Thursday, January 15, 2026
Homeರಾಜ್ಯವಿಕಲಚೇತನ ಉದ್ಯೋಗಿಗಳ ಜೊತೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂಕ್ರಾಂತಿ ಸಂಭ್ರಮ

ವಿಕಲಚೇತನ ಉದ್ಯೋಗಿಗಳ ಜೊತೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂಕ್ರಾಂತಿ ಸಂಭ್ರಮ

Union Minister H.D. Kumaraswamy celebrates Sankranti with disabled employees

ಬೆಂಗಳೂರು : ಬೆಸ್ಕಾಂ ಸೇರಿದಂತೆ ಕೆಪಿಟಿಸಿಎಲ್ ನ ವಿವಿಧ ವಿಭಾಗಗಳಲ್ಲಕರ್ತವ್ಯ ನಿರ್ವಹಿಸುತ್ತಿರುವ ಆರುನೂರಕ್ಕೂ ಹೆಚ್ಚು ವಿಕಲಚೇತನ ಉದ್ಯೋಗಿಗಳು ಬಿಡದಿಯ ತಮ್ಮ ತೋಟದ ಮನೆಯಲ್ಲಿ ತಮ್ಮೊಂದಿಗೆ ಸಂಕ್ರಾಂತಿ ಆಚರಿಸಿದ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಭಾವುಕರಾದರು.

ಕಳೆದ ಏಳು ವರ್ಷಗಳಿಂದ ತಮ್ಮಲ್ಲಿಗೆ ಬಂದು ಸಂಕ್ರಾಂತಿ ಆಚರಿಸುತ್ತಿರುವ ಎಲ್ಲಾ ವಿಕಲಚೇತನ ಕುಟುಂಬ ಸದಸ್ಯರನ್ನು ಬಹಳಷ್ಟು ಹೊತ್ತು ಭೇಟಿಯಾದ ಸಚಿವರಿಜ್ ಅವರೊಂದಿಗೆ ಹಬ್ಬವನ್ನು ಆಚರಿಸಿದರು. ಅಲ್ಲದೆ, ಅವರೆಲ್ಲರ ಜತೆ ಎಳ್ಳುಬೆಲ್ಲ ಸೇವಿಸಿ ಸಂತಸ ವ್ಯಕ್ತಪಡಿಸಿದರು.

ವಿಕಲಚೇತನ ಉದ್ಯೋಗಿಗಳು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಸತತ 7ನೇ ವರ್ಷದ ಸಂಕ್ರಾಂತಿ ಹಬ್ಬ ಆಚರಿಸಿದರಲ್ಲದೆ, ತಮ್ಮ ತಂದೆ ತಾಯಿ, ಮಕ್ಕಳ ಸಮೇತ ಬಂದು ಸಚಿವರಿಗೆ ಎಳ್ಳುಬೆಲ್ಲ ತಿನಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಅಷ್ಟು ಕುಟುಂಬಗಳನ್ನು ಕಂಡು ತೀವ್ರ ಭಾವುಕರಾದ ಸಚಿವರು, ವಿಶೇಷವಾಗಿ ಮಕ್ಕಳ ಜತೆ ಬಹಳ ಸಮಯ ಕಳೆದರು. “ನಿಮ್ಮನ್ನು ನೋಡುತ್ತಿದ್ದರೆ ನನ್ನ ಹೃದಯ ತುಂಬಿ ಬರುತ್ತಿದೆ. ದೇವರು ಕೊಟ್ಟ ಸಣ್ಣ ಅವಕಾಶದಲ್ಲಿ ನಿಮಗೆ ಸಹಾಯ ಮಾಡುವ ಅವಕಾಶ ಸಿಕ್ಕಿತು. ಅದನ್ನೇ ನೀವೆಲ್ಲರೂ ಹೃದಯದಲ್ಲಿ ಇಟ್ಟುಕೊಂಡು ನನ್ನ ಮೇಲೆ ಪ್ರೀತಿ, ವಾತ್ಸಲ್ಯ ತೋರುತ್ತಿರುವುದು ನನ್ನ ಜೀವನಕ್ಕೆ ಸಾರ್ಥಕತೆ ತಂದಿದೆ” ಎಂದು ಸಚಿವರು ಹೇಳಿದರು.

ಸಚಿವರ ಕಣ್ಣಲ್ಲಿ ನೀರು ತುಂಬಿಕೊಂಡಿದ್ದನ್ನು ಕಂಡ ಎಲ್ಲರೂ ಕ್ಷಣಕಾಲ ಸ್ತಬ್ಧರಾದಲ್ಲದೇ, ನಮಗೆ ನಿಮ್ಮ ಆರೋಗ್ಯ ಮುಖ್ಯ. ಸದಾಕಾಲ ನೀವು ಆರೋಗ್ಯವಂತರಾಗಿ ಇರಬೇಕು ಎಂದು ಹಾರೈಸಿದರು.

ನಿಮ್ಮ ಜೀವನ ಎಲ್ಲರಿಗೂ ಮಾದರಿ. ಶ್ರಮ ವಹಿಸಿ ಕೆಲಸ ಮಾಡುತ್ತೀರಿ. ಸರ್ಕಾರ ನೀಡುವ ಸಂಬಳದಿಂದ ಉತ್ತಮ ಬದುಕು ಕಟ್ಟಿಕೊಂಡಿದ್ದೀರಿ. ನಿಮ್ಮ ಜೀವನ, ಬೆಳವಣಿಗೆ ಸಮಾಜಕ್ಕೆ ಮಾದರಿ. ನೀವು, ನಿಮ್ಮ ಕುಟುಂಬಗಳು, ನಿಮ್ಮ ಮಕ್ಕಳು ಇನ್ನೂ ಎತ್ತರದ ಸಾಧನೆ ಮಾಡಬೇಕು ಎಂದು ಸಚಿವರು ವಿಕಲಚೇತನ ಕುಟುಂಬ ಸದಸ್ಯರಿಗೆ ಶುಭ ಹಾರೈಸಿದರು.

ಹಿನ್ನೆಲೆ ಏನು?
2006ರಲ್ಲಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಜನತಾದರ್ಶನ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಅಪಾರ ಪ್ರಮಾಣದ ವಿಕಲಚೇತನರು ಉದ್ಯೋಗ ಅರಸಿ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಲು ಬರುತ್ತಿದ್ದರು. ವಿಕಲಚೇತನರ ಬವಣೆಯನ್ನು ಕಣ್ಣಾರೆ ಕಂಡ ಅಂದಿನ ಸಿಎಂ ಕುಮಾರಸ್ವಾಮಿ ಅವರು, ಬೆಸ್ಕಾಂ ಸೇರಿ ಕೆಪಿಟಿಸಿಎಲ್ ನ ವಿವಿಧ ವಿಭಾಗಗಳಲ್ಲಿ ಗುತ್ತಿಗೆ ಆಧಾರದ ಮೇಲೆ 600ಕ್ಕೂ ಹೆಚ್ಚು ವಿಕಲಚೇತನರನ್ನು ನೇಮಕ ಮಾಡಿದರು.

ಅದಾದ ನಂತರ 2018ರವರೆಗೂ ಇಷ್ಟು ಉದ್ಯೋಗಿಗಳ ಸೇವೆ ಕಾಯಂ ಆಗಲಿಲ್ಲ. ಅದುವರೆಗೂ ಯಾವುದೇ ಸರ್ಕಾರ ಈ ವಿಕಲಚೇತನರ ಕಷ್ಟಕ್ಕೆ ಸ್ಪಂದಿಸಿರಲಿಲ್ಲ. 2018ರಲ್ಲಿ ಮತ್ತೆ ಸಿಎಂ ಆಗಿಬಂದ ಕುಮಾರಸ್ವಾಮಿ ಅವರು, 2006ರಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲ್ಪಟ್ಟ ಎಲ್ಲ ವಿಕಲಚೇತನ ಉದ್ಯೋಗಿಗಳ ನೇಮಕಾತಿಯನ್ನು ಕಾಯಂ ಮಾಡಿದರು. ಎಸ್ಎಸ್ಎಲ್ಸಿ ಪಾಸಾಗಿದ್ದ 300, ಪದವಿ ಉತ್ತೀರ್ಣರಾಗಿದ್ದ 300 ವಿಕಲಚೇತನ ಅಭ್ಯರ್ಥಿಗಳಿಗೆ ಇಂಧನ ಇಲಾಖೆಯಲ್ಲಿ ಉದ್ಯೋಗವಕಾಶ ಕಲ್ಪಿಸಿದ್ದರು. 2019 ಜನವರಿ 14ರಂದು ಸಂಕ್ರಾಂತಿ ಹಬ್ಬದ ದಿನವೇ ಹೆಚ್ಡಿಕೆ ಅವರು ಸೇವೆ ಕಾಯಂ ಮಾಡಿದ ಆದೇಶ ಹೊರಡಿಸಿದರು. ಇದು 600ಕ್ಕೂ ಹೆಚ್ಚು ವಿಕಲಚೇತನ ಕುಟುಂಬಗಳಲ್ಲಿ ಸಂಭ್ರಮ ತಂದಿತು.

ನಿಮ್ಮ ಪ್ರೀತಿಯೇ ಶ್ರೀರಕ್ಷೆ
ಈ ಸಂದರ್ಭದಲ್ಲಿ ಎಲ್ಲರಿಗೂ ಶುಭ ಕೋರಿದ ಸಚಿವರು; ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಋಣಿಯಾಗಿದ್ದೇನೆ. ನಿಮ್ಮ ಹೃದಯದಲಿ ಸ್ಥಾನ ಕೊಟ್ಟಿದ್ದಕ್ಕೆ ನಾನು ಆಭಾರಿ. ನಿಮ್ಮ ಹಾರೈಕೆ ಪ್ರೀತಿಯೇ ನನಗೆ ಶ್ರೀರಕ್ಷೆ ಎಂದು ಭಾವುಕರಾದರು.

ಅವಕಾಶ ಸಿಕ್ಕಿದಾಗ ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ. ವಿಕಲಚೇತನರಿಗೆ ಸಾಧ್ಯವಾದಷ್ಟು ನೆರವು ಕೊಟ್ಟಿದ್ದೇನೆ. ಮುಂದೆಯೂ ದೈಹಿಕವಾಗಿ ಶಕ್ತಿ ಇಲ್ಲದ ಯಾರೇ ಇದ್ದರೂ ಅವರಿಗಾಗಿ ನನ್ನ ಹೃದಯ ಮಿಡಿಯುತ್ತದೆ. ಪ್ರಾಮಾಣಿಕವಾಗಿ ಅಂತಹವರ ಒಳಿತಿಗಾಗಿ ಪ್ರಯತ್ನ ಮಾಡುತ್ತೇನೆ ಎಂದರು ಅವರು.

ವಿಕಲಚೇತನರು, ದೈಹಿಕವಾಗಿ ಆಶಕ್ತರ ಬಗ್ಗೆ ನಮಗೆ ಅನುಕಂಪಕ್ಕಿಂತ ಮಿಗಿಲಾಗಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಕೆಲಸ ಆಗಬೇಕಿದೆ. ನನಗೆ ಅವಕಾಶ ಸಿಕ್ಕಿದಾಗ ನಾನು ಇಂಥವರ ಪರವಾಗಿ ಕೆಲಸ ಮಾಡುತ್ತೇನೆ. ನನ್ನ ಪಾಲಿಗೆ ಇವರು ದೇವರ ಸಮಾನರು ಎಂದು ಸಚಿವರು ಹೇಳಿದರು.

ಸಮಾಜದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿಕಲಚೇತನರು ಕಷ್ಟದಲ್ಲಿ ಇದ್ದಾರೆ. ದೊಡ್ಡ ಪ್ರಮಾಣದಲ್ಲಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ. ಮುಂದಿನ ಜನರು, ದೇವರು ಅವಕಾಶ ಕೊಡಬಹುದು ಎಂದು ನಂಬಿದ್ದೇನೆ. ನಿಮ್ಮ ಮಕ್ಕಳಿಗೆ ಶುಭವಾಗಲಿ, ಅವರನ್ನು ಚೆನ್ನಾಗಿ ಓದಿಸಿ ಎಂದು ಕಿವಿಮಾತು ಹೇಳಿದರು.

ಕೇಂದ್ರ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ ಉದ್ಯೋಗಿಗಳು; ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವಾಗ ನಮ್ಮ ವೇತನ ₹3000 ಇತ್ತು. ನಮ್ಮ ಸೇವೆ ಕಾಯಂ ಆದ ಮೇಲೆ ₹80,000ರಿಂದ ₹90,000, ಒಂದು ಲಕ್ಷ ಮೀರಿ ವೇತನ ಪಡೆಯುತ್ತಿದ್ದೇವೆ. ನಾವು ಸ್ವಂತ ಮನೆ ಕಟ್ಟಿಕೊಂಡಿದ್ದೇವೆ, ಸ್ವಂತ ಕಾರು ಖರೀದಿ ಮಾಡಿದೇವೆ. ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಮಾಡಿಸುತ್ತಿದ್ದೇವೆ. ಇದೆಲ್ಲವೂ ಸಾಧ್ಯವಾಗಿದ್ದು ಕುಮಾರಸ್ವಾಮಿ ಅವರಿಂದ. ಹೀಗಾಗಿ ನಾವು ಸಂಕ್ರಾಂತಿ ಹಬ್ಬವನ್ನು ಪ್ರತಿ ವರ್ಷ ಅವರ ಜತೆಯಲ್ಲಿ ಆಚರಿಸುತ್ತೇವೆ ಎಂದು ವಿಕಲಚೇತನ ಉದ್ಯೋಗಿಗಳು ಹೇಳಿದರು.

RELATED ARTICLES

Latest News