ಬೆಂಗಳೂರು, ಡಿ.2- ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಬ್ಬ ಇನ್ಸ್ ಪೆಕ್ಟರ್ ಮತ್ತು ಇಬ್ಬರು ಕಾನ್ಸ್ ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದ್ದು ಸಿಒಡಿ ತನಿಖೆಗೆ ಆದೇಶಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಒಡಿ ತನಿಖೆಯ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಸ್ಪಷ್ಟ ಪಡಿಸಿದರು.
ರಾಜಕೀಯ ತಿಳಿಯಾಗಿದೆ:
ಉಪಹಾರ ಕೂಟದ ಬಳಿಕ ರಾಜಕೀಯ ವಾತಾವರಣ ತಿಳಿಯಾಗಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರ ನಡುವೆ ಯಾವ ರೀತಿಯ ಚರ್ಚೆಯಾಗಿದೆ ಎಂದು ಅವರಿಬ್ಬರೇ ಹೇಳಬೇಕು. ನಮಗಂತೂ ಒಳಗಡೆ ಯಾವ ರೀತಿಯ ಚರ್ಚೆಯಾಗಿದೆ ಎಂದು ಗೊತ್ತಿಲ್ಲ. ಆದರೆ ಸದ್ಯಕ್ಕೆ ಎಲ್ಲವೂ ತಿಳಿಯಾಗಿದೆ ಎಂದು ನಾವು ಅಂದುಕೊಂಡಿದ್ದೇವೆ ಎಂದರು.
ನಮಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೂ ಅನಗತ್ಯವಾಗಿ ಗೊಂದಲಗಳು ಸೃಷ್ಟಿಯಾಗಿದ್ದವು ಎಂದು ಅಸಮಧಾನ ವ್ಯಕ್ತ ಪಡಿಸಿದರು.
ಇದೇ ತಿಂಗಳ 8 ರಿಂದ ಬೆಳಗಾವಿಯಲ್ಲಿ ಚಳಿಗಾಲದ ವಿಧಾನ ಮಂಡಳ ಅಧಿವೇಶನ ಶುರುವಾಗಲಿದೆ. ವಿರೋಧ ಪಕ್ಷಗಳು ಅಲ್ಲಿ ರಾಜ್ಯದ ಗಂಭೀರ ವಿಚಾರಗಳನ್ನು ಪ್ರಸ್ತಾಪಿಸಿ, ಚರ್ಚಿಸ ಬಹುದು ಎಂದುಕೊಂಡಿದ್ದೇವೆ. ವಿರೋಧ ಪಕ್ಷಗಳು ಟೀಕೆ ಮಾಡಲಿ, ಅದರ ಜೊತೆಗೆ ರಚನಾತಕ ಸಲಹೆ, ಸೂಚನೆಗಳನ್ನು ನೀಡಲಿ ಎಂದು ಆಗ್ರಹಿಸಿದರು.
ರಾಜಕೀಯ ಗೊಂದಲಗಳ ಬಗ್ಗೆ ಅಗತ್ಯವಾದ ಚರ್ಚೆಗಳು ಬೇಡ. ಉಪಹಾರ ಕೂಟದ ಮೂಲಕ, ಇದ್ದಂತಹ ಸಣ್ಣಪುಟ್ಟ ಗೊಂದಲಗಳು ಕೂಡ ಬಗೆ ಹರಿದಿವೆ ಎಂದಿದ್ದಾರೆ.ರಾಜಕೀಯ ಶಾಶ್ವತ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬ ಬಗ್ಗೆ ಖುದ್ದು ಅವರೇ ಸ್ಪಷ್ಟನೆ ನೀಡಬೇಕು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ನಾರಾಯಣ ಗುರು ಮತ್ತು ಮಹಾತ ಗಾಂಧಿ ಅವರ ಸಂವಾದದ ಶತಮಾನೋತ್ಸವದ ಬೃಹತ್ ಕಾರ್ಯಕ್ರಮವನ್ನು ಇಂದು ಮಂಗಳೂರಿನಲ್ಲಿ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಅವರು ಅದರಲ್ಲಿ ಭಾಗವಹಿಸುತ್ತಿದ್ದು ನನಗೂ ಆಹ್ವಾನ ಇರುವುದರಿಂದ ತಾವು ತೆರಳುತ್ತಿರುವುದಾಗಿ ಹೇಳಿದರು.
