ಬೆಂಗಳೂರು,ಡಿ.15-ಸ್ನೇಹಿತರ ಜೊತೆ ಸೇರಿ ಹೋಟೇಲ್‌ವೊಂದರಲ್ಲಿ ಪಾರ್ಟಿ ಮಾಡುವಾಗ ಪೊಲೀಸರು ಬಂದಿದ್ದರಿಂದ ಹೆದರಿ ತಪ್ಪಿಸಿಕೊಳ್ಳುವ ಆತುರದಲ್ಲಿ ಬಾಲ್ಕನಿಗೆ ಹೋಗಿ ಕೆಳಗೆ ಇಳಿಯುತ್ತಿದ್ದಾಗ ಆಯತಪ್ಪಿ ಬಿದ್ದು ಯುವತಿ ಗಂಭೀರ ಗಾಯಗೊಂಡಿರುವ ಘಟನೆ ಹೆಚ್‌ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವೈಷ್ಣವಿ (21) ಎಂಬ ಯುವತಿ ಕುಂದಲಹಳ್ಳಿ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಶನಿವಾರ ರಾತ್ರಿ ವೈಷ್ಣವಿ ತನ್ನ ಎಂಟು ಮಂದಿ ಸ್ನೇಹಿತರೊಂದಿಗೆ ಎಇಸಿಎಸ್ ಲೇಔಟ್‌ನಲ್ಲಿರುವ ಹೋಟೇಲ್‌ಗೆ ಪಾರ್ಟಿ ಮಾಡಲು ಹೋಗಿದ್ದಾರೆ.
ಮ್ಯೂಸಿಕ್ ಹಾಕಿಕೊಂಡು ಅಂದು ಮಧ್ಯರಾತ್ರಿ ಕೂಗಾಡುತ್ತಾ ಡ್ಯಾನ್ಸ್ ಮಾಡುತ್ತಿದ್ದರಿಂದ ಅಕ್ಕ ಪಕ್ಕದ ಮನೆಯ ನಿವಾಸಿಗಳಿಗೆ ಕಿರಿಕಿರಿಯಾಗಿದೆ.ಹಾಗಾಗಿ ಅವರು 112ಗೆ ಕರೆ ಮಾಡಿದ್ದಾರೆ. ಸುದ್ದಿ ತಿಳಿದ ತಕ್ಷಣ ಹೊಯ್ಸಳ ಪೊಲೀಸರು ಸ್ಥಳಕ್ಕೆ ಹೋಗಿ ಇಬ್ಬರು ಯುವಕರನ್ನು ಹೋಟೇಲ್‌ನ ರಿಸೆಪ್ಸನ್‌ಹಾಲ್ ಬಳಿ ಕರೆದುಕೊಂಡು ಬಂದು ಮಾತನಾಡಿದ್ದಾರೆ.
ಇದನ್ನು ಗಮನಿಸಿದ ವೈಷ್ಣವಿ ಭಯಗೊಂಡು ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಟೇಲ್‌ನ ಬಾಲ್ಕನಿಗೆ ಹೋಗಿ ಪೈಪ್ ಹಿಡಿದುಕೊಂಡು ಕೆಳಗೆ ಇಳಿಯಲು ಯತ್ನಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.
ತಕ್ಷಣ ಆಕೆಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಪ: ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದಿದ್ದ ಪೊಲೀಸರು ನಮಗೆ ಹಣ ಕೇಳಿದರು. ನಾವು ೇನ್‌ಪೇ ಮಾಡುವುದಾಗಿ ಹೇಳಿದಾಗ ನಮಗೆ ಕ್ಯಾಶ್ ಕೊಡಲು ಕೇಳಿದರು ಎಂಬ ಆರೋಪ ಪೊಲೀಸರ ಮೇಲೆ ಇದೀಗ ಕೇಳಿ ಬಂದಿದೆ.ಪೊಲೀಸರು ಹಣ ಕೇಳಿದರೆಂಬ ಆರೋಪದ ಹಿನ್ನೆಲೆಯಲ್ಲಿ ಡಿಸಿಪಿ ತನಿಖೆ ಕೈಗೊಂಡಿದ್ದು, ಅಂದು ಕರ್ತವ್ಯದಲ್ಲಿದ್ದ ಪೊಲೀಸರು ಧರಿಸಿದ್ದ ಬಾಡಿ ಕ್ಯಾಮರಾವನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಬೈಕ್ ಅಪಘಾತ : ಪಿಯು ವಿದ್ಯಾರ್ಥಿ ಸಾವು
ತಂದೆಯ ಬೈಕ್ ತೆಗೆದುಕೊಂಡು ಬಂದಿದ್ದ ಪಿಯುಸಿ ವಿದ್ಯಾರ್ಥಿ ರಸ್ತೆ ದಾಟುತ್ತಿದ್ದ ಮೂವರಿಗೆ ಡಿಕ್ಕಿ ಹೊಡೆದು ಉರುಳಿ ಬಿದ್ದು ಮೃತಪಟ್ಟಿರುವ ಘಟನೆ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ರುದ್ರೇಶ್ (17) ಮೃತಪಟ್ಟ ಬಾಲಕ. ಈತ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದನು.
ನಿನ್ನೆ ಸಂಜೆ 6.30 ರ ಸುಮಾರಿನಲ್ಲಿ ತಂದೆಯ ಬೈಕ್ ತೆಗೆದುಕೊಂಡು ರುದ್ರೇಶ್ ಬಂದಿದ್ದು , ಬೆಂಗಳೂರು-ಬಳ್ಳಾರಿ ರಸ್ತೆಯ ಏರ್‌ಪೋರ್ಟ್ ಟೋಲ್ ಬಳಿ ನಿಯಂತ್ರಣ ತಪ್ಪಿ ರಸ್ತೆ ದಾಟುತ್ತಿದ್ದ ಇಬ್ಬರು ಪುರುಷರು ಹಾಗೂ ಮಹಿಳೆಗೆ ಡಿಕ್ಕಿ ಹೊಡೆದು ಬೈಕ್ ಉರುಳಿ ಬಿದ್ದ ಪರಿಣಾಮ ಆತನಿಗೆ ಗಂಭೀರ ಪೆಟ್ಟಾಗಿದೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ರುದ್ರೇಶ್ ಮೃತಪಟ್ಟಿದ್ದಾನೆ.
ಬೈಕ್ ಡಿಕ್ಕಿಯಿಂದ ಮಹಿಳೆ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇನ್ನಿಬ್ಬರು ಪುರುಷರು ಸಣ್ಣಪುಟ್ಟ ಗಾಯಗೊಂಡು ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದಾರೆ.
ಚಿಕ್ಕಜಾಲ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
