ಚಿಕ್ಕಮಗಳೂರು,ಡಿ.29-ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರಕೃತಿ ಸುಂದರ ತಾಣ ಚಾರ್ಮುಡಿ ಘಾಟ್‌ನಲ್ಲಿ ಪ್ರವಾಸಿಗರ ಅಪಾಯಕಾರಿ ಹುಚ್ಚಾಟ ಮತ್ತೆ ಮುಂದುವರಿದಿದೆ.
ನೀವು ಹೇಳೋದನ್ನು ಹೇಳುತ್ತಲೇ ಇರಿ, ನಾವು ಮಾಡೋದನ್ನು ಮಾಡುತ್ತಲೇ ಇರುತ್ತೇವೆ ಎಂಬಂತೆ ವರ್ತಿಸುತ್ತಿರುವ ಪ್ರವಾಸಿಗರು, ಎತ್ತರದ ಬಂಡೆಗಳ ಮೇಲೆ ಹತ್ತಿ ಪ್ರಾಣದ ಹಂಗು ತೊರೆದು ಫೋಟೋಶೂಟ್‌ನಲ್ಲಿ ಮಗ್ನರಾಗಿದ್ದಾರೆ.
ಈಗ ನೀರಿಲ್ಲದಿದ್ದರೂ ಬಂಡೆಗಳು ತೀವ್ರವಾಗಿ ಜಾರುತ್ತಿರುತ್ತವೆ, ಇಂತಹ ಕಡೆ ಸ್ವಲ್ಪ ಯಾಮಾರಿದರೂ ಪ್ರಾಣಾಪಾಯ ಸಂಭವಿಸುವುದು ಕಟ್ಟಿಟ್ಟ ಬುತ್ತಿ.ಈ ಹಿಂದೆಯೂ ಇಲ್ಲಿ ಬಂಡೆಗಳ ಮೇಲಿಂದ ಜಾರಿ ಬಿದ್ದು ಹಲವರು ಕೈಕಾಲು ಮುರಿದುಕೊಂಡಿದ್ದಾರೆ ಹಾಗೂ ಕೆಲವರು ಜೀವವನ್ನೇ ಕಳೆದುಕೊಂಡ ಘಟನೆಗಳು ನಡೆದಿವೆ.
ಪ್ರವಾಸಿಗರ ಸುರಕ್ಷತೆಗಾಗಿ ಪೊಲೀಸರು ನಿರಂತರ ಗಸ್ತು ತಿರುಗುತ್ತಿದ್ದರೂ ಮತ್ತು ಬಂಡೆಗಳ ಮೇಲೆ ಹತ್ತಬೇಡಿ ಎಂಬ ಎಚ್ಚರಿಕೆ ನೀಡುವ ನಾಮಫಲಕಗಳನ್ನು ಅಳವಡಿಸಿದ್ದರೂ, ಯಾವುದನ್ನೂ ಲೆಕ್ಕಿಸದ ಪ್ರವಾಸಿಗರು ಪೊಲೀಸರ ಕಣ್ತಪ್ಪಿಸಿ ಅಪಾಯಕಾರಿ ಸ್ಥಳಗಳಲ್ಲಿ ಮೋಜು-ಮಸ್ತಿ ಮಾಡುತ್ತಿದ್ದಾರೆ.
ಸುಂದರ ಫೋಟೋಗಾಗಿ ಪ್ರಾಣವನ್ನೇ ಪಣಕ್ಕಿಡುತ್ತಿರುವ ಪ್ರವಾಸಿಗರ ಈ ಬೇಜವಾಬ್ದಾರಿ ವರ್ತನೆ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
