ನವದೆಹಲಿ,ಡಿ.31- ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಕಾನೂನು ಬಾಹಿರ ವಾಗಿ ಸರ್ಕಾರಿ ನಿವೇಶನದಲ್ಲಿ ಮನೆ ಕಟ್ಟಿಸಿಕೊಂಡ ಹೊರಗಿನವರಿಗೆ ಯಾವ ನಿಯಮದಡಿ ಪುನರ್ವಸತಿಯನ್ನು ರಾಜ್ಯ ಸರ್ಕಾರ ಕಲ್ಪಿಸುತ್ತದೆ? ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಪ್ರಶ್ನೆ ಮಾಡಿದ್ದಾರೆ. ಹೊರ ರಾಜ್ಯಗಳು ಇಲ್ಲವೇ ಬೇರೆ ದೇಶಗಳಿಂದ ಬಂದವರು ಸರ್ಕಾರಿ ನಿವೇಶನದಲ್ಲಿ ಮನೆ ನಿರ್ಮಿಸಿಕೊಂಡರೆ ಅಂಥ ಸಂತ್ರಸ್ತರಿಗೆ ಪುನರ್ವಸತಿ ನೀಡಬೇಕೆಂಬ ನಿಯಮ ಎಲ್ಲಿದೆ? ಇದು ಸರ್ಕಾರದ ಓಲೈಕೆತನದ ಪರಮಾವಧಿ ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ನಿವೇಶನದಲ್ಲಿ ಮನೆ ನಿರ್ಮಿಸಿಕೊಂಡಿದ್ದೇ ಕಾನೂನು ಬಾಹಿರ. ಅಧಿಕಾರಿಗಳು ಇದನ್ನು ತೆರವು ಮಾಡುವಾಗ ಮಾಹಿತಿ ಇರಲಿಲ್ಲವೇ? ಹೊರರಾಜ್ಯದವರು ನಮ ಸರ್ಕಾರದ ಮೇಲೆ ಸವಾರಿ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.
ನಿಜವಾದ ಫಲಾನುಭವಿಗಳಾಗಿದ್ದರೆ ಅವರಿಗೆ ಕಾನೂನಿನ ಪ್ರಕಾರ ಸರ್ಕಾರ ಮನೆಗಳನ್ನು ನಿರ್ಮಿಸಿಕೊಡಲಿ. ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡ ನಂತರ ಅಧಿಕಾರಿಗಳು ತೆರವುಗೊಳಿಸಿದ್ದಾರೆ ಎಂದರೆ ಅದು ಕಾನೂನುಬದ್ಧವಾಗಿದೆ ಎಂದೇ ಅರ್ಥ. ಹಾಗಿದ್ದರೂ ಸರ್ಕಾರ ಯಾರನ್ನು ಓಲೈಸಲು ಮುಂದಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.
ಈ ಹಿಂದೆ ರಾಜ್ಯದಲ್ಲಿ ಅನೇಕ ಕಡೆ ಮನೆಗಳನ್ನು ತೆರವುಗೊಳಿಸಲಾಗಿದೆ. ಅಂದು ಯಾರೊಬ್ಬರೂ ವಿರೋಧ ವ್ಯಕ್ತಪಡಿಸಲಿಲ್ಲ. ಕಡೆಪಕ್ಷ ಸರ್ಕಾರ ಕಷ್ಟಕಾರ್ಪಣ್ಯಗಳಿಗೂ ಸ್ಪಂದಿಸಲಿಲ್ಲ. ಈಗ ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಿಯನ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಟ್ವೀಟ್ ಮಾಡಿದರು ಎಂಬ ಕಾರಣಕ್ಕೆ ಸರ್ಕಾರ ಪುನರ್ವಸತಿ ಕಲ್ಪಿಸಲು ಮುಂದಾಗಿದೆ.
ಇದು ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರ್ಚಿ ಉಳಿಸಿಕೊಳ್ಳಲು ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದಿತ್ತು. ಹೊರ ರಾಜ್ಯದವರು ನಮ ಸರ್ಕಾರದ ಮೇಲೆ ನಿಯಂತ್ರಣ ಮಾಡುವುದು ಸರಿಯಲ್ಲ. ಪಕ್ಷದ ಹಿತಾಸಕ್ತಿ ಏನೇ ಇದ್ದರೂ ಕರ್ನಾಟಕ, ಕನ್ನಡಿಗರ ಹಿತಾಸಕ್ತಿ ಮುಖ್ಯ ಎಂಬುದನ್ನು ಮರೆಯಬಾರದು. ಸರ್ಕಾರದ ನಡೆ ಸರಿಯಲ್ಲ ಎಂದು ಆಕ್ಷೇಪಿಸಿದರು.
