Wednesday, July 16, 2025
Homeರಾಜ್ಯರಾಜ್ಯ ಪೊಲೀಸರ ಟೋಪಿ ಮಾದರಿ ಬದಲಾವಣೆ

ರಾಜ್ಯ ಪೊಲೀಸರ ಟೋಪಿ ಮಾದರಿ ಬದಲಾವಣೆ

State Police Cap Pattern Change

ಬೆಂಗಳೂರು,ಜೂ.27- ರಾಜ್ಯ ಪೊಲೀಸರ ಟೋಪಿಗಳ ಮಾದರಿ ಬದಲಾವಣೆಯ ಪ್ರಸ್ತಾವನೆ ಮತ್ತೊಮೆ ಚರ್ಚೆಗೆ ಬಂದಿದೆ.ಪ್ರಸ್ತುತ ಪೊಲೀಸ್‌‍ ಕಾನ್‌ಸ್ಟೇಬಲ್‌ ಹಾಗೂ ಹೆಡ್‌ ಕಾನ್‌ಸ್ಟೇಬಲ್‌ಗಳು ಧರಿಸುತ್ತಿರುವ ಖಾಕಿ ಬಣ್ಣದ ಸ್ಲೌಚ್‌ ಕ್ಯಾಪ್‌ಗಳ ಬದಲಾಗಿ ಕಡುನೀಲಿ ಬಣ್ಣದ ಬೆರೆಟ್‌ ಕ್ಯಾಪ್‌ಗಳಿಗೆ ಧರಿಸಲು ಪ್ರಸ್ತಾವನೆ ಸಲ್ಲಿಸಿದ್ದು, ಗೃಹಸಚಿವ ಡಾ.ಜಿ.ಪರಮೇಶ್ವರ್‌ ವಿವಿಧ ರಾಜ್ಯಗಳ ಪೊಲೀಸ್‌‍ ಕ್ಯಾಪ್‌ಗಳನ್ನು ಪರಿಶೀಲನೆ ನಡೆಸಿದ್ದಾರೆ.

ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ರಾಜ್ಯಗಳಲ್ಲಿ ಪೊಲೀಸ್‌‍ ಕಾನ್‌ಸ್ಟೇಬಲ್‌ ಮತ್ತು ಹೆಡ್‌ ಕಾನ್‌ಸ್ಟೇಬಲ್‌ಗಳು ಖಾಕಿ ಕಡುನೀಲಿ ಬಣ್ಣದ ಇನ್‌ಸ್ಪೆಕ್ಟರ್‌ ಮಾದರಿಯ ಪೀಕ್‌ ಕ್ಯಾಪ್‌ಗಳನ್ನು ಬಳಸುತ್ತಿದ್ದಾರೆ. ಗೋವಾ, ದೆಹಲಿಯಲ್ಲಿ ಕಡುನೀಲಿ ಬಣ್ಣದ ಬೆರೆಟ್‌ ಕ್ಯಾಪ್‌ಗಳು ಬಳಕೆಯಾಗುತ್ತಿವೆ.

ಕರ್ನಾಟಕದಲ್ಲಿ ಎಎಸ್‌‍ಐಗಳಿಂದ ಮೇಲ್ಪಟ್ಟು ಡಿವೈಎಸ್ಪಿಗಳವರೆಗೂ ಅಧಿಕಾರಿಗಳು ಕಡುನೀಲಿ ಬಣ್ಣದ ಮುಂಛಾವಣಿ ಇರುವ ಖಾಕಿ ಬಣ್ಣದ ಪೀಕ್‌ ಇನ್‌ಸ್ಪೆಕ್ಟರ್‌ ಕ್ಯಾಪ್‌, ಕಡುನೀಲಿ ಬಣ್ಣದ ಬೆರೆಟ್‌ ಕ್ಯಾಪ್‌ಗಳನ್ನು ಬಳಕೆ ಮಾಡುತ್ತಿದ್ದಾರೆ. ಅವರಿಗೆ ಖಾಕಿ ಬಣ್ಣದ ಬೆರೆಟ್‌ ಕ್ಯಾಪ್‌ಗಳನ್ನು ಧರಿಸಲು ಅವಕಾಶ ನೀಡುವ ಬಗ್ಗೆ ಚರ್ಚೆಗಳಾಗಿವೆ.

ಕಾನ್‌ಸ್ಟೇಬಲ್‌ ಹಾಗೂ ಹೆಡ್‌ಕಾನ್‌ಸ್ಟೇಬಲ್‌ಗಳಿಗೆ ದಟ್ಟಹಸಿರು ಬಣ್ಣದ ಬೆರೆಟ್‌ ಕ್ಯಾಪ್‌ಗಳನ್ನು ಧರಿಸಲು ಅವಕಾಶ ನೀಡುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಮೊದಲು ವಿಧಾನಪರಿಷತ್‌ನಲ್ಲಿ ಸದಸ್ಯ ಸಿ.ಎನ್‌.ಮಂಜೇಗೌಡ ಅವರು ಪೊಲೀಸ್‌‍ ಕಾನ್‌ಸ್ಟೇಬಲ್‌ಗಳ ಟೋಪಿ ಮಾದರಿಯ ಬದಲಾವಣೆ ಬಗ್ಗೆ ಪ್ರಸ್ತಾಪಿಸಿದರು.

ಗೃಹಸಚಿವ ಡಾ.ಜಿ.ಪರಮೇಶ್ವರ್‌ ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಪೊಲೀಸ್‌‍ ಮಹಾ ನಿರ್ದೇಶಕರಿಗೆ ಸೂಚಿಸಿದರು. ಅದರಂತೆ ಕೆಎಸ್‌‍ಆರ್‌ಪಿಯ ಎಡಿಜಿಪಿ ಉಮೇಶ್‌ಕುಮಾರ್‌ ನೇತೃತ್ವದ ಸಮಿತಿ ರಚನೆಯಾಗಿತ್ತು.

ಜನದಟ್ಟಣೆ ಹಾಗೂ ಜನದಟ್ಟಣೆ ಪ್ರತಿಭಟನೆ, ಬೃಹತ್‌ ಕಾರ್ಯಕ್ರಮಗಳಂತಹ ಸ್ಥಳಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪಾಲನೆಗೆ ಪೊಲೀಸರ ನಿರ್ದಿಷ್ಟ ಗುರುತಿಸುವಿಕೆ ಅಗತ್ಯವಿದೆ. ಹೀಗಾಗಿ ಪ್ರಸ್ತುತ ಚಾಲ್ತಿಯಲ್ಲಿರುವ ಖಾಕಿ ಬಣ್ಣದ ಸ್ಲೌಚ್‌ ಮಾದರಿಯ ಟೋಪಿಯೇ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು, ಟೋಪಿಗಳ ಮಾದರಿ ಬದಲಾವಣೆಯನ್ನು ಕಳೆದ ಜುಲೈನಲ್ಲಿಯೇ ತಿರಸ್ಕರಸಿತ್ತು.

ಆದರೆ ಪ್ರಸ್ತುತ ಬಳಕೆಯಲ್ಲಿರುವ ಟೋಪಿಗಳು ಲಗೇಜ್‌ ಮಾದರಿಯಲ್ಲಿ ಹೊರೆಯಾಗುತ್ತಿದ್ದು, ದೂರದ ಪ್ರಯಾಣಕ್ಕೆ ಅನಾನುಕೂಲವಾಗಿದೆ. ಹೀಗಾಗಿ ನೂತನ ಪ್ರಸ್ತಾವಿತ ಮಾದರಿ ಅಳವಡಿಕೆ ಸೂಕ್ತ ಎಂಬ ಚರ್ಚೆಗಳು ನಡೆದಿವೆ.

ಈ ಹಿನ್ನೆಲೆಯಲ್ಲಿ ಗೃಹಸಚಿವ ಡಾ.ಜಿ.ಪರಮೇಶ್ವರ್‌ ಇಂದು ಹಿರಿಯ ಪೊಲೀಸ್‌‍ ಅಧಿಕಾರಿಗಳ ಸಮಾವೇಶದಲ್ಲಿ ಟೋಪಿಗಳ ಬದಲಾವಣೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ವಿವಿಧ ರಾಜ್ಯಗಳ ಟೋಪಿಗಳನ್ನು ವೀಕ್ಷಿಸಿದ ಗೃಹಸಚಿವರಿಗೆ ಎಡಿಜಿಪಿ ಉಮೇಶ್‌ಕುಮಾರ್‌ ನೂತನ ಪ್ರಸ್ತಾವಿತ ಟೋಪಿಗಳ ಅನುಕೂಲತೆ ಹಾಗೂ ಪ್ರಸ್ತುತ ಬಳಕೆಯಲ್ಲಿರುವ ಟೋಪಿಗಳ ಅನಾನುಕೂಲತೆ ಬಗ್ಗೆ ವಿವರಿಸಿದ್ದಾರೆ.

ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ರಾಜ್ಯಗಳಲ್ಲಿನ ಕಾನ್‌ಸ್ಟೇಬಲ್‌ಗಳು ಹಾಗೂ ಹೆಡ್‌ ಕಾನ್‌ಸ್ಟೇಬಲ್‌ಗಳು ಕಡುನೀಲಿ ಬಣ್ಣದ ಇನ್‌ಸ್ಪೆಕ್ಟರ್‌ ಪೀಕ್‌ ಕ್ಯಾಪ್‌ಗಳನ್ನು ಬಳಸುತ್ತಿದ್ದಾರೆ ಎಂದು ಉಮೇಶ್‌ಕುಮಾರ್‌ ವಿವರಿಸಿದರು.

ಅಲ್ಲಿ ಅನಾನುಕೂಲತೆಗಳಿದ್ದರೆ ಇಷ್ಟು ದಿನ ಅದನ್ನು ಏಕೆ ಮುಂದುವರೆಸುತ್ತಿದ್ದರು? ಎಂದು ಪರಮೇಶ್ವರ್‌ ಪ್ರಶ್ನಿಸಿದ್ದಾರೆ.ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್‌‍ ಅಧಿಕಾರಿಗಳ ಸಮಾವೇಶದಲ್ಲಿ ಭಾಗವಹಿಸುತ್ತಿದ್ದು, ಟೋಪಿ ಬದಲಾವಣೆ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ನಡೆಯುವ ಸಾಧ್ಯತೆ ಇದೆ.

RELATED ARTICLES

Latest News