Monday, January 12, 2026
Homeರಾಜ್ಯಬಿಡುಗಡೆಯಾಗದ ಗೃಹಲಕ್ಷ್ಮಿ ಹಣ , ಬೃಹತ್‌ ಪ್ರತಿಭಟನೆಗೆ ತಯಾರಿ

ಬಿಡುಗಡೆಯಾಗದ ಗೃಹಲಕ್ಷ್ಮಿ ಹಣ , ಬೃಹತ್‌ ಪ್ರತಿಭಟನೆಗೆ ತಯಾರಿ

Unreleased Grihalakshmi money, preparation for a huge protest

ಬೆಂಗಳೂರು,ಜ.12- ಗೃಹಲಕ್ಷ್ಮಿ ಹಣ ಬಿಡುಗಡೆ ವಿಳಂಬವಾಗುತ್ತಿರುವುದರ ಹಿನ್ನೆಲೆಯಲ್ಲಿ ಆಡಳಿತರೂಢಾ ಕಾಂಗ್ರೆಸ್‌‍ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆಗೆ ಸಜ್ಜಾಗಿದ್ದು, ಹುಬ್ಬಳ್ಳಿಯಲ್ಲಿ ಮಹಿಳಾ ಮೋರ್ಚಾ ವತಿಯಿಂದ ಬೃಹತ್‌ ಸಮಾವೇಶ ನಡೆಸಲು ಮುಂದಾಗಿದೆ.
ಮಧ್ಯ ಕರ್ನಾಟಕದ ವಾಣಿಜ್ಯ ರಾಜಧಾನಿ ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ ಬಿಜೆಪಿ ಮಹಿಳಾ ಮೋರ್ಚಾ ಸಮಾವೇಶ ನಡೆಸಲು ಉದ್ದೇಶಿಸಲಾಗಿದ್ದು, ರಾಷ್ಟ್ರೀಯ ಮಹಿಳಾ ಮೋರ್ಚಾ ಅಧ್ಯಕ್ಷರು ಹಾಗೂ ಪ್ರಮುಖರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ.

ಆದರೆ ಸಮಾವೇಶ ನಡೆಸುವ ಬಗ್ಗೆ ದಿನಾಂಕ ಈವರೆಗೂ ಅಧಿಕೃತಗೊಂಡಿಲ್ಲ. ಸದ್ಯದಲ್ಲೇ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಕ್ಷದ ಪದಾಧಿಕಾರಿಗಳ ಜೊತೆ ಚರ್ಚಿಸಿ ದಿನಾಂಕವನ್ನು ನಿಗದಿಪಡಿಸುವ ಸಂಭವವಿದೆ. ರಾಜ್ಯದಾದ್ಯಂತ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಕಾರ್ಯಕರ್ತರನ್ನು ಈ ಸಮಾವೇಶಕ್ಕೆ ಕರೆತರುವ ಉದ್ದೇಶವನ್ನು ಹಾಕಿಕೊಳ್ಳಲಾಗಿದೆ. ಆ ಮೂಲಕ ಸರ್ಕಾರದ ವೈಫಲ್ಯ ಮತ್ತು ಪಕ್ಷಸಂಘಟನೆಗೂ ಒತ್ತು ಕೊಡುವ ಉದ್ದೇಶವನ್ನು ಬಿಜೆಪಿ ಹೊಂದಿದೆ.

ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳ ಖಾತೆಗೆ ಹಣ ಬಾರದೇ ಇರುವವರನ್ನು ಸಮಾವೇಶಕ್ಕೆ ಆಹ್ವಾನಿಸಿ ಸಭೆಯಲ್ಲಿ ಅವರ ಮೂಲಕವೇ ಹಣ ತಡೆಹಿಡಿದವರನ್ನು ಬಹಿರಂಗಪಡಿಸುವ ಯೋಜನೆಯೂ ಇದೆ. ಇದಕ್ಕಾಗಿ ಎಷ್ಟು ಕಂತುಗಳಲ್ಲಿ ಹಣ ಬಿಡುಗಡೆಯಾಗಿದೆ ಎಂಬುದನ್ನು ದಾಖಲೆಗಳ ಸಮೇತ ಕಲೆ ಹಾಕಲು ಪಕ್ಷದ ಪ್ರಮುಖರಿಗೆ ಸೂಚಿಸಲಾಗಿದೆ.

ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಚಳಿಗಾಲ ಅಧಿವೇಶನದಲ್ಲಿ ಶಾಸಕ ಮಹೇಶ್‌ ಟೆಂಗಿನಕಾಯಿ ಅವರು ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಕೇಳಿದ ಪ್ರಶ್ನೆಗೆ ತಪ್ಪು ಮಾಹಿತಿ ಬಂದಿತ್ತು. ಇದು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು.
2025ನೇ ಸಾಲಿನ ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕಿರಲಿಲ್ಲ. ಇಂತಿಷ್ಟು ಕಂತು ಹಣವನ್ನು ಫಲಾನುಭವಿಗಳ ಖಾತೆಗೆ ಜಮಾವಣೆ ಮಾಡಲಾಗಿದೆ ಎಂದು ಸಚಿವರು ಸಮರ್ಥನೆ ಮಾಡಿಕೊಂಡಿದ್ದರೂ ಎರಡು ತಿಂಗಳ ಬಾಕಿ ಹಣ ಪಾವತಿ ಮಾಡದಿರುವುದು ಬೆಳಕಿಗೆ ಬಂದಿತ್ತು.

ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ದೊಡ್ಡ ಜಟಾಪಟಿಯೇ ನಡೆದು ಕೊನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಸದನದಲ್ಲಿ ಕ್ಷಮೆ ಕೇಳಿದ್ದರು.ಶೀಘ್ರದಲ್ಲೇ ಹಣ ಬಿಡುಗಡೆ ಮಾಡುವುದಾಗಿ ಸಚಿವರು ಹೇಳಿದ್ದರೂ ಈಗಲೂ ಕೂಡ ಫಲಾನುಭವಿಗಳ ಖಾತೆಗೆ ಹಣ ಸಂದಾಯವಾಗಿಲ್ಲ. ಇದನ್ನೇ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ ಹುಬ್ಬಳ್ಳಿಯಲ್ಲಿ ಮಹಿಳಾ ಮೋರ್ಚಾ ಸಮಾವೇಶ ನಡೆಸುವ ಮೂಲಕ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಲಿದೆ.

RELATED ARTICLES

Latest News