ಬೆಂಗಳೂರು,ಜ.9- ಬಿಜೆಪಿ ಜೊತೆ ಜೆಡಿಎಸ್ ಶೀಘ್ರವೇ ವಿಲೀನವಾಗಲಿದೆ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಜೆಡಿಎಸ್ ವಿಧಾನ ಪರಿಷತ್ ಉಪನಾಯಕ ಹಾಗೂ ಶಾಸಕ ಟಿ.ಎ. ಶರವಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಒಬ್ಬ ಹಿರಿಯ ರಾಜಕಾರಣಿಯಾಗಿ ಇಷ್ಟು ಹಗುರವಾಗಿ ಮತ್ತು ಬೇಜವಾಬ್ದಾರಿಯುತವಾಗಿ ಮಾತನಾಡುವುದು ಆಶ್ಚರ್ಯ ತಂದಿದೆ. ಅವರು ಮೊದಲು ತಮ ಕಾಂಗ್ರೆಸ್ ಪಕ್ಷದ ಸ್ಥಿತಿಯನ್ನು ನೋಡಿಕೊಳ್ಳಲಿ. ನಮ ಮೈತ್ರಿ ಕಂಡು ಅವರಿಗೆ ನಡುಕ ಹುಟ್ಟಿದೆ ಎಂದು ಕಿಡಿಕಾರಿದ್ದಾರೆ.
ಇಂತಹ ಊಹಾಪೋಹದ, ಚಿಲ್ಲರೆ ಮಾತುಗಳನ್ನಾಡುವ ಮೂಲಕ ಅವರು ಸಾರ್ವಜನಿಕ ಬದುಕಿನಲ್ಲಿ ತಮ ಘನತೆಯನ್ನು ತಾವೇ ಕಳೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್‌ಜೆಡಿ ಜೊತೆ ವಿಲೀನವಾಗಲಿ :
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಡಿ.ಕೆ. ಶಿವಕುಮಾರ್ ಅವರು ಮೊದಲಿಗೆ ಕಾಂಗ್ರೆಸ್ ಅಸ್ತಿತ್ವದ ಬಗ್ಗೆ ಚಿಂತಿಸಲಿ. ಅವರ ಕಾಂಗ್ರೆಸ್ ಪಕ್ಷ ದೇಶದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಬಿಹಾರದಲ್ಲಿ ಕೇವಲ ಐದು ಸ್ಥಾನ ಗೆದ್ದಿರುವ ಕಾಂಗ್ರೆಸ್ ಮೊದಲು ಅಲ್ಲಿನ ಆರ್‌ಜೆಡಿ ಜೊತೆ ವಿಲೀನವಾಗಲಿ. ನಮ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡಲು ಡಿಕೆಶಿ ಯಾರು? ಎಂದು ಪ್ರಶ್ನಿಸಿದ್ದಾರೆ.
ಮೈತ್ರಿ ಶಕ್ತಿ ಕಂಡು ಕಾಂಗ್ರೆಸ್‌ಗೆ ನಡುಕ :
ರಾಜ್ಯದಲ್ಲಿ ಜನತಾದಳ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ಪ್ರಬಲ ಶಕ್ತಿಯಾಗಿ ಹೊರಹೊಮಿದೆ. ಸರ್ಕಾರದ ಆಡಳಿತದಿಂದ ಜನರಿಗೆ ಭ್ರಮನಿರಸನವಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆಯಲು ಸನ್ನದ್ಧರಾಗಿದ್ದಾರೆ. ಇದರಿಂದ ಧೃತಿಗೆಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜನರಲ್ಲಿ ಗೊಂದಲ ಮೂಡಿಸಲು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಅಧಿಕಾರ ಹಂಚಿಕೆ ವಿಫಲ – ಡಿಕೆಶಿಗೆ ದಿಗ್ಭ್ರಮೆ:
ಸರ್ಕಾರದ ಅಧಿಕಾರ ಹಂಚಿಕೆ ರಾಜಕೀಯದಲ್ಲಿ ಡಿ.ಕೆ. ಶಿವಕುಮಾರ್ ವಿಫಲರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಮೇಲುಗೈ ಕಂಡು ಡಿಕೆಶಿ ದಿಗ್ಭ್ರಮೆಗೊಂಡಿದ್ದಾರೆ. ಅವರಿಗೆ ದಿಕ್ಕು ತೋಚದಂತಾಗಿದ್ದು, ಹತಾಶೆಯಿಂದ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಶಾಸಕ ಶರವಣ ಕಿಡಿಕಾರಿದ್ದಾರೆ.
