ಬೆಂಗಳೂರು,ಡಿ.22- ಕೃಷಿಯೇತರ ಆಸ್ತಿ ಮತ್ತು ಸ್ವತ್ತುಗಳ ನೋಂದಣಿಯಲ್ಲಿ ಕಳೆದ ಮೂರು ವಾರಗಳಿಂದ ರಾಜ್ಯದಲ್ಲಿ ವ್ಯತ್ಯಯವಾಗಿದೆ. ತಮ ಸ್ವತ್ತುಗಳನ್ನು ನೋಂದಣಿ ಮಾಡಿಸಲು ಹೋದವರು ಸಕಾಲದಲ್ಲಿ ನೋಂದಣಿಯಾಗದೆ ಪರದಾಡುವಂತಾಗಿದೆ.
ಆದರೆ ಕೃಷಿ ಭೂಮಿಗಳ ನೋಂದಣಿಯಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ. ಭೂ ಪರಿವರ್ತನೆಗೆ ಸಂಬಂಧಿ ಸಿದ ಸ್ವತ್ತುಗಳ ನೋಂದಣಿ ಮಾಡಿಸುವಾಗ ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ದರಕ್ಕೆ ನೋಂದಣಿ ಶುಲ್ಕ ಪಾವತಿಸಬೇಕಾಗುತ್ತದೆ ಎಂಬ ಆರೋಪವೂ ಕೇಳಿಬಂದಿದೆ. ರಾಜ್ಯಸರ್ಕಾರ ಈಗಾಗಲೇ ನೋಂದಣಿ, ಮುದ್ರಾಂಕ ಶುಲ್ಕವನ್ನು ಹೆಚ್ಚಳ ಮಾಡಿದೆ. ಇದರ ಜೊತೆಗೆ ಆಸ್ತಿಗಳ ನೋಂದಣಿಗೆ ಹಲವು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ.
ಸ್ವತ್ತುಗಳ ಇ-ಖಾತಾಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳು ನೋಂದಣಿ ಸಂದರ್ಭದಲ್ಲಿ ಕಂಡುಬರುತ್ತಿವೆ. ಇ-ಖಾತಾ ಲಿಂಕ್ ಸರಿಯಾಗಿ ಆಗದಿರುವುದು, ಅಳತೆಯಲ್ಲಿ ಹೊಂದಾಣಿಕೆ ಆಗದಿರುವುದು ಕಂಡುಬರುತ್ತಿದೆ. ಸ್ವತ್ತಿನ ಕ್ರಯಪತ್ರದಲ್ಲಿ ಇರುವುದಕ್ಕೂ ಖಾತಾಗೂ ತಾಳೆಯಾಗದಿರುವುದು ಕಂಡುಬರುತ್ತಿದೆ. ಒಂದರಲ್ಲಿ ಮೀಟರ್ನಲ್ಲಿ ಅಳತೆ ಪ್ರಮಾಣ ಇದ್ದರೆ, ಮತ್ತೊಂದರಲ್ಲಿ ಅಡಿಯ ಲೆಕ್ಕದಲ್ಲಿ ಇದ್ದಾಗ ನೋಂದಣಿ ಮಾಡಲಾಗುವುದಿಲ್ಲ. ಅಲ್ಲದೆ, ಮೌಲ್ಯಮಾಪನದ ವಿಚಾರ ಹಾಗೂ ಬಿಲ್ಲಿಂಗ್ ವಿಚಾರದಲ್ಲೂ ಸಮಸ್ಯೆಗಳು ಕಂಡುಬರುತ್ತಿವೆ. ಹೀಗಾಗಿ ಸ್ವತ್ತುಗಳ ನೋಂದಣಿ ವಿಚಾರದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಉಂಟಾಗಿವೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.
ಅಳತೆ, ಮೌಲ್ಯಮಾಪನ, ಕರಾರು ಪತ್ರ, ಕ್ರಯ ಪತ್ರಗಳಲ್ಲಿ ಏಕರೂಪವಾದ ಮಾಹಿತಿ ಇದ್ದರೆ ನೋಂದಣಿಗೆ ತೊಂದರೆಯಾಗುವುದಿಲ್ಲ. ವ್ಯತ್ಯಾಸವಿದ್ದರೆ ನೋಂದಣಿ ಮಾಡಲು ಸಾಫ್್ಟವೇರ್ನಲ್ಲಿ ತಾಂತ್ರಿಕ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಉಪ ನೋಂದಣಿ ಕಚೇರಿಯ ಮೂಲಗಳು ಸ್ಪಷ್ಟಪಡಿಸಿವೆ.
ಈ ಹಿಂದೆ ಭೂ ಪರಿವರ್ತನೆ ನೋಂದಣಿ ಸುಲಭವಾಗಿ ಆಗುತ್ತಿತ್ತು. ಇ-ಖಾತಾ ಜಾರಿಯಾದ ಮೇಲೆ ಈ ರೀತಿಯ ಸಮಸ್ಯೆಗಳು ಎದುರಾಗುತ್ತಿದ್ದು, ನೋಂದಣಿ ವೆಚ್ಚವೂ ದುಪ್ಪಟ್ಟಾಗುತ್ತಿವೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಆದಷ್ಟು ಬೇಗ ನೋಂದಣಿಗೆ ಎದುರಾಗುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ಸರ್ಕಾರ ಬದಲಾಯಿಸಿ ಮೊದಲಿನಂತೆ ಸುಲಲಿತವಾಗಿ ನಗರಪ್ರದೇಶಗಳ ಆಸ್ತಿ ನೋಂದಣಿಗೆ ಅನುವು ಮಾಡಿಕೊಡಬೇಕು ಎಂಬ ಆಗ್ರಹ ವ್ಯಾಪಕವಾಗಿ ಕೇಳಿಬರುತ್ತಿವೆ.
