Saturday, January 10, 2026
Homeರಾಜ್ಯಅಕ್ರಮ ಬಾಂಗ್ಲಾ ವಲಸಿಗರಿಗೆ ಮನೆ ಬಾಡಿಗೆ ನೀಡುವವರ ವಿರುದ್ಧವೂ ಕಠಿಣ ಕ್ರಮ : ಪರಮೇಶ್ವರ್ ವಾರ್ನಿಂಗ್

ಅಕ್ರಮ ಬಾಂಗ್ಲಾ ವಲಸಿಗರಿಗೆ ಮನೆ ಬಾಡಿಗೆ ನೀಡುವವರ ವಿರುದ್ಧವೂ ಕಠಿಣ ಕ್ರಮ : ಪರಮೇಶ್ವರ್ ವಾರ್ನಿಂಗ್

Strict action against those renting houses to illegal Bangladeshi immigrants

ಬೆಂಗಳೂರು, ಜ.10- ಅಕ್ರಮವಾಗಿ ಒಳನುಸುಳಿರುವ ಬಾಂಗ್ಲಾ ನಿವಾಸಿಗಳಿಗೆ ವಾಸಕ್ಕೆ ಮನೆ ನೀಡುವ ಮಾಲೀಕರ ವಿರುದ್ಧವೂ ಪೊಲೀಸ್‌‍ ಇಲಾಖೆಯಿಂದ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಎಚ್ಚರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದ ಗಡಿಯಲ್ಲಿ ಬಾಂಗ್ಲಾ ಹಾಗೂ ಇತರ ದೇಶದ ನಿವಾಸಿಗಳು ಅಕ್ರಮವಾಗಿ ದೇಶದ ಒಳಗೆ ನುಸುಳಲು ಕೇಂದ್ರ ಸರ್ಕಾರವೇ ಹೊಣೆಯಾಗಿದೆ. ಬಿಎಸ್‌‍ಎಫ್‌ ಸೇರಿದಂತೆ ಎಲ್ಲಾ ರೀತಿಯ ಪಡೆಗಳನ್ನು ಕೇಂದ್ರ ಸರ್ಕಾರವೇ ನಿರ್ವಹಿಸುತ್ತಿದೆ. ಗಡಿಯಲ್ಲಿ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಿ ಒಳನುಸುಳುವಿಕೆಯನ್ನು ತಡೆಯುವುದು ಕೇಂದ್ರದ ಜವಾಬ್ದಾರಿ. ಆದರೆ ಆ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡದೇ ಇದ್ದಾಗ ಬಾಂಗ್ಲಾ ನಿವಾಸಿಗಳು ದೇಶದ ಒಳಗೆ ನುಸುಳುತ್ತಾರೆ ಎಂದರು.

ಬೆಂಗಳೂರಿನಲ್ಲಿ ಕೆಲವು ಪ್ರದೇಶಗಳಲ್ಲಿ ಬಾಂಗ್ಲಾ ನಿವಾಸಿಗಳು ಅಕ್ರಮವಾಗಿ ನೆಲೆಸಿದ್ದು ತಾವು ಗಡಿಯಲ್ಲಿ ದುಡ್ಡು ಕೊಟ್ಟು ಒಳ ಬಂದಿದ್ದೇವೆ. ಅಲ್ಲಿಂದ ಏಜೆಂಟರು ನಾವು ಎಲ್ಲಿ ವಾಸ ಮಾಡಬೇಕು ಸೂಚನೆ ನೀಡಿ ಮನೆಯನ್ನೂ ಬಾಡಿಗೆ ಕೊಡಿಸುತ್ತಾರೆ ಎಂದು ಕೆಲವು ಅಕ್ರಮ ನುಸುಳುಕೋರರು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಹಣ ಕೊಟ್ಟು ಒಳಗೆ ಬರುತ್ತಿದ್ದಾರೆ ಎಂದರೆ ಗಡಿಯಲ್ಲಿ ಸರಿಯಾದ ರಕ್ಷಣೆ ಇಲ್ಲ ಎಂದಾಗುತ್ತದೆ. ಕೇಂದ್ರದ ಸರ್ಕಾರ ಮತ್ತು ರಕ್ಷಣಾ ಇಲಾಖೆ ಈ ವಿಷಯವಾಗಿ ಬಿಗಿ ಕ್ರಮ ಕೈಗೊಳ್ಳಬೇಕು ಎಂದರು.

ಒಳನುಸುಳಿದವರನ್ನು ಏಜೆಂಟರು ಕರೆದು ತಂದು ಕೆಲಸ ಕೊಡಿಸಿ ಎಲ್ಲಾ ರೀತಿಯ ವ್ಯವಸ್ಥೆ ಮಾಡುತ್ತಿದ್ದಾರೆ. ಇದು ದೇಶದ ಎಲ್ಲ ರಾಜ್ಯಗಳಲ್ಲೂ ನಡೆಯುತ್ತಿದೆ ಎಂದರು. ರಾಜ್ಯ ಸರ್ಕಾರ ಆಕ್ರಮ ಬಾಂಗ್ಲಾ ನಿವಾಸಿಗಳ ವಿಚಾರದಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತಿದೆ. ನಿನ್ನೆಯೂ ಕೆಲವರನ್ನು ವಶಕ್ಕೆ ಪಡೆದಿದ್ದು ಗಡಿಪಾರು ಮಾಡುತ್ತೇವೆ ಎಂದರು.

ಅಕ್ರಮ ವಲಸಿಗರ ಬಗ್ಗೆ ಪೊಲೀಸ್‌‍ ಠಾಣೆಗಳಲ್ಲಿ ದಿನನಿತ್ಯವೂ ಪರಿಶೀಲನೆ ನಡೆಯುತ್ತಿದೆ. ಬಾಂಗ್ಲಾದೇಶ ಹಾಗೂ ಇತರ ದೇಶಗಳಿಂದ ಭಾರತಕ್ಕೆ ಸಕ್ರಮವಾಗಿ ಆಗಮಿಸಿರುವವರ ದಾಖಲಾತಿಗಳನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು. ಅಕ್ರಮವಾಗಿ ಬಂದಿರುವವರನ್ನು ಪರಿಶೀಲಿಸಲು ಸೂಚಿಸಲಾಗಿದೆ. ವಿದೇಶಿಯರು ಭಾರತಕ್ಕೆ ಬಂದಾಗ ಅವರ ಬಳಿ ಅಧಿಕೃತವಾದ ವೀಸಾ ಇಲ್ಲದೆ ಇದ್ದರೆ ಅಂತಹವರಿಗೆ ವಾಸ ಮಾಡಲು ಬಾಡಿಗೆ ಮನೆ ನೀಡುವುದು ಅಪರಾಧವಾಗಲಿದೆ. ಅಂತ ಸಂದರ್ಭದಲ್ಲಿ ಬಾಡಿಗೆ ನೀಡಿರುವ ಮನೆ ಮಾಲೀಕರ ವಿರುದ್ಧವು ಕ್ರಮ ಜರುಗಿಸಲಾಗುತ್ತದೆ. ಈ ಕುರಿತು ಕೇಂದ್ರ ಸರ್ಕಾರ ರೂಪಿಸಿರುವ ಕಾನೂನಿನಲ್ಲಿ ಸ್ಪಷ್ಟ ನಿಯಮಗಳಿವೆ ಎಂದರು.

ಬಳ್ಳಾರಿಯಲ್ಲೇ ನಡೆದ ಬ್ಯಾನರ್‌ ಗಲಭೆ ಮತ್ತು ಹುಬ್ಬಳ್ಳಿಯಲ್ಲಿ ಪೊಲೀಸರೇ ಮಹಿಳೆಯನ್ನು ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿ ಬಂಧಿಸಿದ್ದಾರೆ ಎಂಬ ಆರೋಪಗಳ ಕುರಿತು ಸಿಐಡಿ ತನಿಖೆಗೆ ನಿನ್ನೆಯೇ ಆದೇಶ ಹೊರಡಿಸಲಾಗಿದೆ. ವಿರೋಧ ಪಕ್ಷಗಳು ಸರ್ಕಾರ ಕೆಲ ವಿಷಯಗಳನ್ನು ಮುಚ್ಚಿಡುತ್ತಿದೆ ಎಂಬ ಅನುಮಾನ ವ್ಯಕ್ತಪಡಿಸುತ್ತಿವೆ. ಅದಕ್ಕಾಗಿ ಸತ್ಯಾಂಶವನ್ನು ಜನರಿಗೆ ತಿಳಿಸಲು ತನಿಖೆ ನಡೆಸಲಾಗುತ್ತಿದೆ ಎಂದರು.

ದ್ವೇಷ ಭಾಷಣ ಕಾಯ್ದೆಯನ್ನು ರಾಜ್ಯಪಾಲರು ಸಹಿ ಹಾಕದೆ ಬಾಕಿ ಉಳಿಸಿಕೊಂಡಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೆಚ್ಚಿನ ಅಧ್ಯಯನಕ್ಕಾಗಿ ರಾಜ್ಯಪಾಲರು ವಿಧೇಯಕವನ್ನು ತಮ ಬಳಿ ಉಳಿಸಿಕೊಂಡಿರಬಹುದು. ಹೆಚ್ಚುವರಿ ಮಾಹಿತಿ ಕೇಳಿದರೆ ಕೊಡುತ್ತೇವೆ. ಒಂದು ವೇಳೆ ತಿರಸ್ಕಾರ ಮಾಡಿದರೆ ನಂತರ ಏನು ಮಾಡಬೇಕು ಎಂಬುದನ್ನು ಪರಿಶೀಲಿಸುತ್ತೇವೆ ಎಂದರು.

ರಾಜ್ಯ ಸರ್ಕಾರ ಸುಮಾರು 25 ಮಸೂದೆಗಳನ್ನು ರಾಜ್ಯಪಾಲರ ಅಂಗೀಕಾರಕ್ಕಾಗಿ ಕಳುಹಿಸಲಾಗಿತ್ತು. ಒಳ ಮೀಸಲಾತಿ ವಿಚಾರವಾಗಿ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ದ್ವೇಷ ಭಾಷಣ ನಿಯಂತ್ರಣ ಮಸೂದೆ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎಂದು ಹೇಳಿದರು.
ಬೆಂಗಳೂರು ಸುರಕ್ಷಿತ ನಗರ ಎಂಬ ಕೀರ್ತಿಗೆ ಪಾತ್ರವಾಗಿದೆ. ಸಮೀಕ್ಷೆಯಲ್ಲಿ ಸುರಕ್ಷತೆ, ತಂತ್ರಜ್ಞಾನ ಮತ್ತು ಸ್ವಚ್ಛತೆ ಸೇರಿ ಹಲವಾರು ಮಾನದಂಡಗಳನ್ನು ಪರಿಗಣಿಸಲಾಗಿದೆ. ಬೆಂಗಳೂರು ಮೊದಲ ಸ್ಥಾನದಲ್ಲಿರುವುದಕ್ಕೆ ಅಭಿನಂದನೆಗಳು. ಇದಕ್ಕೆ ಕಾರಣವಾಗಿರುವ ಎಲ್ಲರೂ ಅಭಿನಂದನಾರ್ಹರು. ವಿರೋಧ ಪಕ್ಷದವರು ಸೇರಿದಂತೆ ಎಲ್ಲರೂ ಬೆಂಗಳೂರಿನ ಬಗ್ಗೆ ಬಹಳಷ್ಟು ಟೀಕೆ ಟಿಪ್ಪಣಿಗಳನ್ನು ಮಾಡುತ್ತಿದ್ದರು. ಅವರಿಗೆ ಈ ಸಮೀಕ್ಷೆಯ ಫಲಿತಾಂಶ ಉತ್ತರವಾಗಿದೆ ಎಂದರು.

ಜನರಿಗೆ ನ್ಯಾಯ ದೊರಕಿಸುವಲ್ಲಿ ಬೆಂಗಳೂರು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಈ ಮೊದಲೇ ಸಮೀಕ್ಷೆಯಲ್ಲಿ ಸಾಬೀತಾಗಿತ್ತು. ಈ ವರ್ಷದ ಹೊಸ ವರ್ಷಾಚರಣೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಈ ಮೊದಲೆಲ್ಲ ಹೊಸ ವರ್ಷ ಆಚರಣೆಯ ವೇಳೆಯಲ್ಲಿ ಸಾವು ನೋವುಗಳಾಗುತ್ತಿದ್ದವು. ಈ ಬಾರಿ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದರು.

ಪರಮೇಶ್ವರ್‌ ಅವರು ಮುಖ್ಯಮಂತ್ರಿಯಾಗಬೇಕು ಎಂಬ ಒತ್ತಾಯದಿಂದ ಸರ್ವಧರ್ಮ ಪೂಜೆ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲರಿಗೂ ತಮ ನಾಯಕರು ಉನ್ನತ ಸ್ಥಾನಕ್ಕೇರಬೇಕು ಎಂಬ ಅಭಿಲಾಷೆಗಳಿರುತ್ತವೆ. ಅದರಲ್ಲೂ ತಮ ಕ್ಷೇತ್ರ ಕೊರಟಗೆರೆ ಜನರಿಗೆ ಸಹಜವಾದ ಆಸೆಗಳಿರುತ್ತವೆ, ಅದನ್ನು ತಪ್ಪು ಎಂದು ಭಾವಿಸಲು ಸಾಧ್ಯವಿಲ್ಲ. ಪರಮೇಶ್ವರ್‌ ಅವರು ಮೊದಲ ದಲಿತ ಮುಖ್ಯಮಂತ್ರಿಯಾಗುತ್ತಾರೆ ಎಂದು ಶಾಸ್ತ್ರ ಹೇಳಿದವರಿಗೆ ಒಳ್ಳೆಯದಾಗಲಿ. ಆ ವಿಚಾರ ಬಿಟ್ಟು ಬೇರೆ ಚರ್ಚೆ ಮಾಡಿ ಎಂದು ಸಿಡಿಮಿಡಿ ವ್ಯಕ್ತ ಪಡಿಸಿದರು.

ಕೇರಳದ ಗಡಿ ಭಾಗದಲ್ಲಿ 200 ಕ್ಕೂ ಹೆಚ್ಚು ಕನ್ನಡ ಶಾಲೆಗಳಿವೆ ಅಲ್ಲಿ ಮಲಯಾಳಂ ಕಲಿಸಬೇಕು ಎಂದು ಕೇರಳ ಸರ್ಕಾರ ನಿರ್ಧಾರ ಮಾಡಿದೆ. ಈ ವೇಳೆ ಕನ್ನಡಕ್ಕೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಬೇಕು. ಮಂಗಳೂರು ವ್ಯಾಪಾರಿ ಕೇಂದ್ರವಾಗಿದೆ. ಅಲ್ಲಿ ಮಲೆಯಾಳಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗೆ ನೋಡಿದರೆ ಕೇರಳದಿಂದ ಬಂದು ಇಲ್ಲಿ ವ್ಯಾಪಾರ ಮಾಡುವರು ಕನ್ನಡ ಕಲಿಯಬೇಕು. ಕಾಸರಗೋಡಿನಲ್ಲಿ ಕನ್ನಡ ಮಾತನಾಡುವರು ಹೆಚ್ಚಿದ್ದಾರೆ ಅಲ್ಲಿ ಕನ್ನಡಕ್ಕೆ ಆಧ್ಯತೆ ಇರಬೇಕು ಎಂದರು.

ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂಬುದು ದೊಡ್ಡ ಪ್ರಮಾಣದ ವಾದ. ಅದರ ಬಗ್ಗೆ ವ್ಯಾಪಕ ಚರ್ಚೆಯಾಗಬೇಕು. ನೆರೆ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಉತ್ತಮ ಬಾಂಧವ್ಯ ಇರಬೇಕಾಗುತ್ತದೆ. ಪರಸ್ಪರ ಸಂಘರ್ಷಕ್ಕೆ ಹೋದರೆ ಅದು ಬೇರೆ ಸ್ವರೂಪಕ್ಕೆ ತಿರುಗುತ್ತದೆ. ಕಾಸರಗೋಡು ವಿಷಯವಾಗಿ ವಿವಾದ ಇಲ್ಲದೆ ಬಗೆಹರಿಸಿಕೊಳ್ಳಬೇಕು. ಭಾಷಾ ಸಾಮರಸ್ಯ ಮತ್ತು ಸೌಹಾರ್ದತೆಯ ಅಗತ್ಯವಿದೆ ಎಂದರು.

RELATED ARTICLES

Latest News