Tuesday, December 16, 2025
Homeರಾಜ್ಯತುಮಕೂರು ಮತ್ತು ಹಾಸನ ಜಿಲ್ಲಾಧಿಕಾರಿಗಳ ಕಚೇರಿ ಸ್ಫೋಟಿಸುವಾಗಿ ಬೆದರಿಕೆ ಇ-ಮೇಲ್‌

ತುಮಕೂರು ಮತ್ತು ಹಾಸನ ಜಿಲ್ಲಾಧಿಕಾರಿಗಳ ಕಚೇರಿ ಸ್ಫೋಟಿಸುವಾಗಿ ಬೆದರಿಕೆ ಇ-ಮೇಲ್‌

Tumkur district collector's office receives bomb threat e-mail

ತುಮಕೂರು,ಡಿ.16- ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ತವರು ಜಿಲ್ಲೆ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯನ್ನು ಸ್ಫೋಟಿಸುವಾಗಿ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಗೆ 9.30 ಕ್ಕೆ ಇ-ಮೇಲ್‌ ಸಂದೇಶ ರವಾನೆಯಾಗಿದ್ದು, ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಆದೇಶದ ಮೇರೆಗೆ ಎಲ್ಲಾ ಅಧಿಕಾರಿಗಳನ್ನು ಹೊರ ಕಳುಹಿಸಲಾಗಿತ್ತು.

ಬಾಂಬ್‌ ಬೆದರಿಕೆ ಸಂದೇಶ ಬಂದ ನಂತರ ಎಸ್‌‍ ಪಿ ಅಶೋಕ್‌, ಡಿ ವೈ ಎಸ್‌‍ ಪಿ ಚಂದ್ರಶೇಖರ್‌ ಸೇರಿದಂತೆ ಹಲವು ಪೊಲೀಸ್‌‍ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿಯ ನೌಕರರನ್ನು ಕಚೇರಿಯಿಂದ ಹೊರ ಕಳಿಸಿ ಬರುವ ನೌಕರರನ್ನು ಕಚೇರಿಯ ಪ್ರವೇಶದ್ವಾರ ತಡೆಯಲಾಗಿ ಶ್ವಾನದಳ ಸೇರಿದಂತೆ ಬಾಂಬ್‌ ನಿಶ್ಕ್ರಿಯ ದಳ ಪರಿಶೀಲನೆ ನಡೆಸಿದ್ದು ಆತಂಕದ ವಾತಾವರಣ ಮೂಡಿಸಿತ್ತು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಮಾತನಾಡಿ, ಬಾಂಬ್‌ ಬೆದರಿಕೆ ಸಂದೇಶ ಸಂಬಂಧ ಈಗಾಗಲೇ ಪೊಲೀಸ್‌‍ ಇಲಾಖೆ ಎಲ್ಲಾ ಕ್ರಮಗಳನ್ನೂ ಕೈಗೊಂಡು ಕಚೇರಿಯ ಇಂಚಿಂಚೂ ತಪಾಸಣೆ ನಡೆಸಿದ್ದಾರೆ.

ಸಾರ್ವಜನಿಕರು, ಸಿಬ್ಬಂದಿಗಳು, ಅಧಿಕಾರಿಗಳು ಆತಂಕಪಡುವ ಅಗತ್ಯವಿಲ್ಲ. ಪೊಲೀಸರು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಹಾಸನ, ಮಂಗಳೂರು, ಬೀದರ್‌ ಸೇರಿದಂತೆ ಐದು ಜಿಲ್ಲೆಗಳಿಗೂ ಬಾಂಬ್‌ ಬೆದರಿಕೆ ಸಂದೇಶ ಬಂದಿರುವ ಬಗ್ಗೆ ಮಾಹಿತಿ ಇದೆ.

ಇದು ಹುಸಿ ಸಂದೇಶ ಎಂದುಕೊಂಡರೂ ಸಹ ಸಾರ್ವಜನಿಕರ ಸುರಕ್ಷತಾ ದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಲಾಗಿದೆ. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು. ಜಿಲ್ಲಾಡಳಿತ ಮತ್ತು ಪೊಲೀಸ್‌‍ ಇಲಾಖೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, ಸಾರ್ವಜನಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಿದೆ ಎಂದರು.

ಹಾಸನ ಲ್ಲಾಧಿಕಾರಿ ಕಚೇರಿಗೆ ಇ-ಮೇಲ್‌ ಮೂಲಕ ಬಂದ ಬೆದರಿಕೆ ಸಂದೇಶ
ಹಾಸನ, ಡಿ.16- ನಗರದ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್‌ ಇಟ್ಟಿರುವುದಾಗಿ ಇ-ಮೇಲ್‌ ಮೂಲಕ ಬಂದ ಬೆದರಿಕೆ ಸಂದೇಶದಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಜಿಲ್ಲಾಧಿಕಾರಿ ಲತಾಕುಮಾರಿ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಬಾಂಬ್‌ ನಿಷ್ಕ್ರಿಯ ದಳದೊಂದಿಗೆ ಕಚೇರಿಗೆ ಆಗಮಿಸಿ ಪರಿಶೀಲಿಸಿದರು. ಡಿಸಿ ಕಚೇರಿ ಆವರಣ ಹಾಗೂ ಒಳಭಾಗದಲ್ಲಿ ಇಂಚಿಂಚೂ ತಪಾಸಣೆ ನಡೆಸಿದರು.

ಡಿವೈಎಸ್‌‍ಪಿ ಗಂಗಾಧರಪ್ಪ ಅವರ ನೇತೃತ್ವದಲ್ಲಿ ಶ್ವಾನದಳ ಮತ್ತು ಬಾಂಬ್‌ ನಿಷ್ಕ್ರಿಯ ದಳದ ತಜ್ಞರು ಸ್ಥಳಕ್ಕೆ ಆಗಮಿಸಿ ಸಂಪೂರ್ಣ ತಪಾಸಣೆ ನಡೆಸಿದರು. ಕಚೇರಿ ಕಟ್ಟಡ, ಆವರಣ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದರೂ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಲಿಲ್ಲ.

ಪರಿಶೀಲನೆ ಪೂರ್ಣಗೊಂಡ ಬಳಿಕ ಇದು ಹುಸಿ ಬಾಂಬ್‌ ಬೆದರಿಕೆ ಮೇಲ್‌ ಎಂಬುದು ದೃಢಪಟ್ಟಿದ್ದು, ಸಾರ್ವಜನಿಕರು ಹಾಗೂ ಸಿಬ್ಬಂದಿಯಲ್ಲಿ ಉಂಟಾಗಿದ್ದ ಆತಂಕ ನಿವಾರಣೆಯಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಕೆಲಕಾಲ ಕಚೇರಿಯೊಳಗಿನ ಚಟುವಟಿಕೆಗಳನ್ನು ನಿಯಂತ್ರಿಸಲಾಗಿತ್ತು.

ಹುಸಿ ಬೆದರಿಕೆ ಸಂದೇಶ ಕಳುಹಿಸಿದವರ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದು, ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಗಂಭೀರ ತನಿಖೆಗೆ ಡಿಸಿ ಲತಾಕುಮಾರಿ ಆದೇಶ: ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್‌ ಬೆದರಿಕೆ ಕರೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಲತಾಕುಮಾರಿ ಮಾತನಾಡಿ, ಜನರು ಯಾವುದೇ ರೀತಿಯ ಗಾಬರಿಗೆ ಒಳಗಾಗಬಾರದು. ಇದು ಒಂದು ಹುಸಿ ಬಾಂಬ್‌ ಬೆದರಿಕೆಯಾಗಿದೆ ಎಂದು ಸ್ಪಷ್ಟಪಡಿಸಿದರು.

ಡಿ.15ರಂದು ಜಿಲ್ಲಾಧಿಕಾರಿ ಕಚೇರಿಯ ಅಧಿಕೃತ ಡಿಸಿ ಇ-ಮೇಲ್‌ ವಿಳಾಸಕ್ಕೆ ಆನಾರ್‌ ಅಶ್ವಿನ್‌ ಶೇಖರ್‌ ಎಂಬ ಹೆಸರಿನಲ್ಲಿ ಬಾಂಬ್‌ ಬೆದರಿಕೆ ಮೇಲ್‌ ಬಂದಿದೆ. ಈ ಮೇಲ್‌ನಲ್ಲಿ ಪಾಕಿಸ್ತಾನಿ ಐಎಸ್‌‍ಐ ಸೆಲ್‌ ಹಾಗೂ ತಮಿಳುನಾಡಿನ ಮಾಜಿ ಎಲ್‌ಟಿಟಿಇ ಸದಸ್ಯರು ಈ ಕೃತ್ಯಕ್ಕೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಮೇಲ್‌ ಬಂದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಹಾಸನ ಎಸಿ ಅವರು ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಜೆಎಂಎಫ್‌ಸಿ ನ್ಯಾಯಾಧೀಶರಿಗೂ ಮಾಹಿತಿ ನೀಡಲಾಗಿದೆ ಎಂದು ಡಿಸಿ ಲತಾಕುಮಾರಿ ತಿಳಿಸಿದರು.

ಈ ರೀತಿಯ ಬೆದರಿಕೆ ಕರೆಗಳು ಹಾಸನ ಮಾತ್ರವಲ್ಲದೆ ಮಂಗಳೂರು, ಬೀದರ್‌, ತುಮಕೂರು ಸೇರಿದಂತೆ ರಾಜ್ಯದ ಐದು ಜಿಲ್ಲೆಗಳಿಗೆ ಬಂದಿರುವ ಮಾಹಿತಿ ಇದೆ. ಮೊದಲಿಗೆ ಇದನ್ನು ಪ್ರಾಂಕ್‌ ಎಂದುಕೊಂಡರೂ, ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ನಿರ್ಲಕ್ಷ್ಯ ಮಾಡದೆ ಗಂಭೀರವಾಗಿ ಪರಿಗಣಿಸಲಾಗಿದೆ.

ಮೇಲ್‌ನಲ್ಲಿ ಐದು ಬಾಂಬ್‌ ಸ್ಫೋಟಿಸುವುದಾಗಿ ಕನ್ನಡದಲ್ಲಿ ಉಲ್ಲೇಖವಿದ್ದರೂ, ಯಾವ ಸಮಯದಲ್ಲಿ ಅಥವಾ ಯಾವ ಸಂದರ್ಭದಲ್ಲಿ ಸ್ಫೋಟ ನಡೆಯಲಿದೆ ಎಂಬ ಸ್ಪಷ್ಟ ಮಾಹಿತಿ ನೀಡಿಲ್ಲ ಎಂದು ಅವರು ಹೇಳಿದರು.

ಜನರು ಶಾಂತಿಯುತವಾಗಿರಬೇಕು, ಯಾವುದೇ ಆತಂಕಕ್ಕೆ ಒಳಗಾಗಬಾರದು. ಸರ್ಕಾರ ಮತ್ತು ಪೊಲೀಸ್‌‍ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಡಿಸಿ ಲತಾಕುಮಾರಿ ಭರವಸೆ ನೀಡಿದ್ದಾರೆ.

RELATED ARTICLES

Latest News