ಬೆಳಗಾವಿ,ಡಿ.10– ಆರ್‌ಟಿಒ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಸೇವೆಯಿಂದ ಅಮಾನತುಪಡಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಎಚ್ಚರಿಸಿದ್ದಾರೆ.
ವಿಧಾನಪರಿಷತ್‌ನಲ್ಲಿ ಸದಸ್ಯೆ ಉಮಾಶ್ರೀ ಪರವಾಗಿ ಐವಾನ್ ಡಿಸೋಜ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಆರ್‌ಟಿಒ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿತ್ತು. ಇದನ್ನು ತಪ್ಪಿಸಲು ಆನ್‌ಲೈನ್ ವ್ಯವಸ್ಥೆ ಮಾಡಿದ್ದೇವೆ. ಒಂದು ವೇಳೆ ಇದರ ಹೊರತಾಗಿಯೂ ಕಂಡುಬಂದರೆ ಮುಲಾಜಿಲ್ಲದೆ ಅಮಾನತುಪಡಿಸುವಂತೆ ಸಾರಿಗೆ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿರುವುದಾಗಿ ಹೇಳಿದರು.
ಈಗ ಸಾರ್ವಜನಿಕರು ಆರ್‌ಟಿಒ ಕಚೇರಿಗಳಿಗೆ ಹೋಗಬೇಕಾದ ಅಗತ್ಯವಿಲ್ಲ. ಆನ್‌ಲೈನ್ ಮೂಲಕ 24 ಸೇವೆಗಳು ಹಾಗೂ ಆಫ್‌ಲೈನ್ ಮೂಲಕ 28 ಸೇವೆಗಳು ಲಭ್ಯವಿದೆ. ಇದರಿಂದ ಮನೆಯಲ್ಲಿಯೇ ಕುಳಿತು ಸಾರ್ವಜನಿಕರು ಸೇವೆಯನ್ನು ಪಡೆಯಬಹುದು. ಈಗ ಸಂಪೂರ್ಣವಾಗಿ ಮಧ್ಯವರ್ತಿಗಳ ಹಾವಳಿ ನಿಂತು ಹೋಗಿದೆ ಎಂದು ನಾನು ಹೇಳಲಾರೆ. ಆದರೆ ಮುಂದಿನ ದಿನಗಳಲ್ಲಿ 100ಕ್ಕೆ ನೂರರಷ್ಟು ಇದನ್ನು ತಪ್ಪಿಸುತ್ತೇವೆ ಎಂದು ಭರವಸೆ ನೀಡಿದರು.
ನೆಲಮಂಗಲ ಸಮೀಪದ ಆರ್‌ಟಿಒ ಕಚೇರಿಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇಬ್ಬರು ಮಹಿಳಾ ಸಿಬ್ಬಂದಿ ಖಾಕಿ ಡ್ರೆಸ್ ಹಾಕಿ ಅದರ ಮೇಲೆ ಜಾಕೆಟ್ ಧರಿಸಿದ್ದರು. ಆಗ ಹಿರಿಯ ಅಧಿಕಾರಿ ಇಬ್ಬರಿಗೂ ಜಾಕೆಟ್ ತೆಗೆಯುವಂತೆ ಹೇಳಿದ್ದರು.
ಇದರಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲಿನ ಹಿರಿಯ ಅಧಿಕಾರಿಓಂಕಾರೇಶ್ವರಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ವರದಿ ಸಹ ಕೇಳಿದ್ದೇನೆ. ಈಗಾಗಲೇ ಆ ಇಬ್ಬರನ್ನೂ ಅಲ್ಲಿಂದ ವರ್ಗಾವಣೆ ಮಾಡಲಾಗಿದೆ. ತಪ್ಪು ಎಸಗಿರುವುದು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಸಿದರು.
ಪ್ರಕರಣ ಸಂಬಂಧ ಸಿಸಿಟಿವಿ ಪರಿಶೀಲನೆ ಮಾಡಲು ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಇಂಥ ಘಟನೆಗಳು ಮರುಕಳಿಸಲು ಅವಕಾಶ ನೀಡುವುದಿಲ್ಲ. ಇಲಾಖೆಯಲ್ಲಿ ಶಿಸ್ತಿಗೆ ಮೊದಲ ಆದ್ಯತೆ ಎಂದರು. ಎರಡು ವರ್ಷಗಳಲ್ಲಿ ಒಂದು ಲೈಂಗಿಕ ಪ್ರಕರಣಗಳು ಮಾತ್ರವೇ ದಾಖಲಾಗಿದೆ. 26.08.2025ರ ಲೈಂಗಿಕ ತನಿಖಾ ವಿಚಾರಣೆ ನಡೆಸಿ ವರದಿ ನೀಡುವಂತೆ ಹೇಳಿದ್ದೇನೆ. ಆಯುಕ್ತರನ್ನು ಕೇಳಿದಾಗ ಯಾವುದೇ ಪ್ರಕರಣ ಇಲ್ಲ ಎಂದು ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.
