ಬೆಂಗಳೂರು,ಡಿ.27– ರಾಜ್ಯದಲ್ಲಿ ಮಾಗಿಚಳಿಯ ತೀವ್ರತೆ ಮುಂದುವರೆದಿದ್ದು, ಬೀದರ್ನಲ್ಲಿ ಕನಿಷ್ಠ ತಾಪಮಾನ 6.3 ಡಿ.ಸೆಂ.ನಷ್ಟು ದಾಖಲಾಗಿದೆ.ನಿನ್ನೆಯಿಂದೀಚೆಗೆ ಕನಿಷ್ಠ ತಾಪಮಾನದಲ್ಲಿ ಅಲ್ಪ ಏರಿಕೆ ಕಂಡುಬಂದಿದೆ. ಆದರೆ ವಾಡಿಕೆಗಿಂತಲೂ ಹೆಚ್ಚು ಚಳಿ ಕಂಡುಬರುತ್ತಿದೆ.
29 ರಿಂದ ಮೂರ್ನಾಲ್ಕು ದಿನಗಳ ಕಾಲ ಕನಿಷ್ಠ ತಾಪಮಾನದಲ್ಲಿ ಅಲ್ಪ ಹೆಚ್ಚಳ ಕಂಡುಬರಲಿದೆ. ಆದರೆ ಶೀತ ಗಾಳಿ ಮಾತ್ರ ಮುಂದುವರೆಯಲಿದೆ. ಇದರಿಂದ ಹಗಲು-ರಾತ್ರಿ ಎನ್ನದೆ ಚಳಿ ಜನರನ್ನು ಕಾಡತೊಡಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ರಾಜ್ಯದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕನಿಷ್ಠ ತಾಪಮಾನ 10 ಡಿ.ಸೆಂ.ಗಿಂತಲೂ ಕಡಿಮೆ ಇದ್ದು, ದಕ್ಷಿಣ ಒಳನಾಡಿನಲ್ಲಿ 12 ರಿಂದ 14 ಡಿ.ಸೆಂ.ನಷ್ಟು ಕಂಡುಬರುತ್ತಿದೆ. ಕರಾವಳಿ ಭಾಗದಲ್ಲಿ 17 ರಿಂದ 19 ಡಿ.ಸೆಂ.ನಷ್ಟು ಕಂಡುಬರುತ್ತಿದೆ. ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನವು 12.5 ಡಿ.ಸೆಂ.ನಷ್ಟು ದಾಖಲಾಗಿದೆ.
ಗರಿಷ್ಠ ತಾಪಮಾನ ಕರಾವಳಿ ಭಾಗದಲ್ಲಿ ಹೆಚ್ಚಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸರಾಸರಿ 27 ಡಿ.ಸೆಂ.ನಿಂದ 29 ಡಿ.ಸೆಂ.ನಷ್ಟು ಕಂಡುಬರುತ್ತಿದೆ. ವಾತಾವರಣದಲ್ಲಿ ಪದೇಪದೇ ಆಗುತ್ತಿರುವ ಬದಲಾವಣೆಯಿಂದ ತಾಪಮಾನದಲ್ಲೂ ಏರಿಳಿತವಾಗುತ್ತಿದೆ.
ಇಂದಿನಿಂದ 2-3 ದಿನಗಳ ಕಾಲ ಭಾಗಶಃ ಮೋಡ ಆವರಿಸುವ ಸಾಧ್ಯತೆ ಇದೆ. ಆದರೆ ಬೆಳಗಿನ ವೇಳೆ ಮಂಜು ಮುಸುಕುವುದು, ಇಬ್ಬನಿ ಬೀಳುವುದು ಮಾತ್ರ ಮುಂದುವರೆಯಲಿದೆ.
ಕೆಲವೆಡೆ ಬೆಳಗಿನ ಜಾವ ದಟ್ಟವಾದ ಮಂಜು ಕವಿಯುವ ಸಂಭವವೂ ಹೆಚ್ಚಾಗಿದೆ. ಹೀಗಾಗಿ ವಾಹನ ಸವಾರರು ಮುನ್ನೆಚ್ಚರಿಕೆ ವಹಿಸುವುದು ಅವಶ್ಯಕ. ಜೊತೆಗೆ ಮೈ ಕೊರೆಯುವ ಚಳಿ ಹಾಗೂ ಶೀತಗಾಳಿ ಇರುವುದರಿಂದ ಜನರು ಬೆಚ್ಚಗಿನ ಉಡುಪು ಧರಿಸಿ, ಬಿಸಿ ಆಹಾರ, ನೀರು ಸೇವಿಸುವುದು ಸೂಕ್ತ ಎಂದು ಹವಾಮಾನ ತಜ್ಞರು ಹಾಗೂ ವೈದ್ಯರು ತಿಳಿಸಿದ್ದಾರೆ.
