‌ ಫಾಲೋವರ್ಸ್‌ ಸಂಖ್ಯೆ ಹೆಚ್ಚಿಸಿಕೊಳ್ಳಲು ಇಂತಹ ಕೃತ್ಯವೆಸಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ಶಿಕ್ಷಣ ಇಲಾಖೆಯು ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಲು ಮೂರು ಪೂರ್ವ ಸಿದ್ಧತಾ ಪರೀಕ್ಷೆಗಳ ಪರಿಕಲ್ಪನೆ ತಂದಿದೆ.

ಮಂಡಳಿ ಹೇಳುವುದೇನು:
ಈ ಆರೋಪದ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸೈಬರ್‌ ಕ್ರೈಂ ಪೊಲೀಸ್‌‍ ಠಾಣೆಗೆ ಅಧಿಕೃತ ದೂರು ನೀಡಲಾಗಿದೆ.

ಐದು ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗಿಲ್ಲ, ಕೇವಲ ಎರಡು ಮಾತ್ರ ಸೋರಿಕೆಯಾಗಿರಬಹುದು ಎಂಬ ಅನುಮಾನವಿದೆ ಎಂದು ಮಂಡಳಿ ಹೇಳಿದೆ. ಉತ್ತರ ವಿಭಾಗದ ಸೈಬರ್‌ ಕ್ರೈಂ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಕಿಡಿಗೇಡಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಇದು ಕೇವಲ ಹಣ ಮಾಡುವ ಉದ್ದೇಶದ ಸುಳ್ಳು ಸುದ್ದಿಯೂ ಆಗಿರಬಹುದು ಎಂದು ಮಂಡಳಿ ಶಂಕೆ ವ್ಯಕ್ತಪಡಿಸಿದೆ.

ಶಿಕ್ಷಣ ಇಲಾಖೆಯ ದಿವ್ಯ ನಿರ್ಲಕ್ಷ್ಯ :
ಪ್ರಶ್ನೆ ಪತ್ರಿಕೆಗಳನ್ನು ಕೊಡುತ್ತಿದ್ದೇವೆ ಎಂದು ಇನ್ಸ್ಟಾಗ್ರಾಮ್‌ನಲ್ಲಿ ವೈರಲ್‌ ಮಾಡುತ್ತಿದ್ದಾರೆ. ಹಣಕ್ಕಾಗಿ ಪೇಪರ್‌ ಸೋರಿಕೆ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಶಿಕ್ಷಣ ಇಲಾಖೆಯ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪವೂ ಕೇಳಿಬಂದಿದೆ.ಪೂರ್ವ ಸಿದ್ಧತಾ ಪರೀಕ್ಷೆ ಆರಂಭ ಆಗುವ ಮುನ್ನ ಬೆಳಿಗ್ಗೆ 8.15ಕ್ಕೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿರುವುದು ಶಿಕ್ಷಣ ಇಲಾಖೆಯ ಪೂರ್ವ ಸಿದ್ಧತಾ ಪರೀಕ್ಷೆ ಪರಿಕಲ್ಪನೆಗೆ ಈಗ ಮಾನ್ಯತೆ ಇಲ್ಲದಂತಾಗಿದೆ.ವರ್ಷವಿಡೀ ಶ್ರಮ ಪಟ್ಟು ಓದುವ ವಿದ್ಯಾರ್ಥಿಗಳಿಗೆ ಮಕ್ಕಳಿಗೆ ಮೋಸವಾಗ್ತಿದೆ ಎಂದು ಪೋಷಕರು ಆಕ್ರೋಶ ಹೊರಹಾಕುತ್ತಿದ್ದಾರೆ.

RELATED ARTICLES

Latest News