ಬೆಳಗಾವಿ,ಡಿ.11- ಕರ್ನಾಟಕ ಡ್ರಗ್ಸ್ ಮುಕ್ತ ರಾಜ್ಯವಾಗುವವರೆಗೂ ಸಾರಿರುವ ಸಮರವನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಶಪಥ ಮಾಡಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಅಬ್ದುಲ್ ಜಬ್ಬಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯ ಮಾಡುವವರೆಗೂ ನಮ ಸಮರ ನಿಲ್ಲುವುದಿಲ್ಲ. ಎಷ್ಟೇ ಪ್ರಭಾವಿಗಳಾಗಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ ಎಂದರು.
ಡ್ರಗ್ಸ್ ವಿರುದ್ಧ ನಾವು ದೊಡ್ಡ ಸಮರವನ್ನೇ ಸಾರಿದ್ದೇವೆ. ಅದು ಕರ್ನಾಟಕ ಡ್ರಗ್ಸ್ ಮುಕ್ತ ರಾಜ್ಯವಾಗುವವರೆಗೂ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಇದು ಹೆಚ್ಚಾಗುತ್ತಿದೆ. ಕೆಲವು ಕಡೆ ಮನೆಗಳಲ್ಲಿ ಇದನ್ನು ತಯಾರಿಸುತ್ತಿದ್ದಾರೆ. ನಮ ಪೊಲೀಸರು ಇನ್ನುಮುಂದೆ ಇಂಥ ಪ್ರಕರಣಗಳು ಮರುಕಳುಸಿದರೆ ಮನೆಯನ್ನೇ ಒಡೆದು ಹಾಕುವುದಾಗಿ ಎಚ್ಚರಿಸಿದ್ದಾರೆ. ಈ ಪಿಡುಗು ಹೋಗುವವರೆಗೂ ವಿರಮಿಸುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸಿದರು.
ಈಗಾಗಲೇ ನಿತ್ಯವೂ ನಾವು ಡ್ರಗ್ ಸೀಸ್ ಮಾಡುತ್ತಾ ಇದ್ದೇವೆ. ಡ್ರಗ್ಸ್ ಮುಕ್ತ ಮಾಡುವ ನಿಟ್ಟಿನಲ್ಲಿ ಒಂದು ರೀತಿಯ ಯುದ್ದವನ್ನೇ ಘೋಷಿಸಿದ್ದೇವೆ. ಶಾಲಾ ಕಾಲೇಜುಗಳಲ್ಲಿ ಇದನ್ನು ನಿಯಂತ್ರಣ ಮಾಡಲು ಅನೇಕ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದರು.
ನಾವು ಸಾವಿರಾರು ಕೋಟಿ ಹಣದ ಮೌಲ್ಯದ್ದು ಡ್ರಗ್ಸ್ ಸುಟ್ಟು ಹಾಕಿದ್ದೇವೆ. ನಾನು ಬಹಳ ಕಠಿಣ ಸೂಚನೆ ಕೊಟ್ಟಿದ್ದೇವೆ. ಅಂತಹ ಅಧಿಕಾರಿಗಳ ಮೇಲೂ ಕಠಿಣ ಕ್ರಮ ವಹಿಸಿದ್ದೇವೆ. ದಾವಣಗೆರೆಯಲ್ಲಿ ಮನೆ ಮನೆಗೂ ಇದೆ ಅಂತಿದ್ದಾರೆ. ನಾವು ಇದನ್ನು ಖಂಡಿತ ನಿಯಂತ್ರಿಸುತ್ತೇವೆ ಎಂದು ಭರವಸೆ ನೀಡಿದರು.
