ಬೆಳಗಾವಿ,ಡಿ.10- ಕೇಂದ್ರ ಸರ್ಕಾರದ ನಿರ್ಧಾರಗಳಿಂದ ಸಕ್ಕರೆ ಕಾರ್ಖಾನೆಗಳು ಮತ್ತು ಕಬ್ಬು ಬೆಳೆಗಾರರು ಇಬ್ಬರಿಗೂ ನಷ್ಟವಾಗುತ್ತಿದೆ ಎಂದು ಕೃಷಿ ಮಾರುಕಟ್ಟೆ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಗಂಭೀರ ಆರೋಪ ಮಾಡಿದರು.ವಿಧಾನಸಭೆಯಲ್ಲಿಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಯ ನಡುವೆ ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಸಚಿವರು, ಸಕ್ಕರೆ ಕಾರ್ಖಾನೆಗಳ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದರು.
ಸಿಸಾ ಹಾಗೂ ನಿರಾಣಿ ಶುಗರ್ ಸಂಸ್ಥೆಗಳು ನ್ಯಾಯಾಲಯದ ಮೊರೆ ಹೋಗಿದ್ದು, ಎಂ ಎಸ್ ಪಿ ಸಕ್ಕರೆ ಬೆಲೆಯನ್ನು ಹೆಚ್ಚಿಸಬೇಕೆಂದು ಕಾರ್ಖಾನೆಗಳ ಮಾಲೀಕರು ಏಳು ವರ್ಷದಿಂದ ಹೋರಾಟ ನಡೆಸುತ್ತಿದ್ದಾರೆ. ಈಗಿರುವ 31 ರೂಪಾಯಿ ಬೆಲೆಯನ್ನು ಹೆಚ್ಚಿಸಲು ಎರಡು ದಾರಿಗಳಿವೆ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಸಕ್ಕರೆ ಬೆಲೆಯನ್ನು ಹೆಚ್ಚಿಸಬಹುದು. ಚಾಕ್ಲೇಟ್, ಸಿಹಿ ಕಾರ್ಖಾನೆಗಳ ಮಾಲೀಕರು ಒಂದು ಕೆಜಿ ಸಕ್ಕರೆಗೆ ಕೋವಾ ಹಾಗೂ ಇತರ ಮಿಶ್ರಣ ಮಾಡಿ 2 ಕೆಜಿ ಸಿಹಿ ಹೆಚ್ಚಿಸಿಕೊಳ್ಳುತ್ತಾರೆ. ಅವರಿಗೆ ಪ್ರತ್ಯೇಕ ದರ ನಿಗದಿಪಡಿಸಬೇಕು. ಜನಸಾಮಾನ್ಯರು ಬಳಸುವ ಸಕ್ಕರೆಯ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಬೇಕು ಎಂದರು.
ಪ್ರತಿ ಲೀಟರ್ ಎಥೇನಾಲ್‌ಗೆ ಎಪ್ಪತ್ತು ರೂಪಾಯಿ ದರವಿದೆ, ಅದನ್ನು ಹೆಚ್ಚಿಸಬೇಕಿದೆ. ಪೆಟ್ರೋಲ್ ಜೊತೆ ಎಥೇನಾಲ್ ಮಿಶ್ರಣ ಮಾಡಿ ಯಾರು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬ ಚರ್ಚೆ ಈಗ ಬೇಡ. ರಫ್ತು ಅನ್ನು ಎರಡು-ಮೂರು ವರ್ಷಗಳಿಂದ ತಡೆಹಿಡಿಯಲಾಗಿದೆ. ಅದನ್ನು ಸಡಿಲ ಮಾಡಬೇಕು. ಈ ಮೂರು ಸಲಹೆಗಳನ್ನು ಕೇಂದ್ರ ಸರ್ಕಾರ ಜಾರಿ ಮಾಡಿದರೆ ಸಕ್ಕರೆ ಕಾರ್ಖಾನೆಗಳು ಬದುಕಿಕೊಳ್ಳುತ್ತವೆ ಎಂದರು.
ಬಿಜೆಪಿಯ ನಾಯಕರು ಕೇಂದ್ರದ ಬಳಿ ನಿಯೋಗ ಕರೆದುಕೊಂಡು ಹೋದರೆ ನಾವು ಕೇಂದ್ರದವರಿಗೆ ಮನವರಿಕೆ ಮಾಡಿಕೊಡುತ್ತೇವೆ. ಈ ಬೇಡಿಕೆಗಳು ದೇಶಾದ್ಯಂತ ಏಕರೂಪದಲ್ಲಿದೆ ಎಂದರು.ಚರ್ಚೆ ಮುಂದುವರಿಸಿದ ಆರ್.ಅಶೋಕ್, ಸಕ್ಕರೆ ಕಾರ್ಖಾನೆಗಳು ನಷ್ಟದಲ್ಲಿವೆ ಎಂದು ಹೇಳುತ್ತಾರೆ. ಹಾಗಿದ್ದರೂ 32 ಮಂದಿ ಹೊಸ ಸಕ್ಕರೆ ಕಾರ್ಖಾನೆಗೆ ಅರ್ಜಿ ಸಲ್ಲಿಸಿದ್ದಾರೆ. ನಷ್ಟದಲ್ಲಿದ್ದರೆ ಹೊಸ ಕಾರ್ಖಾನೆಗಳನ್ನು ಏಕೆ ಸ್ಥಾಪಿಸಲಾಗುತ್ತಿದೆ ಎಂದು ಪ್ರಶ್ನಿಸಿದರು.
ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು. ತೂಕ ಮತ್ತು ಅಳತೆಯಲ್ಲಿ ಆಗುತ್ತಿರುವ ಮೋಸವನ್ನು ತಡೆಯಬೇಕು ಎಂದು ಒತ್ತಾಯಿಸಿದರು.ಮುಧೋಳದ ಸಮೀರಾ ಸಕ್ಕರೆ ಕಾರ್ಖಾನೆ ಆವರಣದಲ್ಲಿ ದೊಡ್ಡದಾದ ದಾಂಧಲೆಯಾಗಿ 240 ಟ್ರ್ಯಾಕ್ಟರ್‌ಗಳು ಹಾಗೂ 5 ಬೈಕುಗಳಿಗೆ ಬೆಂಕಿ ಹಚ್ಚಲಾಗಿದೆ. 1933 ಟನ್ ಕಬ್ಬು ಸುಟ್ಟುಹೋಗಿದೆ. ಸರ್ಕಾರ ಜೀವಂತವಾಗಿದ್ದರೆ ರೈತರ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚುವ ಧೈರ್ಯವನ್ನು ಯಾರೂ ಮಾಡುತ್ತಿರಲಿಲ್ಲ ಎಂದು ಹೇಳಿದರು.
ಮುಧೋಳ ಕ್ಷೇತ್ರದ ಶಾಸಕರೂ ಆಗಿರುವ ಅಬಕಾರಿ ಸಚಿವ ಆರ್.ಬಿ.ತಿಮಾಪುರ್, ತಪ್ಪ ಸಂದೇಶ ಹೋಗಬಾರದು. ಹೋರಾಟಗಾರರ ಮೇಲೆ ಲಾಠಿ ಪ್ರಹಾರ ಮಾಡಬಾರದು ಎಂಬ ತಾಳೆಯನ್ನು ಸರ್ಕಾರ ಅನುಸರಿಸಿತ್ತು. ಎಸ್ ಪಿ ಅವರಿಗೆ ಕಾಲು ಮುರಿದರೂ ನಾವು ಸಹನೆಯಿಂದ ಇದ್ದವು. ಇದನ್ನು ದುರುಪಯೋಗಪಡಿಸಿಕೊಂಡು ಕೆಲವರು ಬೆಂಕಿ ಹಚ್ಚಿದ್ದಾರೆ ಎಂದು ಕಿಡಿಕಾರಿದರು.
ಆರ್.ಅಶೋಕ್ ಅವರು ಚರ್ಚೆ ಮುಂದುವರಿಸಿ, ತಪ್ಪನ್ನು ಯಾರೂ ಸಮರ್ಥಿಸಬಾರದು. ಬೆಂಕಿ ಅನಾಹುತದಿಂದ ನಷ್ಟಕ್ಕೆ ಒಳಗಾಗಿರುವ ರೈತರಿಗೆ ಪರಿಹಾರ ಪಾವತಿಸಬೇಕು ಎಂದು ಆಗ್ರಹಿಸಿದರು.
