ನವದೆಹಲಿ : ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸುವುದಕ್ಕೆ ಡಿಸಿಎಂ ಯಾರು? ಅವರಿಗೆ ಆ ಅಧಿಕಾರ ಯಾರು ಕೊಟ್ಟರು? ರಾಜ್ಯದಲ್ಲಿ ಇರೋದು ರಬ್ಬರ್ ಸ್ಟ್ಯಾಂಪ್ ಗೃಹ ಸಚಿವರಾ? ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನವದೆಹಲಿಯ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತಾಡಿದ ಕೇಂದ್ರ ಸಚಿವರು; ಡಿಸಿಎಂ ಅವರು ಮಂಗಳವಾರ ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಅದಕ್ಕೆ ಗೃಹ ಸಚಿವರು ಇಲ್ಲವೇ? ರಾಜ್ಯದಲ್ಲಿ ಇರುವ ಗೃಹ ಸಚಿವರು ಹೆಬ್ಬೆಟ್ಟು ಸಚಿವರಾ? ಇಂದು ಕೇಂದ್ರ ಸಚಿವರು ಖಾರವಾಗಿ ಪ್ರಶ್ನಿಸಿದರು.
ನನಗೆ ಹಲವು ಮಾಹಿತಿಗಳು, ನೈಜ ಘಟನೆಗಳ ಬಗ್ಗೆ ಮಾಹಿತಿಕೊಡುವವರು ಇದ್ದಾರೆ. ಅದರ ಸತ್ಯಾಸತ್ಯತೆ ಪರಿಶೀಲಿಸಿ ಆ ಬಳಿಕ ನಾನು ಮಾಧ್ಯಮಗಳಿಗೆ ವಿವರಿಸಿದ್ದೇನೆ. ಜನತೆಗೆ ಸತ್ಯ ತಿಳಿಯಬೇಕಲ್ಲವೇ? ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಡಿಸಿಎಂ ಅವರು ಯಾವ ಅಧಿಕಾರದ ಮೇಲೆ ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ? ಗೃಹ ಇಲಾಖೆಯಲ್ಲಿ ಇವರ ಹಸ್ತಕ್ಷೇಪ ಯಾಕೆ? ಡಿಸಿಎಂ ಎಂದರೆ ಅವರು ಮಂತ್ರಿ ಅಷ್ಟೇ. ಕಾಂಗ್ರೆಸ್ ಸತ್ಯ ಶೋಧನಾ ಸಮಿತಿಗೆ ಅಧಿಕಾರಿಗಳು ಯಾವ ಮಾಹಿತಿ ಕೊಡುತ್ತಾರೆ? ಕಾರ್ಯಕರ್ತರು, ಕಾಂಗ್ರೆಸ್ ನಾಯಕರು ಘಟನೆಗೆ ಕಾರಣರಾದ ಶಾಸಕರ ವಿರುದ್ದವೇ ಸತ್ಯಶೋಧನೆ ಸಮಿತಿಯ ಮುಂದೆ ದೂರು ನೀಡಿದ್ದಾರೆ. ಹಾಗಾದರೆ ನಿಮ್ಮ ತನಿಖೆಯ ಹಣೆಬರಹ ಏನು ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.
ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ:
ಬಳ್ಳಾರಿ ನಗರದಲ್ಲಿ ನಡೆದ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಸರ್ಕಾರ ತರಾತುರಿಯಲ್ಲಿ ಕೆಲಸ ಮಾಡುತ್ತಿದೆ. ಕೇವಲ ಬ್ಯಾನರ್ ಕಟ್ಟುವ ವಿಚಾರಕ್ಕೆ ಬೀದಿಯಲ್ಲಿ ಗುಂಡು ಹಾರಿಸ್ತಾರಾ? ಮರಣೋತ್ತರ ಪರೀಕ್ಷೆ ನಡೆದ ನಂತರ ಕೊಲೆಯಾದ ಕಾರ್ಯಕರ್ತನ ಮೃತದೇಹವನ್ನು ತರಾತುರಿಯಲ್ಲಿ ಸುಟ್ಟು ಹಾಕಿದ್ದು ಯಾಕೆ? ಕುಟುಂಬದವರಿಗೆ ಅಂತಿಮ ವಿಧಿ ವಿಧಾನ ನಡೆಸುವುದಕ್ಕೆ ಅವಕಾಶವನ್ನೂ ನೀಡದೆ ಮೃತದೇಹವನ್ನು ತರಾತುರಿಯಲ್ಲಿ ಸುಟ್ಟಿದ್ದು ಯಾಕೆ? ಇದಕ್ಕೆಲ್ಲಾ ಸರ್ಕಾರ ಉತ್ತರ ಕೊಡಬೇಕಲ್ಲವೇ? ಇಂದು ಕುಮಾರಸ್ವಾಮಿ ಅವರು ಒತ್ತಾಯಿಸಿದರು.
ಸತ್ಯಶೋಧನ ಸಮಿತಿ ಸತ್ಯ ಹೇಳಲಿ:
ಬಳ್ಳಾರಿಯಲ್ಲಿ ನಡೆದದ್ದು ಅಹಿತರ ಘಟನೆ, ಸಾವು ಪ್ರಕರಣ ಎಲ್ಲರಿಗೂ ನೋವು ತರುತ್ತದೆ. ಕಳೆದ ಒಂದು ವಾರದಿಂದ ಹಲವು ನಾಯಕರು ಬಳ್ಳಾರಿಗೆ ಭೇಟಿ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರು ಸತ್ಯಶೋಧನೆ ಮಾಡುತ್ತೇವೆ ಎಂದು ಹೋಗಿದ್ದರು! ಅಲ್ಲಿ ಅವರೇನು ಸತ್ಯ ಶೋಧನೆ ಮಾಡಿದರು ಎಂಬುದನ್ನು ಜನರ ಮುಂದೆ ಹೇಳಲಿ. ಯಾಕೆಂದರೆ ಕಾಂಗ್ರೆಸ್ಸಿಗರು ಸತ್ಯ ಬಿಟ್ಟು ಬೇರೇನು ಹೇಳುವುದಿಲ್ಲ. ಹಾಗಿದ್ದ ಮೇಲೆ ಈ ಸಮಿತಿ ಸತ್ಯವನ್ನೇ ಹೇಳಲಿ ಎಂದು ಸಚಿವ ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದರು.
ನನ್ನ ಮತ್ತು ಜನಾರ್ಧನ ರೆಡ್ಡಿ ನಡುವೆ ನಡೆದ ಗಲಾಟೆ ಹಳೇ ಕಥೆ. ಅದನ್ನು ಈಗ ಮುಂದೆ ತಂದು ಅವರು ಏನು ಮಾಡಲು ಸಾಧ್ಯ? ನಾನು ಯಾವುದೋ ರಾಗದ್ವೇಷ ಇಲ್ಲದೇ ಮಾಧ್ಯಮಗಳ ಮುಂದೆ ಸತ್ಯ ಹೇಳಿದ್ದೇನೆ. ಕಾಂಗ್ರೆಸ್ ಜತೆ ಕೂಡ ಸರ್ಕಾರ ಮಾಡಿದ್ದೇನೆ.. ಆಗ ಬಂಡೆ ತರ ನಿಂತಿದ್ದು ಇವರೇ ತಾನೇ. ಎಲ್ಲರೂ ಜೋಡೆತ್ತು ಎಂದರು. ಆಮೇಲೆ ಆಗಿದ್ದು ಏನು? ಬೆನ್ನಿಗೆ ಚೂರಿ ಹಾಕಿ ವಿಶ್ವಾಸ ದ್ರೋಹ ಎಸಗಿದರು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಮೊದಲು ಗುರುಮಠಕಲ್ ಕ್ಷೇತ್ರದತ್ತ ನೋಡಿ; ಪ್ರಿಯಾಂಕ್ ಖರ್ಗೆಗೆ ತಿರುಗೇಟು
ತಮ್ಮ ಹೇಳಿಕೆ ಬಗ್ಗೆ ಲಘುವಾಗಿ ಮಾತಾಡಿದ್ದ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ತಿರುಗೇಟು ಕೊಟ್ಟ ಕೇಂದ್ರ ಸಚಿವರು; ಮೊದಲು ಗುರುಮಿಠಕಲ್ ಕ್ಷೇತ್ರಕ್ಕೆ ನಿಮ್ಮ ಹಾಗೂ ನಿಮ್ಮ ತಂದೆ ಕೊಡುಗೆ ಏನು ಅಂತ ಹೇಳಿ. ಕಲ್ಯಾಣ ಕರ್ನಾಟಕ ಬಿಡಿ, ನಿಮ್ಮ ಕ್ಷೇತ್ರ ನೋಡಿದರೆ ನೀವು ಮಾಡಿದ ಅಭಿವೃದ್ಧಿ ಏನು, ಎಂತದ್ದು ಎಂಬುದು ಗೊತ್ತಾಗುತ್ತದೆ. ಬಳಕೆಯಲ್ಲಿ ಯಾವ ತನಿಖೆ ನಡೆಸ್ತಿರಿ?ಪೋಸ್ಟ್ ಕರ್ತಮದಳಿಕೆ ಇಬ್ಬರು ವೈದ್ಯರನ್ನು ಕರೆಸಿದ್ದು ಯಾಕೆ? ಇದು ಇಲ್ಲಿರುವ ಪ್ರಶ್ನೆ? ಹಾಲಿ ಒಬ್ಬ ವೈದ್ಯರು ಪೋಸ್ಟ್ ಮಾರ್ಟಂ ಮಾಡುತ್ತಿದ್ದರೆ ಎರಡನೇ ವೈದ್ಯರನ್ನು ಪೂಜೆ ಮಾಡಲು ಕರೆಸಿದಿರಾ? ಎಂದು ಸಚಿವ ಕುಮಾರಸ್ವಾಮಿ ಅವರು ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಈಗ ನಡೆಯುತ್ತಿರುವುದು ಡಿಜಿಟಲ್ ಯುಗ. ಕುತಿರುವ ಕಡೆ ಮಾಹಿತಿ ಪಡೆಯಬಹುದು. ಈ ಪ್ರಕರಣದ ಸರಿಯಾದ ತನಿಖೆ ನಡೆದರೆ ಯಾರ ಯಾರ ತಲೆ ಉರುಳುತ್ತೋ ಗೊತ್ತಿಲ್ಲ ಎಂದು ಪೊಲೀಸ್ ಅಧಿಕಾರಿಗಳೇ ಮಾತಾಡುತ್ತಿದ್ದಾರೆ. ನಾನು ಗೊತ್ತಿದ್ದೇ ಮಾತನಾಡಿದ್ದೇನೆ. ನಾನು ನಾಲಿಗೆ ತೀಟೆ ತೀರಿಸಿಕೊಳ್ಳಲು ನಾನು ಮಾತಾಡಲ್ಲ. ಕರ್ನಾಟಕವನ್ನು ಜಂಗಲ್ ರಾಜ್ಯ ಮಾಡಲಾಗುತ್ತಿದೆ. ಇದು ಅತ್ಯಂತ ಗಂಭೀರ ಪ್ರಕರಣ. ಮುಖ್ಯಮಂತ್ರಿ ಈ ಬಗ್ಗೆ ಬಾಯಿ ಬಿಡುತ್ತಿಲ್ಲ ಯಾಕೆ? ನಿಮ್ಮ ಶಾಸಕರೇ ಕೊಲೆ ಮಾಡಿಸಿದರೂ ಯಾರು ಕೇಳುವಂತಿಲ್ಲ ಎನ್ನುವಂತೆ ಆಗಿದೆ. ನನ್ನ ಬಗ್ಗೆ ನೀವು ಲಘುವಾಗಿ ಮಾತಾಡುವುದು ಬೇಡ ಅಂಥ ನಿಮ್ಮ ಗೃಹ ಸಚಿವರಿಗೆ, ಇನ್ನೊಬ್ಬರಿಗೆ ಹೇಳಿ ಎಂದು ಕೇಂದ್ರ ಸಚಿವರು ಕಿಡಿಕಾರಿದರು.
ಗೃಹ ಸಚಿವ ಪರಮೇಶ್ವರ್ ಅವರಿಗೆ ತರಾಟೆಗೆ ತೆಗೆದುಕೊಂಡ ಸಚಿವರು; ನಕಲಿ ಶಾಮನ ಮಾತು ನಿಲ್ಲಿಸಿ ಗೃಹ ಸಚಿವರೇ.. ಮೊದಲು ಬಳ್ಳಾರಿ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಿ. ಯಾರ ಯಾರ ತಲೆ ಉರುಳುತ್ತದೆ ಎನ್ನುವುದು ನಿಮಗೆ ಗೊತ್ತಾಗುತ್ತದೆ ಎಂದು ಟಾಂಗ್ ಕೊಟ್ಟರು.
ಬಳ್ಳಾರಿ ಬಿಮ್ಸ್ ನಿರ್ದೇಶಕರೇ ಹೇಳುವಂತೆ ಡಾ. ಯೋಗೀಶ್ ಎಂಬುವರು ಮೊದಲು ಮರಣೋತ್ತರ ಪರೀಕ್ಷೆ ಶುರು ಮಾಡಿದರು. ಅವರ ಪರೀಕ್ಷೆ ತಡವಾಯಿತು ಎಂದು ಇನ್ನೊಬ್ಬ ವೈದ್ಯ ಡಾ. ಚೇತನ್ ಎನ್ನುವರನ್ನು ಕರೆಸಿದ್ದಾರೆ. ಆ ವೈದ್ಯರನ್ನು ಕರೆಸಿದ್ದು ಯಾಕೆ? ಯಾರ ಆದೇಶದಂತೆ ಅವರನ್ನು ಕರೆಸಲಾಯಿತು? ಇತಿಹಾಸದಲ್ಲಿ ಮೊದಲ ಬಾರಿಗೆ ಮರಣೋತ್ತರ ಪರೀಕ್ಷೆಗೆ ಇಬ್ವರು ವೈದ್ಯರನ್ನು ಕರೆಸಿ ಮಾಡಿಸಿದ್ದಾರೆ. ಇದು ಯಾಕಾಯಿತು? ಯಾರು ಒತ್ತಡ ಹೇರಿದರು? ಯಾರನ್ನು ರಕ್ಷಣೆ ಮಾಡಲಿಕ್ಕೆ ಇದೆಲ್ಲವನ್ನೂ ಮಾಡಿದಿರಿ ಎಂಬುದನ್ನು ಜನರಿಗೆ ಹೇಳಬೇಕಲ್ಲವೇ ಎಂದು ಡಿಸಿಎಂ ಡಿಕೆಶಿ ಮಿಸ್ ಗೈಡ್ ಹೇಳಿಕೆಗೆ ತಿರುಗೇಟು ಕೊಟ್ಟರು ಕೇಂದ್ರ ಸಚಿವರು.
ನಾನು ಯಾವುದೇ ವಿಷಯವನ್ನು ದಾಖಲೆಗಳು ಇಲ್ಲದೇ ಮಾತಾಡಲ್ಲ. ನೀವೆಲ್ಲಾ ಯಾರನ್ನು ತಪ್ಪಿತಸ್ಥರನ್ನಾಗಿ ಮಾಡಲು ಹೊರಟಿದ್ದೀರಿ ಎನ್ನುವುದು ಗೊತ್ತಿದೆ. ಜನಾರ್ಧನ ರೆಡ್ಡಿ ಮನೆ ಮೇಲೆ ದಾಳಿ ನಡೆಸುತ್ತಿದ್ದ ಗುಂಪನ್ನು ಕೇವಲ ಐದು ನಿಮಿಷದಲ್ಲಿ ಚದುರಿಸಬಹುದಿತ್ತು. ಯಾಕೆ ಚದುರಿಸಲಿಲ್ಲ? ಪೊಲೀಸರ ಕೈ ಯಾರು ಕಟ್ಟಿ ಹಾಕಿದರು? ಖಾಸಗಿ ಗನ್ ಮ್ಯಾನ್ ಗಳು ಮನಸೋ ಇಚ್ಚೆ ಫೈರಿಂಗ್ ಮಾಡುತ್ತಿದ್ದರೂ ಪೊಲೀಸರು ಸುಮ್ಮನೆ ಇದ್ದರು! ಯಾಕೆ? ಇಂದು ಕೇಂದ್ರ ಸಚಿವರು ಪ್ರಶ್ನೆ ಮಾಡಿದರು.
