Tuesday, December 30, 2025
Homeರಾಜ್ಯರಾಜ್ಯದೆಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ, ವೆಂಕಟೇಶ್ವರ ದೇವಾಲಯಗಳಲ್ಲಿ ಭಕ್ತಸಾಗರ

ರಾಜ್ಯದೆಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ, ವೆಂಕಟೇಶ್ವರ ದೇವಾಲಯಗಳಲ್ಲಿ ಭಕ್ತಸಾಗರ

Vaikuntha Ekadashi celebrations across the state

ಬೆಂಗಳೂರು,ಡಿ.30- ರಾಜ್ಯದೆಲ್ಲೆಡೆ ಇಂದು ವೈಕುಂಠ ಏಕಾದಶಿಯ ಸಂಭ್ರಮ ಮನೆ ಮಾಡಿದ್ದು, ವೆಂಕಟೇಶ್ವರ ದೇವಾಲಯಗಳಿಗೆ ಭಕ್ತರ ದಂಡೇ ಹರಿದುಬಂದಿತ್ತು.ಮಧ್ಯರಾತ್ರಿಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾಗಿದ್ದು, ಭಕ್ತರು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ವಿವಿಧ ಬಗೆಯ ಹೂಗಳು, ಆಭರಣಗಳಿಂದ ಅಲಂಕೃತಗೊಂಡಿದ್ದ ವೆಂಕಟೇಶ್ವರನನ್ನು ಕಣ್ತುಂಬಿಕೊಂಡರು.

ಬೆಂಗಳೂರಿನ ವೈಯಾಲಿಕಾವಲ್‌ನ ಟಿಟಿಡಿ ದೇವಾಲಯದಲ್ಲಿ ಮಧ್ಯರಾತ್ರಿ 1.30ರಿಂದಲೇ ದರ್ಶನ ಪ್ರಾರಂಭವಾಗಿದ್ದು, ಇಂದು ರಾತ್ರಿ 12 ಗಂಟೆಯವರೆಗೂ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ.
ಮಧ್ಯರಾತ್ರಿಯಿಂದಲೇ ಅಪಾರಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ರಾಜಾಜಿನಗರದಲ್ಲಿ ವೆಂಕಟೇಶ್ವರ ದೇವಾಲಯಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, 5ನೇ ಬ್ಲಾಕ್‌ನಲ್ಲಿರುವ ಶ್ರೀ ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ಅದ್ಧೂರಿಯಾಗಿ ಏಕಾದಶಿಯನ್ನು ಆಚರಿಸಲಾಯಿತು.

ಅದೇ ರೀತಿ ಇಸ್ಕಾನ್‌ನಲ್ಲೂ ಕೂಡ ವೆಂಕಟೇಶ್ವರನಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು, ವಿಶೇಷ ಭಜನೆ, ಸಂಕೀರ್ತನೆ ನಡೆದವು. ಮುಂಜಾನೆ ಶ್ರೀನಿವಾಸ ಗೋವಿಂದ, ಮಹಾಭಿಷೇಕ, ರಾಧಾಕೃಷ್ಣ ಪಲ್ಲಕ್ಕಿ ದರ್ಶನ, ವೈಕುಂಠ ದ್ವಾರ ಪೂಜೆ, ಕಲ್ಯಾಣೋತ್ಸವ, ವಿವಿಧ ಪೂಜಾ ಕಾರ್ಯಗಳು ನೆರವೇರಿದವು.

ಕಾಮಾಕ್ಷಿಪಾಳ್ಯದ ವೃಷಭಾವತಿನಗರದ ಲಕ್ಷ್ಮೀವೆಂಕಟೇಶ್ವರ ದೇವಾಲಯದಲ್ಲಿ ಇಂದು ಸ್ವರ್ಗವೇ ಧರೆಗಿಳಿದು ಬಂದಂತೆ ಭಾಸವಾಗಿ ದೇವರ ಅಲಂಕಾರ ಭಕ್ತರನ್ನು ಆಕರ್ಷಿಸಿತು. ವಿವಿಧ ಬಗೆಯ ಹೂಗಳಿಂದ ಇಡೀ ದೇವಾಲಯವನ್ನು ಶೃಂಗರಿಸಲಾಗಿದ್ದು, ಮಧ್ಯರಾತ್ರಿಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.

ಮಹಾಲಕ್ಷ್ಮಿ ಲೇಔಟ್‌ನ ಶ್ರೀನಿವಾಸ ದೇವಾಲಯಕ್ಕೆ ಇಂದು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು.ಚಾಮರಾಜಪೇಟೆಯ ಕೋಟೆ ವೆಂಕಟರಮಣ ದೇವಾಲಯ, ಉಲ್ಲಾಳಿನ ಮುನೇಶ್ವರ ನಗರದ ಲಕ್ಷ್ಮೀ ವೆಂಕಟೇಶ್ವರ ದೇವಾಲಯ, ಮಾಗಡಿ ರಸ್ತೆಯ ಎಂ.ಜಿ.ರೈಲ್ವೆ ಕಾಲೋನಿಯ ಶ್ರೀ ವಿನಾಯಕ ವೆಂಕಟೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ನಗರದಾದ್ಯಂತ ಇರುವ ವೆಂಕಟೇಶ್ವರ ದೇವಾಲಯಗಳಲ್ಲಿ ಪೂಜೆ ಅದ್ಧೂರಿಯಾಗಿ ನಡೆಯಿತು.

ನೆಲಮಂಗಲದ ಸುಮಾರು 800 ವರ್ಷಗಳ ಇತಿಹಾಸವಿರುವ ಶ್ರೀದೇವಿ ಭೂದೇವಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ಉತ್ತರ ಬಾಗಿಲ ಮೂಲಕ ವೈಕುಂಠ ದರ್ಶನ ಪಡೆದು ಭಕ್ತರು ಪುನೀತರಾದರು.ರಾಜ್ಯದ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿರುವ ವೆಂಕಟೇಶ್ವರ ದೇವಾಲಯಗಳಲ್ಲೂ ಸಹ ಪೂಜಾ ಕಾರ್ಯಕ್ರಮಗಳು ನೆರವೇರಿದವು.

ವರ್ಷದಲ್ಲಿ 24 ಏಕಾದಶಿ ಬರಲಿದ್ದು, ಅದರಲ್ಲಿ ವೈಕುಂಠ ಏಕಾದಶಿಗೆ ವಿಶೇಷ ಮಹತ್ವವಿದೆ. ಈ ದಿನದಂದು ವಿಷ್ಣುವಿನ ನಿವಾಸದ ದ್ವಾರಗಳು ತೆರೆದಿರುತ್ತವೆ ಎಂಬುದು ಭಕ್ತರ ನಂಬಿಕೆ. ಹಾಗಾಗಿ ಭಕ್ತಾದಿಗಳು ಇಂದು ಉಪವಾಸದೊಂದಿಗೆ ದೇವಾಲಯಗಳಲ್ಲಿ ನಿರ್ಮಾಣ ಮಾಡಲಾಗಿರುವ ವೈಕುಂಠ ದ್ವಾರಗಳ ಮೂಲಕ ದೇವರ ದರ್ಶನ ಮಾಡಿ ಇಷ್ಟಾರ್ಥಗಳನ್ನು ಪೂರೈಸುವಂತೆ ಪೂಜೆ ಸಲ್ಲಿಸುತ್ತಾರೆ.

RELATED ARTICLES

Latest News