ಹಾಸನ, ಡಿ.22-ರಾಜ್ಯದ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗಬೇಕಿದ್ದ ಎರಡು ತಿಂಗಳ ಗೃಹಲಕ್ಷಿ ಯೋಜನೆ(Grihalakshmi scheme)ಯ ಹಣ ಎಲ್ಲಿಗೆ ಹೋಯಿತು? ಅದರ ಬಗ್ಗೆ ರಾಜ್ಯ ಸರ್ಕಾರ ಏನು ಕ್ರಮ ಕೈಗೊಂಡಿದೆ? ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಕೊಡಬೇಕಿದ್ದ ಗೃಹಲಕ್ಷಿ ಯೋಜನೆ ಹಣ ಖಜಾನೆಯಲ್ಲಿ ಇದೆಯೋ? ಅಥವಾ ಇಲ್ಲವೋ? ಎನ್ನುವ ಅಂಶವನ್ನು ಸ್ವತಃ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಬೇಕು. ಅವರು ಮತ್ತು ಅವರ ಇಲಾಖೆಯ ಅಧಿಕಾರಿಗಳೇ ಇದಕ್ಕೆ ಜವಾಬ್ದಾರರು ಎಂದು ಆರೋಪಿಸಿದ್ದಾರೆ.
ಗೃಹಲಕ್ಷಿ ಯೋಜನೆಯ 5 ಸಾವಿರ ಕೋಟಿ ಹಣದ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಇದು ಸಣ್ಣ ವಿಚಾರವಲ್ಲ. ಇದು ಹೇಗಾಯಿತು? ಎಂದು ಸಂಬಂಧಿತ ಸಚಿವರಿಂದ ಮಾಹಿತಿ ಪಡೆದಿದ್ದೀರಾ? ಆ ಸಚಿವರ ರಾಜೀನಾಮೆ ಕೇಳಿದ್ದೀರಾ? ಹೋಗಲಿ, ಯಾರಾದರೂ ಅಧಿಕಾರಿಯನ್ನು ಇದಕ್ಕೆ ಹೊಣೆ ಮಾಡಿ ಅಮಾನತು ಮಾಡಿದ್ದೀರಾ? ಇಷ್ಟು ದೊಡ್ಡ ಮೊತ್ತದ ಹಣದ ಬಗ್ಗೆ ಎಷ್ಟು ಹಗುರವಾಗಿ ನಡೆದುಕೊಂಡಿದ್ದೀರಿ. ನಿಮಂತಹ ಹಣಕಾಸು ಸಚಿವರು ಅಮೆರಿಕದಲ್ಲೂ ಇಲ್ಲ. ಡೊನಾಲ್ಡ್ ಟ್ರಂಪ್ ಅವರಿಗೂ ಇಂಥ ಹಣಕಾಸು ಮಂತ್ರಿ ಸಿಗಲ್ಲವೇನೋ ಎಂದು ಅವರು ಲೇವಡಿ ಮಾಡಿದ್ದಾರೆ.
ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ರಾಜ್ಯ ಸರ್ಕಾರ ಹೇಳುವ ಬದಲು, ಕೇಂದ್ರದ ಮನವೊಲಿಸಲು ನೀವೇನು ಮಾಡಿದ್ದೀರಿ? ಎಂಬುದನ್ನು ಹೇಳಿ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಎತ್ತಿನಹೊಳೆ ಯೋಜನೆಯಲ್ಲಿ ಕೇಂದ್ರ ಸರ್ಕಾರ ಅಡ್ಡಿ ಮಾಡುತ್ತಿದೆ ಎಂದು ರಾಜ್ಯ ಸರ್ಕಾರದ ಮಂತ್ರಿಗಳು ಆರೋಪ ಮಾಡುತ್ತಿದ್ದಾರೆ. ಆದರೆ, ಪರಿಸರಕ್ಕೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿ, ಕಾನೂನು ಮೀರಿ ಅನೇಕ ಅನಧಿಕೃತ ಕಾಮಗಾರಿಗಳನ್ನು ನಡೆಸಿದ್ದಾರೆ. ಕೇಂದ್ರ ಪರಿಸರ ಸಚಿವಾಲಯ ಅದನ್ನು ಪ್ರಶ್ನೆ ಮಾಡಿದೆ. ಅದು ತಪ್ಪಾ? ಎಂದು ಅವರು ಹೇಳಿದ್ದಾರೆ.
ಕೇಂದ್ರದಿಂದ ಬರುತ್ತಿರುವ ಅನುದಾನವನ್ನು ಸರಿಯಾಗಿ ಬಳಕೆ ಮಾಡುತ್ತಿಲ್ಲ ಹಾಗೂ ಅದಕ್ಕೆ ಪೂರಕವಾಗಿ ಮ್ಯಾಚಿಂಗ್ ಗ್ರಾಂಟ್‌ಗಳನ್ನು ಕೊಡುತ್ತಿಲ್ಲ. ಆ ಬಗ್ಗೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿಲ್ಲ. ತಪ್ಪು ತಮ ಕಡೆ ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವನ್ನು ಟೀಕೆ ಮಾಡಿದರೆ ಏನು ಬರುತ್ತದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಹಾಸನಕ್ಕೆ ಲಗ್ಗೆ :
ಹಾಸನ ಜಿಲ್ಲೆಗೆ ಲಗ್ಗೆ ಹಾಕಲು ಕಾಂಗ್ರೆಸ್ ಬಹಳ ವೇಗದಲ್ಲಿದೆ.ಯಾರೂ ಮಾಡದೇ ಇರುವ ಕಾರ್ಯ ಮಾಡಿದ್ದೇವೆ ಎಂಬ ಹೇಳಿಕೆ ನೀಡಿದ್ದಾರೆ. ಫಲಾನುಭವಿಗಳಿಗೆ ಎಲ್ಲವನ್ನೂ ನೀಡಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ರೈತರ ಪರಿಸ್ಥಿತಿ ಧಾರುಣವಾಗಿದೆ. ರಾಜ್ಯದಲ್ಲಿ ಈ ಸರ್ಕಾರ ಬಂದಮೇಲೆ 2800ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ.
ರಾಜಣ್ಣ ಅವರು ಸಹಕಾರ ಸಚಿವರಾಗಿದ್ದಾಗ ರೈತರಿಗೆ 24 ಸಾವಿರ ಕೋಟಿ ರೂ. ಸಾಲ ಕೊಡ್ತೇವೆ ಎಂದು ಹೇಳಿದ್ದರು. ಈಗ 12 ಸಾವಿರ ಕೋಟಿ ರೂ. ಕೊಟ್ಟಿದ್ದೇವೆ ಎನ್ನುತ್ತಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದೇನೆ. ಅದರಿಂದಾಗಿ 12 ಬ್ಯಾಂಕ್‌ಗಳು ಉಳಿದುಕೊಂಡವು. ಈ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.
ಶಾಸಕರಾದ ಸಿ.ಎನ್. ಬಾಲಕೃಷ್ಣ, ಸ್ವರೂಪ್ ಪ್ರಕಾಶ್, ಮಾಜಿ ಶಾಸಕ ಲಿಂಗೇಶ್, ಒಕ್ಕಲಿಗರ ಸಂಘದ ರಾಜ್ಯ ಘಟಕದ ನಿರ್ದೇಶಕ ರಘು ಗೌಡ ,ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಸತ್ಯನಾರಾಯಣ, ಜೆಡಿಎಸ್ ಮುಖಂಡರಾದ ಪರಮ ದೇವರಾಜೇಗೌಡ ಇತರರು ಈ ಸಂದರ್ಭದಲ್ಲಿದ್ದರು.
Read This : ಶನಿವಾರದೊಳಗೆ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ
