Monday, December 29, 2025
Homeರಾಜ್ಯಕೋಗಿಲು ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸಲು ಮುಂದಾದ ರಾಜ್ಯ ಸರ್ಕಾರ

ಕೋಗಿಲು ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸಲು ಮುಂದಾದ ರಾಜ್ಯ ಸರ್ಕಾರ

State government moves to rehabilitate Kogilu victims

ಬೆಂಗಳೂರು,ಡಿ.29- ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಟೀಕೆ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಕೋಗಿಲು ಕ್ರಾಸ್‌‍ ಬಳಿ ಒತ್ತುವರಿ ತೆರವು ಕಾರ್ಯಾಚರಣೆಯಿಂದ ಸಂತ್ರಸ್ಥರಾದ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಮುಂದಾಗಿದೆ.
ಬೆಂಗಳೂರು ತಾಜ್ಯ ನಿರ್ವಹಣಾ ಸಂಸ್ಥೆ (ಬಿಎಸ್‌‍ ಡಬ್ಲ್ಯೂಎಂಎಲ್‌)ಗೆ ಸೇರಿದ ಐದು ಎಕರೆಗೂ ಹೆಚ್ಚಿನ ಜಾಗದಲ್ಲಿ ಸುಮಾರು 400 ಕುಟುಂಬಗಳು ಮನೆ ನಿರ್ಮಿಸಿಕೊಂಡಿದ್ದವು. ಹಲವು ಬಾರಿ ನೋಟೀಸ್‌‍ ನೀಡಿದ ನಂತರವೂ ಸ್ಥಳೀಯ ನಿವಾಸಿಗಳು ಜಾಗ ಖಾಲಿ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ನಡೆಸಬೇಕಾಯಿತು ಎಂದು ಸರ್ಕಾರ ತಿಳಿಸಿದೆ.

ಜಿಬಿಎ ಅಧಿಕಾರಿಗಳು ಬೆಳಗಿನ ಜಾವ ಏಕಾಏಕಿ ತೆರವು ಕಾರ್ಯಾಚರಣೆ ಮಾಡಿದ್ದರಿಂದ 300 ಕುಟುಂಬಗಳ ಸಂತ್ರಸ್ಥರು ಬೀದಿ ಪಾಲಾಗಿದ್ದಾರೆ ಎನ್ನಲಾಗಿದೆ. ವಿವಿಧ ಸಂಘಟನೆಗಳ ಬೆಂಬಲದಿಂದಾಗಿ ಸಂತ್ರಸ್ತರು ಸ್ಥಳದಿಂದ ತೆರಳದೆ ಅಲ್ಲಿಯೇ ಟಾರ್ಪಾಲ್‌ ಟೆಂಟ್‌ ಗಳ ಆಶ್ರಯದಲ್ಲಿ ಅಲ್ಲಿಯೇ ಠಿಕಾಣಿ ಹೂಡಿದ್ದಾರೆ. ಇದನ್ನು ಉಲ್ಲೇಖಿಸಿ ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಆಕ್ಷೇಪ ವ್ಯಕ್ತ ಪಡಿಸಿದ್ದರು.

ಇದಕ್ಕೆ ಸ್ಪಷ್ಟನೆ ನೀಡಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸದರಿ ಜಾಗ ಘನತ್ಯಾಜ್ಯ ವಿಲೇವಾರಿಗಾಗಿ ಮೀಸಲಿಡಲಾಗಿತ್ತು. ಆಂಧ್ರಪ್ರದೇಶ ಹಾಗೂ ಮತ್ತಿತರರ ಭಾಗಗಳಿಂದ ಬಂದಿದ್ದ ವಲಸಿಗರು ಒತ್ತುವರಿ ಮಾಡಿಕೊಂಡಿದ್ಧಾರೆ. ನೋಟೀಸ್‌‍ ನೀಡಿದ ಬಳಿಕವೂ ಸ್ಪಂದಿಸದ ಕಾರಣಕ್ಕೆ ತೆರವು ಕಾರ್ಯಾಚರಣೆ ನಡೆಸಬೇಕಾಯಿತು ಎಂದು ಸಮರ್ಥಿಸಿಕೊಂಡಿದ್ದರು.

ರಾತ್ರೋರಾತ್ರಿ ತೆರವು ಕಾರ್ಯಾಚರಣೆ ನಡೆಸಿದ ಬಳಿಕವೂ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಅಧಿಕಾರಿಗಳು ವಿಫಲರಾಗಿದ್ದು, ವಿವಾದ ಭುಗಿಲೆದ್ದಿದೆ.ಪಿಣರಾಯಿ ವಿಜಯನ್‌ ಈ ಕಾರ್ಯಾಚರಣೆಯನ್ನು ಬುಲ್ಡೋಜರ್‌ ಕ್ರಮ ಎಂದು ಟೀಕಿಸಿದ್ದಾರೆ. ಪಿಣರಾಯಿ ವಿಜಯನ್‌ ಅವರ ನೇತೃತ್ವದ ಎಡಪಕ್ಷ, ಕಾಂಗ್ರೆಸ್‌‍ ಮುಂದಾಳತ್ವದಲ್ಲಿರುವ ಇಂಡಿಯಾ ರಾಜಕೀಯ ಕೂಟದಲ್ಲಿ ಸಹಭಾಗಿತ್ವ ಹೊಂದಿದೆ. ಪಿಣರಾಯಿ ವಿಜಯನ್‌ ಅವರ ಸಾಮಾಜಿಕ ಜಾಲತಾಣದ ಪೋಸ್ಟ್‌ ಭಾರಿ ವೈರಲ್‌ ಆಗಿದ್ದು, ಕಾಂಗ್ರೆಸ್‌‍ ಹೈಕಮಾಂಡ್‌ ಕೂಡ ಅದಕ್ಕೆ ಸ್ಪಂದಿಸಿದೆ. ಸಂತ್ರಸ್ಥರ ನೆರವಿಗೆ ತುರ್ತು ಕ್ರಮ ಕೈಗೊಳ್ಳುವಂತೆ ರಾಜ್ಯ ಕಾಂಗ್ರೆಸ್‌‍ ಸರ್ಕಾರಕ್ಕೆ ಕಾಂಗ್ರೆಸ್‌‍ ವರಿಷ್ಠರು ಸೂಚನೆ ನೀಡಿದ್ದಾರೆ.

ಬೆಂಗಳೂರು ನಗರ ಅಭಿವೃದ್ಧಿ ಸಚಿವರಾಗಿರುವ ಡಿ.ಕೆ.ಶಿವಕುಮಾರ್‌, ಕೇರಳದ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌‍ ಹೈಕಮಾಂಡ್‌ ಮಧ್ಯ ಪ್ರವೇಶದಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ. ಸದರಿ ನಿವಾಸಿಗಳು ವಾಸಿಸುತ್ತಿದ್ದ ಜಾಗ ಸರ್ಕಾರಿ ಭೂಮಿ ಎಂದು ಹೇಳುತ್ತಿದ್ದವರು ಈಗ ಅನಿವಾರ್ಯವಾಗಿ ತಣ್ಣಗಾಗುವ ಪರಿಸ್ಥಿತಿ ಬಂದಿದೆ. ಇದರ ಬೆನ್ನಲ್ಲೇ ಕೇರಳದ ಕೆಲ ಶಾಸಕರು, ಸಂಸದರು ಸ್ಥಳಕ್ಕೆ ಆಗಮಿಸಿ ಸಂತ್ರಸ್ಥರಿಗೆ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಬಳಿಕ ಕರ್ನಾಟಕದ ನಾಯಕರುಗಳು ಕೂಡ ಒಬ್ಬೊಬ್ಬರಾಗಿ ಅಲ್ಲಿಗೆ ಭೇಟಿ ನೀಡುವ ಮೂಲಕ ಸಂತ್ರಸ್ತರ ಅಳಲು ಕೇಳಲಾರಂಭಿಸಿದ್ದಾರೆ.

ರಾಜ್ಯ ಸರ್ಕಾರಕ್ಕೆ ಇದು ಮತ್ತಷ್ಟು ಮುಜುಗರ ತಂದಿಟ್ಟಿದೆ. ನಿನ್ನೆ ವಕ್‌್ಫ ಮತ್ತು ಅಲ್ಪಸಂಖ್ಯಾತರ ಖಾತೆ ಸಚಿವ ಜಮೀರ್‌ ಅಹದ್‌ ಖಾನ್‌ ಸ್ಥಳಕ್ಕೆ ಭೇಟಿ ನೀಡಿದ್ದರು. ಇಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಥಳಕ್ಕೆ ತೆರಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಂಜೆ ಮಹತ್ವದ ಸಭೆ ಕರೆದಿದ್ದು ವಿವಾದ ಇತ್ಯರ್ಥಕ್ಕೆ ಮುಂದಾಗಿದ್ದಾರೆ.

ಉಪಮುಖ್ಯಮಂತ್ರಿಡಿ.ಕೆ.ಶಿವಕುಮಾರ್‌, ವಸತಿ ಸಚಿವ ಜಮೀರ್‌ ಅಹದ್‌ ಖಾನ್‌, ನಗರಾಭಿವೃದ್ಧಿ ಇಲಾಖೆೆ ಅಪರ ಮುಖ್ಯ ಕಾರ್ಯದರ್ಶಿ, ಜಿಬಿಎ ಮುಖ್ಯ ಆಯುಕ್ತರು ಮತ್ತು ಇತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.ಒತ್ತುವರಿ ತೆರವಿನ ಸಂತ್ರಸ್ತರು ತಮಗೆ ಇದೇ ಜಾಗವೇ ಬೇಕು, ನಾವು ಬೇರೆಡೆಗೆ ಸ್ಥಳಾಂತರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸರ್ಕಾರಕ್ಕೆ ಇದು ಹೊಸ ತಲೆ ನೋವಾಗಿದೆ. ಪರ್ಯಾಯ ಸ್ಥಳ ಗುರುತಿಸಿ, ಅಲ್ಲಿ ಪುನರ್ವಸತಿ ಕಲ್ಪಿಸುವುದಾಗಿ ಮುಖ್ಯಮಂತ್ರಿಯವರು ಭರವಸೆ ನೀಡುತ್ತಿದ್ದರೂ ಸಂತ್ರಸ್ತರು ಅದನ್ನು ಕೇಳಲು ಸಿದ್ದರಿಲ್ಲ. 80 ಕೋಟಿ ಬೆಲೆ ಬಾಳುವ ಸರ್ಕಾರದ ಭೂಮಿಯನ್ನು ಒತ್ತುವರಿದಾರರಿಗೆ ಬಿಟ್ಟು ಕೊಟ್ಟು ಸರ್ಕಾರ ತಲೆ ತಗ್ಗಿಸಲಿದೆಯೇ ಅಥವಾ ಸಂತ್ರಸ್ಥರಿಗೆ ಬೇರೆ ಜಾಗದಲ್ಲಿ ಪುನರ್‌ ವಸತಿ ಕಲ್ಪಿಸಿ ಕೈ ತೊಳೆದುಕೊಳ್ಳಲಿದೆಯೇ ಕಾದು ನೋಡಬೇಕಿದೆ.

RELATED ARTICLES

Latest News