ಬೆಂಗಳೂರು,ಜ.3- ಬಳ್ಳಾರಿಯ ಗಲಭೆ ಪ್ರಕರಣದಲ್ಲಿ ಗಾಳಿಯಲ್ಲಿ ಹಾರಿಸಿದ ಗುಂಡು ತಗುಲಿ, ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿರುವುದಾಗಿ ಹೇಳಿದರು. ಖಾಸಗಿ ಗನ್ ಮ್ಯಾನ್‌ಗಳು ಗಾಳಿಯಲ್ಲಿ ಹಾರಿಸಿರುವ ಗುಂಡು ರಾಜಶೇಖರ್ ಅವರಿಗೆ ತಗುಲಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಸತೀಶ್ ರೆಡ್ಡಿ ಎಂಬುವರು ತಮ ಭದ್ರತೆಗಾಗಿ ಖಾಸಗಿ ಗನ್ ಮ್ಯಾನ್‌ಗಳನ್ನು ಇರಿಸಿಕೊಂಡಿದ್ದಾರೆ. ಗಲಭೆಯ ವೇಳೆಯಲ್ಲಿ ಕೆಲವರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಅದು ರಾಜಶೇಖರ ಅವರಿಗೆ ತಗುಲಿದೆ ಎಂದು ಹೇಳಿದರು.
ಯಾರ ಬಂದೂಕಿನಿಂದ ಹಾರಿದ ಗುಂಡು ತಗುಲಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಅದು ಕಾಂಗ್ರೆಸ್ಸಿನ ಮುಖಂಡರ ಅಂಗರಕ್ಷಕರ ಬಂಧುವಿನಿಂದಲೇ ಸಿಡಿದಿದೆಯೇ ಅಥವಾ ಬೇರೆಯವರ ಬಂದೂಕಿನ ಗುಂಡೇ ಎಂಬುದರ ತನಿಖೆಯಾಗುತ್ತಿದೆ. ಈ ಬಗ್ಗೆ ಸುದೀರ್ಘ ವರದಿ ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.
