ಬೆಂಗಳೂರು,ಜ.5- ರಾಜಧಾನಿ ಬೆಂಗಳೂರಿನ ಜೆ. ಜೆ ನಗರದಲ್ಲಿ ಓಂಶಕ್ತಿ ಭಕ್ತರ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿರುವ ಜಿಹಾದಿ ಮನಸ್ಥಿತಿಯ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕು. ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಗುಂಡಾಗಿರಿ ಹೆಚ್ಚಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ತಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಹೊಸ ವರ್ಷ ರಾಜ್ಯದ ಪಾಲಿಗೆ ಹರ್ಷದಾಯಕವಾಗುವುದಿರಲಿ, ಈ 3-4 ದಿನಗಳಲ್ಲಿ, ಬಳ್ಳಾರಿಯಲ್ಲಿ ನಮ ಪಕ್ಷದ ಶಾಸಕ ಜನಾರ್ದನ ರೆಡ್ಡಿ ಮೇಲೆ ಕೊಲೆ ಯತ್ನ ನಡೆದಿದೆ, ಯಲ್ಲಾಪುರದಲ್ಲಿ ಹಾಡಹಗಲೇ ಹಿಂದೂ ಹುಡುಗಿಯ ಹತ್ಯೆ ಪ್ರಕರಣ ನಡೆದಿದೆ, ಬೆಂಗಳೂರಿನಲ್ಲಿ ಓಂಶಕ್ತಿ ಭಕ್ತರ ಮೆರವಣಿಗೆ ಮೇಲೆ ಕಲ್ಲುತೂರಾಟ ನಡೆದು ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ಕೀಳು, ಓಟ್ ಬ್ಯಾಂಕ್ ರಾಜಕೀಯಗಳಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೋ ಅಥವಾ ಸತ್ತಿದೆಯೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ಜೆ.ಜೆ.ನಗರದಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೆರವಣಿಗೆ ಮೇಲೆ ನಡೆದ ಕಲ್ಲೆಸೆತ ಪ್ರಕರಣವನ್ನು ಪಕ್ಷ ಕಟುವಾಗಿ ಖಂಡಿಸುತ್ತದೆ. ಘಟನೆಯಲ್ಲಿ ಪಾಲ್ಗೊಂಡಿದ್ದ ಅಮಾಯಕ ಮಹಿಳೆಯರು ಮತ್ತು ಮಕ್ಕಳು ಗಾಯಗೊಂಡಿದ್ದು, ರಾಜ್ಯದಲ್ಲಿ ಗೂಂಡಾ ರಾಜ್ಯ ತಲೆ ಎತ್ತಿರುವುದಕ್ಕೆ ಮತ್ತೊಂದು ಸ್ಪಷ್ಟ ನಿದರ್ಶನವಾಗಿದೆ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರ ಒಂದು ಸಮುದಾಯದ ಬಗ್ಗೆ ಮೃದುಧೋರಣೆ ಹೊಂದಿರುವುದರಿಂದಲೇ ರಾಜ್ಯದಲ್ಲಿ ಮೇಲಿಂದ ಮೇಲೆ ಮತಾಂಧರ, ದುಷ್ಕರ್ಮಿಗಳ ಅಪರಾಧಿ ಕೃತ್ಯಗಳು, ಅಟ್ಟಹಾಸಗಳು ನಡೆಯುತ್ತಿವೆ. ನಮ ನೆಲದಲ್ಲಿ, ನಮ ಧಾರ್ಮಿಕ ಆಚರಣೆಗಳನ್ನು, ನಾವೇ ಭಯದಿಂದ ಆಚರಿಸುವ ಪರಿಸ್ಥಿತಿ ನಿರ್ಮಿಸಿರುವ ಕಾಂಗ್ರೆಸ್ ದುರಾಡಳಿತ, ಗೂಂಡಾಗಿರಿ ಗ್ಯಾರಂಟಿ ಯಿಂದಾಗಿ ಬಹುಸಂಖ್ಯಾತರೇ ಭಯದಿಂದ ಬದುಕುವಂತಾಗಿದೆ.
ತಮ ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ಬಹುಸಂಖ್ಯಾತರ ಧಾರ್ಮಿಕ ಭಾವನೆಗಳನ್ನು ಕೂಡ ತುಳಿಯುತ್ತಿರುವ ಈ ಕಾಂಗ್ರೆಸ್ ಸರ್ಕಾರ, ರಾಜ್ಯದ ಇತಿಹಾಸದಲ್ಲೇ ಅತ್ಯಂತ ಕೆಟ್ಟ, ದೌರ್ಭಾಗ್ಯಪೂರ್ಣ ಸರ್ಕಾರವಾಗಿದೆ. ಹಿಂದೂಗಳ ಹಬ್ಬಗಳಿಗೆ, ಆಚರಣೆಗಳಿಗೆ ರಕ್ಷಣೆ ಇಲ್ಲದ ಇಂತಹ ಉದ್ವಿಗ್ನ ಸ್ಥಿತಿ ಕರ್ನಾಟದಲ್ಲಿ ಬಂದಿರುವುದೇ ಕಾಂಗ್ರೆಸ್ ಸರ್ಕಾರದ ದೊಡ್ಡ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಶಾಂತಿ ಕದಡಲು ಮೇಲಿಂದ ಮೇಲೆ ಇಂತಹ ಉದ್ದೇಶಪೂರ್ವಕ ಪ್ರಚೋದನಕಾರಿ ಕೃತ್ಯಗಳು ನಡೆಯುತ್ತಿದ್ದರೂ, ರಾಜ್ಯ ಸರ್ಕಾರದ ದಿವ್ಯ ಮೌನ ನಾಚಿಕೆಗೇಡು ಮಾತ್ರವಲ್ಲ, ಹೇಡಿತನ, ನಿರ್ಲಜ್ಜತನದ ಪರಮಾವಧಿ. ದ್ವೇಷ ಭಾಷಣ ಇರಲಿ, ತನ್ನ ಓಟ್ ಬ್ಯಾಂಕಿನ ದ್ವೇಷ ಕೃತ್ಯಗಳಿಗೂ ಕಾಂಗ್ರೆಸ್ ಸರ್ಕಾರ ಏನೂ ಕ್ರಮ ಕೈಗೊಳ್ಳುವುದಿಲ್ಲ ಎನ್ನುವುದು ಗೊತ್ತಿರುವುದರಿಂದಲೇ ಸಮಾಜಘಾತುಕರು ಭಯವಿಲ್ಲದೆ ಮನಬಂದಂತೆ ವರ್ತಿಸುತ್ತಿದ್ದಾರೆ.
ಇದಕ್ಕೆ ಮುಖ್ಯಮಂತ್ರಿಗಳು, ಗೃಹ ಸಚಿವರೇ ಸಂಪೂರ್ಣ ಹೊಣೆಗಾರರು! ಮಾನ್ಯ ಮುಖ್ಯಮಂತ್ರಿಗಳೇ, ದುಷ್ಕೃತ್ಯ ಎಸಗಿರುವ ಜಿಹಾದಿ ಮನಸ್ಥಿತಿಯ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಿ, ಜೈಲಿಗಟ್ಟಿ. ಇಲ್ಲದಿದ್ದರೆ ರಾಜ್ಯಾದ್ಯಂತ ಜನಾಗ್ರಹದ ಕಿಚ್ಚು ಎದುರಿಸಲು ಸಿದ್ಧರಾಗಿ. ಜನರ ತಾಳೆಯನ್ನು ಪರೀಕ್ಷಿಸಬೇಡಿ ಎಂದು ಸರ್ಕಾರದ ವಿರುದ್ಧ ಟ್ವೀಟ್ ಮೂಲಕ ವಿಜಯೇಂದ್ರ ಕಿಡಿಕಾರಿದ್ದಾರೆ.
ತಕ್ಷಣವೇ ಬಂಧಿಸದೇ ಇರುವ ಕುರಿತು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಕೂಡಾ ಪೋಸ್ಟ್ ಮಾಡಿದ್ದು, ರಾಜಧಾನಿ ಬೆಂಗಳೂರಿನ ಜೆ.ಜೆ.ನಗರದಲ್ಲಿ ಓಂಶಕ್ತಿ ಭಕ್ತರ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿರುವ ಜಿಹಾದಿ ಮನಸ್ಥಿತಿಯ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕು. ಕನ್ನಡಿಗರ ತಾಳೆಯನ್ನು ಪರೀಕ್ಷಿಸಬೇಡಿ ಎಂದು ರಾಜ್ಯ ಸರ್ಕಾರಕ್ಕೆ ನೇರ ಎಚ್ಚರಿಕೆ ಕೊಟ್ಟಿದ್ದಾರೆ.
ತಮ ಸಾಮಾಜಿಕ ಜಾಲತಾಣ ಎಕ್‌್ಸನಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ರಾಜಕಾರಣದಿಂದಾಗಿ ಮತಾಂಧ ದುಷ್ಕರ್ಮಿಗಳ, ಸಮಾಜ ಘಾತುಕ ಶಕ್ತಿಗಳ ಅಟ್ಟಹಾಸ ಮಿತಿ ಮೀರಿದೆ. ಬಹುಸಂಖ್ಯಾತರ ಧಾರ್ಮಿಕ ಆಚರಣೆಗಳಿಗೆ ರಕ್ಷಣೆ ಇಲ್ಲದಂತಾಗಿದೆ, ಜನಸಾಮಾನ್ಯರಿಗೆ ನೆಮದಿ ಇಲ್ಲದಂತಾಗಿದೆ. ಇಷ್ಟಾದರೂ ಕಾಂಗ್ರೆಸ್ ಸರಕಾರದ ಮೌನ ಮತ್ತು ನಿರ್ಲಕ್ಷ್ಯ ನಾಚಿಕೆಗೇಡು. ದ್ವೇಷ ಕೃತ್ಯ ಎಸಗುತ್ತಿರುವ ಜಿಹಾದಿ ಮನಸ್ಥಿತಿಯ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಅತ್ತ ಸಿಎಂ ಸಿದ್ದರಾಮಯ್ಯನವರು ಅತ್ಯಂತ ದೀರ್ಘಾವಧಿ ಮುಖ್ಯಮಂತ್ರಿ ಎಂಬ ದಾಖಲೆ ಮಾಡುವ ಕನಸು ಕಾಣುತ್ತ ಔತಣಕೂಟ, ಸಮಾವೇಶ ಎಂದು ಸಂಭ್ರಮ ಪಡುತ್ತಿದ್ದರೆ, ಇತ್ತ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೊಸ ವರ್ಷದ ಮೊದಲ ವಾರದಲ್ಲೇ ರಾಜ್ಯದಲ್ಲಿ ಗೂಂಡಾರಾಜ್ಯದ ಗದ್ದಲ ಸದ್ದು ಮಾಡುತ್ತಿದೆ. ಬಳ್ಳಾರಿಯಲ್ಲಿ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಅವರ ಮೇಲೆ ಕೊಲೆ ಯತ್ನ. ಯಲ್ಲಾಪುರದಲ್ಲಿ ಹಿಂದೂ ಹುಡುಗಿಯ ಹತ್ಯೆ. ಬೆಂಗಳೂರಿನಲ್ಲಿ ಓಂಶಕ್ತಿ ಭಕ್ತರ ಮೆರವಣಿಗೆ ಮೇಲೆ ಕಲ್ಲು ತೂರಾಟ, ಅಮಾಯಕ ಮಹಿಳೆಯರು-ಮಕ್ಕಳಿಗೆ ಗಾಯ. ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರೆಂಟಿ ಗೂಂಡಾ ರಾಜ್ ಗ್ಯಾರೆಂಟಿ ಎಂದು ಅಶೋಕ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
