Tuesday, December 16, 2025
Homeರಾಜ್ಯವಿಧಾನಸಭೆ ಮತ್ತು ವಿಧಾನ ವಿಧಾನಪರಿಷತ್‌ನಲ್ಲಿ ಶಾಮನೂರು ಶಿವಶಂಕರಪ್ಪನವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಕೆ

ವಿಧಾನಸಭೆ ಮತ್ತು ವಿಧಾನ ವಿಧಾನಪರಿಷತ್‌ನಲ್ಲಿ ಶಾಮನೂರು ಶಿವಶಂಕರಪ್ಪನವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಕೆ

Tributes paid to Shamanuru Shivashankarappa in the Legislative Assembly and Legislative Council

ಬೆಳಗಾವಿ,ಡಿ.15– ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ, ಮಾಜಿ ಸಚಿವರು ಹಾಗೂ ವಿಧಾನಸಭೆ ಸದಸ್ಯರಾದ ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ವಿಧಾನಸಭೆಯಲ್ಲಿಂದು ಭಾವಪೂರ್ಣ ಸಂತಾಪ ಸೂಚಿಸಲಾಯಿತು.ಇಂದು ಬೆಳಿಗ್ಗೆ ಸದನ ಸಮಾವೇಶಗೊಂಡಾಗ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ಸಂತಾಪಸೂಚನಾ ನಿರ್ಣಯವನ್ನು ಮಂಡಿಸುತ್ತಾ, ಶ್ಯಾಮನೂರು ಶಿವಶಂಕರಪ್ಪ ಅವರು ನಿಧನರಾಗಿರುವುದನ್ನು ವಿಷಾದದಿಂದ ಸದನಕ್ಕೆ ತಿಳಿಸಿದರು.

ಶಿವಶಂಕರಪ್ಪನವರು 1931 ರ ಜೂ.16 ರಂದು ದಾವಣಗೆರೆಯಲ್ಲಿ ಜನಿಸಿದ್ದರು. ಮೂಲತಃ ಉದ್ಯಮಿಯಾಗಿದ್ದ ಅವರು, 1969 ರಲ್ಲಿ ದಾವಣಗೆರೆ ನಗರಸಭೆ ಸದಸ್ಯರಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು. ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಯುತರು ಎಂಜಿನಿಯರಿಂಗ್‌, ವೈದ್ಯಕೀಯ ಸೇರಿದಂತೆ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ಬಾಪೂಜಿ ವಿದ್ಯಾಸಂಸ್ಥೆಗಳು, ದಾವಣಗೆರೆ ಅಂಗವಿಕಲರ ಆಶಾಕಿರಣ ಟ್ರಸ್ಟ್‌, ಕ್ರಿಕೆಟ್‌ ಕ್ಲಬ್‌, ಸ್ಪೋರ್ಟ್‌್ಸ ಸಂಘ ಸಂಸ್ಥೆ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ಸಮಾಜದ ಎಲ್ಲಾ ರಂಗಗಳಲ್ಲೂ ತಮದೇ ಆದ ಛಾಪನ್ನು ಮೂಡಿಸಿದ್ದರು. ಅಪರಿಮಿತ ಜೀವನೋತ್ಸಾಹ, ಜನರ ಬಗ್ಗೆ ಅಪಾರ ಕಾಳಜಿ ಮತ್ತು ಪ್ರೀತಿ ಹೊಂದಿದ್ದರು ಎಂದು ಗುಣಗಾನ ಮಾಡಿದರು.

ಶಿವಂಕರಪ್ಪನವರು ಒಬ್ಬ ವ್ಯಕ್ತಿಯಾಗಿರದೆ ರಾಜಕಾರಣ, ಶಿಕ್ಷಣ, ಸಾಹಿತ್ಯ, ಆರೋಗ್ಯ, ಅಭಿವೃದ್ಧಿ, ಶಕ್ತಿ, ದಾನಧರ್ಮ, ಅಭಿವೃದ್ಧಿ ಸೇರಿದಂತೆ ಎಲ್ಲಾ ಗುಣಗಳ ಸಂಗಮವಾಗಿದ್ದರು. ದಾವಣಗೆರೆಯಲ್ಲಿ ಜವಳಿಗಿರಣಿಗಳ ಅವನತಿಯಾದಾಗ ಬ್ರಾಂಡ್‌ ಇಮೇಜ್‌ ತಂದುಕೊಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದ್ದರು.

ಅಪಾರ ದೈವಭಕ್ತರಾಗಿದ್ದ ಅವರು ದೇವಸ್ಥಾನಗಳ, ಗೋಪುರಗಳ ರಥಗಳ ನಿರ್ಮಾಣಕ್ಕೆ ಕೊಡುಗೆಯಾಗಿದ್ದರು.ಎಲ್ಲರೊಂದಿಗೂ ಸ್ನೇಹದಿಂದ ಇರುತ್ತಿದ್ದ ಅವರು ಅಜಾತಶತ್ರು ಎನಿಸಿದ್ದರು. ಜಿಲ್ಲೆಯಲ್ಲಿ ಬಡವರಿಗೆ ಉಚಿತವಾಗಿ ಕೊರೋನ ಲಸಿಕೆ, ಆಹಾರ ಔಷಧಿ ಹಂಚುವ ಮೂಲಕ ಸಾಮಾಜಿಕ ಕಳಕಳಿಯನ್ನು ತೋರಿಸಿದ್ದರು ಎಂದರು.

1994 ರಲ್ಲಿ ದಾವಣಗೆರೆ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿ ನಾಯಕರಾಗಿದ್ದ ಅವರು ದಾವಣಗೆರೆ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಸೇರಿದಂತೆ ಒಟ್ಟು ಆರು ಬಾರಿ ಶಾಸಕರಾಗಿದ್ದರು. ಒಮೆ ಸಂಸದರಾಗಿದ್ದರು. 2013 ರಿಂದ 2016ರ ಅವಧಿಯಲ್ಲಿ ಕೃಷಿ ಮಾರುಕಟ್ಟೆ ಮತ್ತು ತೋಟಗಾರಿಕೆ ಸಚಿವರಾಗಿ ಸೇವೆ ಸಲ್ಲಿಸಿದ್ದರು ಎಂದು ಹೇಳಿದರು.

ಕುವೆಂಪು ವಿವಿಯಿಂದ ಗೌರವ ಡಾಕ್ಟರೇಟ್‌ ಪಡೆದಿದ್ದ ಅವರು, ವಿದ್ಯಶ್ರೀ ಮತ್ತು ನಿತ್ಯ ಸೇವಾ ಯಜ್ಞಧಾರಿ, ಭಾರತ್‌ ಗೌರವ, ಶಿರೋಮಣಿ ವಿಕಾಸ, ಇಂದಿರಾ ಪ್ರಿಯದರ್ಶಿನಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗೆ ಭಾಜನರಾಗಿದ್ದರು.

ಹಿರಿಯ ರಾಜಕಾರಣಿ, ರಾಜಕೀಯ ಮುತ್ಸದ್ದಿ, ದಾವಣಗೆರೆಯ ಜನಮುಖಿ, ಸಮಾಜಮುಖಿಯಾಗಿದ್ದ ಶಿವಶಂಕರಪ್ಪನವರು ನಿನ್ನೆ ನಿಧನರಾಗಿದ್ದಾರೆ. ಅವರ ಸಮಾಜಮುಖಿ ಕಾರ್ಯಗಳು ಹಿಮಾಲಯದಷ್ಟು ಎತ್ತರದಲ್ಲಿವೆ. ಜಠಿಲವಾದ ವಿಚಾರಗಳಿಗೆ ನಗುಮುಖದಿಂದ ಪರಿಹಾರ ಒದಗಿಸುತ್ತಿದ್ದರು. ಅವರ ಜೀವನ ಯುವಜನರಿಗೆ ಸಂದೇಶವಾಗಿದೆ ಎಂದು ಸಭಾಧ್ಯಕ್ಷರು ತಿಳಿಸಿದರು.

ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯನವರು, ತಮ ಪುತ್ರ ಎಸ್‌‍.ಎಸ್‌‍.ಮಲ್ಲಿಕಾರ್ಜುನ್‌ ಅವರನ್ನು ಮಂತ್ರಿ ಮಾಡುವಂತೆ ಹೇಳಿದ್ದರು. ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದ ಅವರು ಆರು ಬಾರಿ ಶಾಸಕರಾಗಿದ್ದರು. ಒಮೆ ಸಂಸದರಾಗಿದ್ದರು. ದಾವಣಗೆರೆಯನ್ನು ವಿದ್ಯಾಕಾಶಿ ಮಾಡಿದ್ದರು. ಸಾಮಾಜಿಕ ಕ್ಷೇತ್ರದಲ್ಲಿ ತಮದೇ ಆದ ಛಾಪು ಮೂಡಿಸಿದ್ದಾರೆ ಎಂದು ಸರಿಸಿದರು.

ಕೆಪಿಸಿಸಿ ಖಜಾಂಚಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದ ಅವರಿಗೆ ಶತ್ರುಗಳಿರಲಿಲ್ಲ. ಹೀಗಾಗಿ ಅಜಾತಶತ್ರುವಾಗಿದ್ದರು. ನನ್ನ 75 ನೇ ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮ ದಾವಣಗೆರೆಯ ಅವರ ಜಾಗದಲ್ಲೇ ನಡೆಯಿತು ಎಂದು ಹೇಳಿದರು.ಕೋವಿಡ್‌ ಸಂದರ್ಭದಲ್ಲಿ ಆರು ಕೋಟಿ ರೂ. ವೆಚ್ಚ ಮಾಡಿ ಆಮ್ಲಜನಕವನ್ನು ಉಚಿತವಾಗಿ ಹಂಚಿದವರು ಶ್ಯಾಮನೂರು ಶಿವಶಂಕರಪ್ಪನವರು ಅಪರೂಪ ರಾಜಕಾರಣಿ. 15 ದಿನಗಳ ಹಿಂದೆ ಆಸ್ಪತ್ರೆಗೆ ಹೋಗಿದ್ದಾಗ ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ ಎಂದು ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರು.

ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಮಾತನಾಡಿ, ವಿಧಾನಸಭೆ ಸದಸ್ಯರಾಗಿದ್ದ ಮೇಟಿ ಅವರಿಗೆ ಕಳೆದ ವಾರ ಸಂತಾಪ ಸಲ್ಲಿಸಿದ್ದೇವೆ. ಇಂದು ಶಾಮನೂರು ಶಿವಶಂಕರಪ್ಪನವರಿಗೆ ಸಂತಾಪ ಸಲ್ಲಿಸುತ್ತಿದ್ದೇವೆ. ಅವರು ಬದುಕಿರುವವರೆಗೂ ಅಧಿಕಾರದಲ್ಲಿರಬೇಕು, ಇನ್ನೊಂದು ಚುನಾವಣೆಯಲ್ಲೂ ಸ್ಪರ್ಧಿಸುವುದಾಗಿ ಹೇಳುತ್ತಿದ್ದರು. ಬಹಳ ಗಟ್ಟಿ ಮನುಷ್ಯ. ದಾವಣಗೆರೆಯಲ್ಲಿನ ಹೆದ್ದಾರಿಗಳಲ್ಲಿ ಶಿಕ್ಷಣ ಸಂಸ್ಥೆಗಳ ಎದ್ದು ಕಾಣುತ್ತವೆ, ಕ್ಯಾನ್ಸರ್‌ ಆಸ್ಪತ್ರೆ ಸ್ಥಾಪಿಸಿದ್ದಾರೆ. ವಿದ್ಯೆಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಟ್ಟಿದ್ದರು ಎಂದು ಗುಣಗಾನ ಮಾಡಿದರು.

ಸಂತಾಪಸೂಚನಾ ನಿರ್ಣಯವನ್ನು ಬೆಂಬಲಿಸಿ ಸಚಿವ ಕೆ.ಎಚ್‌.ಮುನಿಯಪ್ಪ, ಶಾಸಕರಾದ ಸುರೇಶ್‌ಕುಮಾರ್‌, ಬಾಲಕೃಷ್ಣ, ಬಣಕಾರ್‌, ಸಿ.ಸಿ.ಪಾಟೀಲ್‌, ಶಿವಲಿಂಗೇಗೌಡ, ಅಪ್ಪಾಜಿ ನಾಡಗೌಡ, ಡಾ.ರಂಗನಾಥ್‌, ಸಿದ್ದು ಸವದಿ, ಜಿ.ಟಿ.ಪಾಟೀಲ್‌, ಅರಗಜ್ಞಾನೇಂದ್ರ ಮೊದಲಾದವರು ಪಕ್ಷಬೇಧ ಮರೆತು ಶಾಮನೂರು ಶಿವಶಂಕರಪ್ಪ ಅವರ ಗುಣಗಾನ ಮಾಡಿ ಮೃತರ ಆತಕ್ಕೆ ಶಾಂತಿ ಕೋರಿದರು.
ನಂತರ ಮೃತರ ಗೌರವಾರ್ಥ ಸದನದ ಸದಸ್ಯರೆಲ್ಲಾ ಎದ್ದು ನಿಂತು ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಬಳಿಕ ಸದನದ ಕಾರ್ಯ ಕಲಾಪಗಳನ್ನು ನಾಳೆಗೆ ಮುಂದೂಡಿದರು.

ವಿಧಾನಪರಿಷತ್‌ನಲ್ಲೂ ಶ್ರದ್ದಾಂಜಲಿ :
ಬೆಳಗಾವಿ,ಡಿ.15-ವಯೋಸಹಜ ಕಾಯಿಲೆಯಿಂದ ನಿಧನರಾದ ಹಿರಿಯ ಮುತ್ಸದ್ದಿ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಸಚಿವ ಹಾಗೂ ಹಾಲಿ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರಿಗೆ ವಿಧಾನಪರಿಷತ್‌ನಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಜೆಡಿಎಸ್‌‍, ಬಿಜೆಪಿ, ಕಾಂಗ್ರೆಸ್‌‍ ಸೇರಿದಂತೆ ಎಲ್ಲರೂ ಪಕ್ಷಬೇಧ ಮರೆತು ಅಗಲಿದ ಹಿರಿಯ ಚೇತನರಿಗೆ ಶ್ರದ್ದಾಂಜಲಿ ಸಲ್ಲಿಸಿದರು. ದಿನದ ಕಲಾಪ ಪ್ರಾರಂಭವಾಗುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಂತಾಪ ನಿರ್ಣಯವನ್ನು ಮಂಡಿಸಿದರು. ಸಂತಾಪ ನಿರ್ಣಯದ ಮೇಲೆ ಸಭಾನಾಯಕ ಭೋಸರಾಜ್‌ ಅವರು ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಭೋಜೇಗೌಡ, ಎನ್‌.ರವಿಕುಮಾರ್‌, ಸಿ.ಟಿ.ರವಿ, ಐವಾನ್‌ ಡಿಸೋಜ, ಪ್ರದೀಪ್‌ ಶೆಟ್ಟರ್‌, ಸಚಿವರಾದ ಕೆ.ಜಿ.ಜಾರ್ಜ್‌, ದಿನೇಶ್‌ ಗುಂಡೂರಾವ್‌, ಎಂ.ಸಿ.ಸುಧಾರಕ್‌, ಕೆ.ಎಚ್‌.ಮುನಿಯಪ್ಪ, ಕೆ.ಜೆ.ಜಾರ್ಜ್‌ ಸೇರಿದಂತೆ ಅನೇಕರು ಮೃತರ ಸೇವೆಯನ್ನು ಸರಿಸಿದರು.

ಸಂತಾಪ ನಿರ್ಣಯದ ಮೇಲೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತಿನಂತೆ ಶಾಮನೂರು ಶಿವಶಂಕರಪ್ಪ ಅವರು ಅಂಗವಿಕಲ, ಆಶಾಕಿರಣ ಟ್ರಸ್ಟ್‌, ಸ್ಪೋರ್ಟ್‌್ಸ ಕ್ಲಬ್‌, ಬಾಪೂಜಿ ಇಂಜಿನಿಯರಿಂಗ್‌ ಅಸೋಸಿಯೇಷನ್‌ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ ಅಖಿಲ ಭಾರತ ವೀರಶೈವ ಲಿಂಗಾತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸುವ ಮೂಲಕ ಸಮಾಜದ ಎಲ್ಲಾ ರಂಗಗಳಲ್ಲೂ ತಮದೇ ಆದ ಛಾಪು ಮೂಡಿಸಿದ್ದರು ಎಂದು ಹೇಳಿದರು.

1994ರಲ್ಲಿ ದಾವಣಗೆರೆ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಅವರು 2004, 2008, 2013, 2018, 2023 ಸೇರಿದಂತೆ ಒಟ್ಟು ಆರು ಬಾರಿ ಶಾಸಕರಾಗಿ ಕೃಷಿ ಮಾರುಕಟ್ಟೆ, ತೋಟಗಾರಿಕೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. 1998ರಲ್ಲಿ ಲೋಕಸಭೆ ಸಂಸದರಾಗಿಯೂ ಆಯ್ಕೆಯಾಗಿದ್ದರು ಎಂದು ತಿಳಿಸಿದರು.
ಸಭಾನಾಯಕ ಭೋಸ್‌‍ರಾಜ್‌ ಮಾತನಾಡಿ, ದಾವಣಗೆರೆ ಜಿಲ್ಲೆ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಯಾಗಿದ್ದಾರೆ ಅದಕ್ಕೆ ಶ್ಯಾಮನೂರು ಶಿವಶಂಕರಪ್ಪ ಅವರು ಕಾರಣ ಎಂದರು.

ಸದಸ್ಯ ಮಂಜುನಾಥ್‌ ಭಂಡಾರಿ ಮಾತನಾಡಿ, ಶ್ಯಾಮನೂರು ಶಿವಶಂಕರಪ್ಪ ಅವರು ತಮ 63ನೇ ವಯಸ್ಸಿನಲ್ಲಿ ವಿಧಾನಸಭೆ ಪ್ರವೇಶಿಸಿ ಆರು ಬಾರಿ ಶಾಸಕರಾದವರು. ಒಮೆ ಸಂಸತ್‌ ಸದಸ್ಯರಾಗಿದ್ದರು. ದೀರ್ಘ ಕಲಾ ರಾಜಕೀಯದಲ್ಲಿದ್ದರು ಎಂದರು.ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾಗಿದ್ದರು. 1969ರಲ್ಲಿ ದಾವಣಗೆರೆ ಪುರಸಭೆ ಸದಸ್ಯರಾಗಿ ನಂತರ ನಗರಸಭೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು ಎಂದರು.

ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ದಾವಣಗೆರೆಯಲ್ಲಿ ಬಾಪೂಜಿ ವಿದ್ಯಾ ಕೇಂದ್ರದ ಮೂಲಕ ಇಂಜಿನಿಯರಿಂಗ್‌, ವೈದ್ಯಕೀಯ ಕಾಲೇಜುಗಳು ಸೇರಿದಂತೆ ಅನೇಕ ಸಂಸ್ಥೆಗಳನ್ನು ಕಟ್ಟಿ ಜಿಲ್ಲೆಯನ್ನು ವಿದ್ಯಾಖಾಶಿಯಾಗಿಸಿದರು. ಉದ್ಯಮಿಯಾಗಿ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತಮದೇ ಛಾಪು ಮೂಡಿಸಿದ್ದಾರೆ ಎಂದರು.

ಜೆಡಿಎಸ್‌‍ನ ಭೋಜೇಗೌಡ ಮಾತನಾಡಿ, ಜವಳಿ ಕ್ಷೇತ್ರದ ಅವನತಿ ಪ್ರಾರಂಭವಾದಾಗ ದಾವಣಗೆರೆಗೆ ಒಂದು ಬ್ರಾಂಡ್‌ ಹೆಸರನ್ನು ಶ್ಯಾಮನೂರರು ತಂದುಕೊಟ್ಟರು. ದೀರ್ಘಕಾಲ ಎಐಸಿಸಿ ಖಜಾಂಚಿ ಆಗಿದ್ದರು. ಎಲ್ಲರೊಂದಿಗೂ ಸ್ನೇಹ ಸಂಪಾದಿಸಿದ್ದವರು ಅಜಾತಶತ್ರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಎಂದು ಪ್ರಶಂಸಿದರು.

ದಾವಣಗೆರೆಗೆ ಭೇಟಿ ನೀಡಿದಾಗಲೆಲ್ಲ ಅವರ ಗೆಸ್ಟ್‌ ಹೌಸ್‌‍ ನಲ್ಲಿ ಉಳಿಯುತ್ತಿದ್ದು, ಅವರ ಒತ್ತಾಯದ ಮೇರೆಗೆ ಅವರ ಮನೆಯಲ್ಲಿಯೇ ಊಟ ಮಾಡುತ್ತಿದ್ದನ್ನು ಮುಖ್ಯಮಂತ್ರಿಗಳು ಸರಿಸಿದರು. ತಮ 75ನೇ ಜನದಿನವನ್ನು ದಾವಣಗೆರೆಯಲ್ಲಿಯೇ ಆಚರಿಸಿಕೊಂಡಿದ್ದನ್ನು ಅವರು ಇದೇ ಸಂದರ್ಭದಲ್ಲಿ ನೆನಪಿಸಿಕೊಂಡರು.

ಸಚಿವ ಕೆ.ಜೆ.ಜಾರ್ಜ್‌ ಮಾತನಾಡಿ, ಎಐಸಿಸಿಯ ಖಜಾಂಚಿಯಾಗಿದ್ದ ಶಾಮನೂರು ಶಿವಶಂಕರಪ್ಪನವರು ಪಕ್ಷ ನಿಷ್ಠೆಗೆ ಹೆಸರಾಗಿದ್ದರು. ನಂಬಿದ ತತ್ವ ಸಿದ್ದಾಂತದಲ್ಲಿ ಎಂದಿಗೂ ರಾಜೀಯಾಗಿರಲಿಲ್ಲ ಎಂದು ಸರಿಸಿದರು.

ಸಚಿವ ದಿನೇಶ್‌ ಗುಂಡೂರಾವ್‌ ಮಾತನಾಡಿ, ಕಾಂಗ್ರೆಸ್‌‍ ಪಕ್ಷದ ಕಟ್ಟಾಳುವಾಗಿದ್ದ ಶಿವಶಂಕರಪ್ಪನವರು ಎಂದಿಗೂ ಅಧಿಕಾರದ ಬೆನ್ನಿಗೆ ಬಿದ್ದವರಲ್ಲ. ಅನೇಕ ಸಂದರ್ಭದಲ್ಲಿ ಅವರಿಗೆ ಉನ್ನತ ಸ್ಥಾನಮಾನದ ಅವಕಾಶ ಒದಗಿಬಂದಿದ್ದರೂ ಬೇರೆಯವರಿಗೆ ಅವಕಾಶ ಕಲ್ಪಿಸಿದ್ದರು ಎಂದು ಗುಣಗಾನ ಮಾಡಿದರು.

ಸಚಿವ ಎಂ.ಸಿ.ಸುಧಾಕರ್‌ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರು ಶಿಕ್ಷಣ ಪ್ರೇಮಿಯಾಗಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಲಕ್ಷಾಂತರ ಜನರಿಗೆ ಶಿಕ್ಷಣ ನೀಡಿದ್ದಾರೆ. ಪಿಜಿಯಿಂದ ಹಿಡಿದೂ ಯುಜಿವರೆಗೂ ಅನೇಕರು ಇಲ್ಲಿ ಶಿಕ್ಷಣ ಕಲಿತಿದ್ದಾರೆ ಎಂದು ಸರಿಸಿದರು.
ಬಿಜೆಪಿಯ ಎನ್‌.ರವಿಕುಮಾರ್‌ ಮಾನತಾಡಿ, ನೀನು ನಮ ಜಿಲ್ಲೆಯವನೇ. ರಾಜಕೀಯವಾಗಿ ಬೆಳೆಯಬೇಕು ಎಂದು ಪ್ರೋತ್ಸಾಹ ನೀಡುತ್ತಿದ್ದರು. ಬೇರೆ ಪಕ್ಷದವರಾಗಿದ್ದರು ನನಗೆ ಸಲಹೆಸೂಚನೆಗಳನ್ನು ಕೊಡುತ್ತಿದ್ದರು, ನಿಜವಾದ ಜಾತ್ಯತೀತ, ಪಕ್ಷಾತೀತ, ಧರ್ಮಾತೀತ ವ್ಯಕ್ತಿ ಎಂದು ಕೊಂಡಾಡಿದರು.

ಸದಸ್ಯ ಸಿ.ಟಿ.ರವಿ ಮಾತನಾಡಿ, ಶ್ಯಾಮನೂರು ಶಿವಶಂಕರಪ್ಪ ಕಷ್ಟದ ಸಂದರ್ಭಗಳಲ್ಲಿ ಜನರಿಗೆ ಸಹಾಯಹಸ್ತ ಚಾಚುತ್ತಿದ್ದರು. ಕೋವಿಡ್‌ ಸಂದರ್ಭದಲ್ಲಿ ಆರು ಕೋಟಿಗೂ ಹೆಚ್ಚು ವೆಚ್ಚ ಮಾಡಿ ಆಕ್ಸಿಜನ್‌ ಸರಬರಾಜು ಮಾಡಿದ್ದರು. ಅವರ ಕ್ಷೇತ್ರದಲ್ಲಿ ಸರ್ಕಾರದಿಂದ ಹಣ ಬಿಡುಗಡೆಯಾಗದೇ ಇದ್ದ ಸಂದರ್ಭದಲ್ಲಿ ಇವರೇ ಸ್ವಂತ ದುಡ್ಡಿನಲ್ಲಿ ಕಾಮಗಾರಿ ನಡೆಸಿದ್ದರು ಎಂದರು.
ಸಂತಾಪ ನಿರ್ಣಯ ಮುಗಿದ ಮೇಲೆ ಮೃತರ ಗೌರವಾರ್ಥವಾಗಿ ಸದನದ ಸದಸ್ಯರು ಒಂದು ನಿಮಿಷ ಎದ್ದು ನಿಂತು ಮೌನ ಆಚರಿಸಿದರು. ಮೃತರ ಗೌರವಾರ್ಥವಾಗಿ ಸಭಾಪತಿಯವರು ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು.

RELATED ARTICLES

Latest News