ಬೆಂಗಳೂರು,ಡಿ.2-ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವ ನೆಪದಲ್ಲಿ ಸಾಫ್ಟ್ ವೇರ್ ಎಂಜಿನಿಯರ್‌ಗೆ ನಂಬಿಸಿ 48 ಲಕ್ಷ ರೂ. ಪಡೆದು ವಂಚಿಸಿದ್ದ ಆರೋಪದ ಮೇಲೆ ಪುಣೆಯ ವ್ಯಕ್ತಿಯೊಬ್ಬನನ್ನು ಜ್ಞಾನಭಾರತಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮಹರಾಷ್ಟ್ರದ ಪುಣೆಯ ವಿಜಯ್‌ಗುರೂಜಿ ಎಂಬಾತನನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಲೈಂಗಿಕ ಸಮಸ್ಯೆಯಿಂದ ಬಳಲುತ್ತಿದ್ದ ಟೆಕ್ಕಿ ಚಿಕಿತ್ಸೆಗಾಗಿ ಕೆಂಗೇರಿಯ ಆಸ್ಪತ್ರೆಯೊಂದಕ್ಕೆ ಹೋಗಿ ವಾಪಸ್ ಬರುತ್ತಿದ್ದಾಗ ರಸ್ತೆ ಪಕ್ಕದಲ್ಲಿ ಟೆಂಟ್ ಹಾಕಿಕೊಂಡು ಲೈಂಗಿಕ ಸಮಸ್ಯೆಗೆ ಚಿಕಿತ್ಸೆ ಎಂಬ ಬೋರ್ಡ್ ಗಮನಿಸಿ ಟೆಂಟ್ ಒಳಗೆ ಹೋಗಿದ್ದಾರೆ.ಅಲ್ಲಿದ್ದ ವಿಜಯ್‌ಗುರೂಜಿಯನ್ನು ಮಾತನಾಡಿಸಿ ತನ್ನ ಸಮಸ್ಯೆ ಹೇಳಿಕೊಂಡಾಗ ಆಯುರ್ವೇದಿಕ್ ಚಿಕಿತ್ಸೆಯಿಂದ ಗುಣವಾಗುತ್ತದೆ ಎಂದು ನಂಬಿಸಲಾಗಿದೆ.
ಒಂದು ಔಷಧಿಯ ಹೆಸರು ಹೇಳಿ 1 ಗ್ರಾಂ ಗೆ 1.60 ಲಕ್ಷ ರೂ ಎಂದು ನಿಗದಿಪಡಿಸಿ ಯಶವಂತಪುರದ ವಿಜಯಲಕ್ಷ್ಮೀ ಆಯುರ್ವೇದಿಕ್ ಶಾಪ್‌ನಲ್ಲಿ ಖರೀದಿಸುವಂತೆ ಹೇಳಿದ್ದಾರೆ.ಈ ಔಷಧಿ ಖರೀದಿಸಲು ಯಾರನ್ನು ಜೊತೆಗೆ ಕರೆದುಕೊಂಡು ಹೋಗಬೇಡಿ, ಆನ್‌ಲೈನ್ ಪೇಮೆಂಟ್ ಮಾಡಬಾರದು ಎಂದು ಷರತ್ತುಗಳನ್ನು ಹಾಕಿದ್ದರಿಂದ ಟೆಕ್ಕಿ ಯಾರನ್ನು ಜೊತೆಗೆ ಕರೆದೊಯ್ಯದೇ ಹಲವಾರು ಬಾರಿ ಆ ಔಷಧಿಯನ್ನು ಖರೀದಿಸುತ್ತಾ ಒಟ್ಟು 48 ಲಕ್ಷ ರೂ. ಖರ್ಚು ಮಾಡಿದ್ದಾರೆ.
ಆದರೆ ತನ್ನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಬದಲಾಗಿ ಆರೋಗ್ಯ ಹದಗೆಟ್ಟಿದೆ. ತಕ್ಷಣ ಟೆಕ್ಕಿ ಆಸ್ಪತ್ರೆಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಿದಾಗ ಕಿಡ್ನಿಗೆ ಗಂಭೀರ ಸಮಸ್ಯೆಯಾಗಿರುವುದು ಗೊತ್ತಾಗಿದೆ.
ತಾನು ತೆಗೆದುಕೊಳ್ಳುತ್ತಿದ್ದ ಔಷಧಿಯಿಂದಲೇ ಕಿಡ್ನಿಗೆ ಹಾನಿಯಾಗಿದೆ ಎಂದು ವೈದ್ಯರು ತಿಳಿಸಿದ್ದರಿಂದ ಗಾಬರಿಯಾದ ಟೆಕ್ಕಿ ವಾಪಸ್ ಆಯುರ್ವೇದ ಔಷಧಿ ಪಡೆಯಲು ಹೇಳಿದ್ದ ವಿಜಯ್‌ಗುರೂಜಿಯನ್ನು ಭೇಟಿ ಮಾಡಿದಾಗ ಅವರು ಟೆಕ್ಕಿಗೆ ಬೆದರಿಕೆ ಹಾಕಿದ್ದಾರೆ.
ಹಾಗಾಗಿ ಟೆಕ್ಕಿ ಪೊಲೀಸರಿಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿಜಯ್‌ಗುರೂಜಿಯನ್ನು ವಶಕ್ಕೆ ಪಡೆದು, ಔಷಧಿ ಪಡೆದಿದ್ದ ಆಯುರ್ವೇದಿಕ್ ಶಾಪ್ ಬಗ್ಗೆಯೂ ತನಿಖೆ ಮುಂದುವರೆಸಿದ್ದಾರೆ.
