ಚಿಕ್ಕಬಳ್ಳಾಪುರ,ಡಿ.19- ಮನೆ ಮಾರಾಟದಿಂದ ಬಂದ 55 ಲಕ್ಷ ಹಣವನ್ನು ಬ್ಯಾಗ್‌ನಲ್ಲಿಟ್ಟುಕೊಂಡು ಉದ್ಯಮಿ ಬಸ್‌ನಲ್ಲಿ ಹೈದರಾಬಾದ್‌ಗೆ ಪ್ರಯಾಣ ಮಾಡುತ್ತಿದ್ದಾಗ ಹಣದ ಬ್ಯಾಗನ್ನು ಅಪಹರಿಸಿ ಪರಾರಿಯಾಗಿರುವ ಆರೋಪಿಗಳಿಗಾಗಿ ಪೆರೇಸಂದ್ರ ಠಾಣೆ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ.
ಹೈದರಾಬಾದ್‌ನ ಉದ್ಯಮಿ ವೆಂಕಟೇಶ್ವರ ರಾವ್ ಎಂಬುವವರು ಇತ್ತೀಚೆಗೆ ಬೆಂಗಳೂರಿನಲ್ಲಿದ್ದ ತಮ ಮನೆಯನ್ನು ಮಾರಾಟ ಮಾಡಿದ್ದಾರೆ. ಡಿ.8 ರಂದು ರಾತ್ರಿ ಅವರು ಮನೆಯ ಮಾರಾಟದಿಂದ ಬಂದಿದ್ದ 55 ಲಕ್ಷ ಹಣವನ್ನು ಬ್ಯಾಗ್‌ನಲ್ಲಿಟ್ಟುಕೊಂಡು ಬೆಂಗಳೂರಿನಿಂದ ಹೈದರಬಾದ್‌ಗೆ ಹೊರಟ್ಟಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು.
ಉದ್ಯಮಿ ಹಣದೊಂದಿಗೆ ಬಸ್‌ನಲ್ಲಿ ಹೋಗುತ್ತಿರುವ ಬಗ್ಗೆ ಕಳ್ಳರು ತಿಳಿದುಕೊಂಡಿದ್ದಾರೆ. ಈ ಬಸ್‌ನ್ನುಹಿಂಬಾಲಿಸಿಕೊಂಡು ಟಾಟಾ ಇಂಡಿಕಾ ಕಾರಿನಲ್ಲಿ ಕಳ್ಳರು ಹೋಗಿದ್ದಾರೆ. ಈ ಬಸ್ ಚಾಲಕ ತಾಲ್ಲೂಕಿನ ಅರೂರು ಬಳಿ ಪ್ರಯಾಣಿಕರ ಊಟಕ್ಕೆಂದು ನಿಲ್ಲಿಸಿದ್ದಾರೆ.
ಆ ಸಂದರ್ಭದಲ್ಲಿ ಉದ್ಯಮಿ ಸಹ ಬಸ್ ಇಳಿದು ಊಟಕ್ಕೆ ಹೋಗಿದ್ದಾರೆ. ಇದೇ ಸಮಯಕ್ಕಾಗಿ ಕಾದಿದ್ದ ಕಳ್ಳರು ಬಸ್‌ನೊಳಗೆ ಹೋಗಿ ಸೀಟ್ ಮೇಲೆ ಇಟ್ಟಿದ್ದ ಹಣವಿದ್ದ ಬ್ಯಾಗ್ ತೆಗೆದುಕೊಂಡು ಪರಾರಿಯಾಗಿದ್ದಾರೆ. ಕೆಲ ಸಮಯದ ಬಳಿಕ ಉದ್ಯಮಿ ವೆಂಕಟೇಶ್ವರ ರಾವ್ ಅವರು ತಮ ಸೀಟ್ ಬಳಿ ಬಂದು ನೋಡಿದಾಗ ಹಣವಿದ್ದ ಬ್ಯಾಗ್ ಇರಲಿಲ್ಲ.
ಈ ಬಗ್ಗೆ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ವಿಚಾರಿಸಿದಾಗ ಯಾರೋ ಬಂದು ಬ್ಯಾಗ್ ತೆಗೆದುಕೊಂಡು ಕಾರಿನಲ್ಲಿ ಹೋದರೆಂದು ತಿಳಿಸಿದ್ದಾರೆ.ತಕ್ಷಣ ಅವರು ಪೆೆರೇಸಂದ್ರ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.ಕಾರಿಗೆ ನಕಲಿ ನಂಬರ್ ಪ್ಲೇಟ್ ಬಳಸಿ ಹಣವಿದ್ದ ಬ್ಯಾಗ್ ಅಪಹರಿಸಿಕೊಂಡು ಕಳ್ಳರು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಸ್ ಹಿಂಬಾಲಿಸಿಕೊಂಡು ಕಾರು ಬಂದಂತಹ ಮಾರ್ಗದಲ್ಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಕಳ್ಳರ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಬೆಂಗಳೂರಿನಲ್ಲಿ ಎಟಿಎಂ ಹಣ ಸಾಗಿಸುತ್ತಿದ್ದ ಸಿಎಂಎಸ್ ವಾಹನವನ್ನು ದರೋಡೆಕೋರರು ತಡೆದು ಕೋಟ್ಯಾಂತರ ರೂ. ದರೋಡೆ ಮಾಡಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹಣ ದರೋಡೆ ಪ್ರಕರಣ ನಡೆದಿರುವುದು ಪೊಲೀಸರಿಗೆ ಸವಾಲಾಗಿದೆ.
