ಬೆಂಗಳೂರು, ಡಿ.7- ದೆಹಲಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ನಾಳೆಯಿಂದ ಆರಂಭವಾಗುವ ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಅದೇ ಮಾದರಿಯಲ್ಲಿ ಬೇರೆಬೇರೆ ರಾಜ್ಯಗಳ ಪ್ರಮುಖ ಕೇಂದ್ರಗಳ ಮೇಲೆ ದಾಳಿ ನಡೆಯುವ ಮುನ್ಸೂಚನೆ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ಸಂದೇಶ ರವಾನಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
ಬಿಗಿಭದ್ರತೆ:
ಸುಮಾರು ಆರು ಸಾವಿರ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಭದ್ರತೆಗೆ ನಿಯೋಜಿಸಿದ್ದು, ಸುವರ್ಣಸೌಧದ ಸುತ್ತಮುತ್ತ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ್ ಬೋರಸೆ ಅವರ ನೇತೃತ್ವದಲ್ಲಿ 6 ಎಸ್‌ಪಿ ದರ್ಜೆಯ ಐಪಿಎಸ್ ಅಧಿಕಾರಿಗಳ ಕಣ್ಗಾವಲಿನಲ್ಲಿ 146 ಹಿರಿಯ ಪೊಲೀಸ್ ಅಧಿಕಾರಿಗಳು, 3820 ಪೊಲೀಸ್ ಸಿಬ್ಬಂದಿಗಳು, 500 ಹೋಮ ಗಾರ್ಡ್, 8 ಕ್ಷಿಪ್ರ ಕಾರ್ಯಾಚರಣೆ ಪಡೆ, 10ಡಿಎ ಆರ್ ತುಕಡಿ, 35ಕೆಎಸ್‌ಆರ್‌ಪಿ ತುಕಡಿ, 1 ಬಾಂಬ್ ಸ್ಕ್ವಾಡ್, 1 ಗರುಡಾ ಪೊಲೀಸ್, 16 ವಿಧ್ವಂಸಕ ಕೃತ್ಯ ತಪಾಸಣೆ ತಂಡವನ್ನು ನಿಯೋಜಿಸಲಾಗಿದೆ.ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ, ಬೆಳಗಾವಿ ವಲಯ ಐಜಿಪಿ ಕಣ್ಗಾವಲು ಇಡಲಿದ್ದಾರೆ.
ಪ್ರತಿಭಟನೆಗಳ ಬಿಸಿ:
ಬೆಳಗಾವಿಯ ಚಳಿಗಾಲದ ಅಧಿವೇಶನದ ಸಂದರ್ಭದಲ್ಲೇ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುವ ಸಾಧ್ಯತೆಯಿದ್ದು, ಮೆಕ್ಕೆಜೋಳ, ಹೆಸರು ಕಾಳು ಬೆಲೆ ಕುಸಿತವಾಗಿರುವುದು ರೈತರನ್ನು ಕಂಗೆಡಿಸಿದೆ. ಕಬ್ಬು ಬೆಳೆಗಾರರ ಪ್ರತಿಭಟನೆ ತಾತ್ಕಾಲಿಕವಾಗಿ ಶಮನವಾಗಿದ್ದರೂ, ಬೇಡಿಕೆ ಇನ್ನೂ ಪೂರ್ಣವಾಗಿ ಈಡೇರಿಲ್ಲ. ಹೀಗಾಗಿ ಬಾಗಲಕೋಟೆ ಹಾಗೂ ಇತರ ಜಿಲ್ಲೆಗಳ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.
ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಎರಡೂವರೆ ಲಕ್ಷ ಹುದ್ದೆಗಳ ನೇಮಕಾತಿಗಾಗಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಇತ್ತೀಚೆಗೆ ಉದ್ಯೋಗ ಆಕಾಂಕ್ಷಿಗಳು ಹುಬ್ಬಳ್ಳಿ ಧಾರವಾಡದಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದರು. ಅದರ ಪರಿಣಾಮ ಮತ್ತೆ ಬೆಳಗಾವಿಯಲ್ಲೂ ಪ್ರತಿಭಟನೆಯಾಗುವ ಸಾಧ್ಯತೆ ಇದೆ. ಒಳ ಮೀಸಲಾತಿಯ ಗೊಂದಲಗಳು ಇನ್ನೂ ಜೀವಂತವಾಗಿವೆ, ಹೀಗಾಗಿ ಕೆಲವು ಪರಿಶಿಷ್ಟ ಸಮುದಾಯದ ಸಂಘಟನೆಗಳ ಪ್ರತಿಭಟನೆಯೂ ನಡೆಯುವ ಸಾಧ್ಯತೆ ಇದೆ.
ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯಿತಿಗಳ ದಿನಗೂಲಿ ನೌಕರರು ವೇತನ ಪರಿಸ್ಕಾರಣೆ ವೇತನ ಪಾವತಿಯಂತಹ ಸಮಸ್ಯೆಗಳಿಗಾಗಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಮಹಾರಾಷ್ಟ್ರ ಬೆಂಬಲಿತ ಸಂಘಟನೆಗಳು ಮತ್ತೊಮೆ ತಗಾದೆ ತೆಗೆಯುವ ಆತಂಕವೂ. ಈ ಹಿನ್ನೆಲೆಯಲ್ಲಿ ನಾಳೆ ಬೆಳಗಾವಿಯಲ್ಲಿ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿದೆ.
ಉತ್ತರಕರ್ನಾಟಕ ಭಾಗದಲ್ಲಿ ಅಭಿವೃದ್ಧಿಯಾಗಿಲ್ಲ ಎಂಬ ಕಾರಣಕ್ಕಾಗಿ ಪ್ರತ್ಯೇಕ ರಾಜ್ಯದ ಬೇಡಿಕೆಯು ಮತ್ತೆ ಮುನ್ನೆಲೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೆಲವು ಸಂಘಟನೆಗಳು ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲಿ ತಮ ಹಕ್ಕೋತಾಯಕ್ಕಾಗಿ ಬೀದಿಗೆ ಇಳಿಯುವ ನಿರೀಕ್ಷೆಯಿದೆ.
ಸಂಘಟನೆಗಳ ಪ್ರತಿಭಟನೆಗಳು ಒಂದೆಡೆಯಾದರೆ ಭಯೋತ್ಪಾದಕರ ದಾಳಿಯ ಮುನ್ನೆಚ್ಚರಿಕೆಯೂ ಭದ್ರತಾ ಸವಾಲನ್ನು ಹೆಚ್ಚಿಸಿದೆ. ಹೀಗಾಗಿ ರಾಜ್ಯ ಸರ್ಕಾರ ಎಲ್ಲಾ ರೀತಿಯ ಭದ್ರತೆಗಳನ್ನು ಕೈಗೊಂಡಿದ್ದು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಅಧಿಕಾರಿಗಳು, ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
