ಬೆಂಗಳೂರು, ಮಾ.21- ಕೇಂದ್ರದಲ್ಲಿ ನರೇಂದ್ರಮೋದಿಯವರ ಆಡಳಿತ ಜಾರಿಗೆ ಬಂದ ಬಳಿಕ ರಾಜ್ಯಗಳ ಆರ್ಥಿಕ ಸ್ಥಿತಿ ಸಂಕಷ್ಟಕ್ಕೆ ಸಿಲುಕೊಂಡಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. 2013ರಿಂದ 2017ರವರೆಗೆ ನಾಲ್ಕು ರಾಜ್ಯಗಳ ವಿತ್ತೀಯ ಕೊರತೆ ಶೇ.3ಕ್ಕಿಂತ ಹೆಚ್ಚಿದ್ದು, ಐದು ರಾಜ್ಯಗಳು ಜಿ ಎಸ್ ಡಿ ಪಿಯ ಮಿತಿಗಾಗಿ ಶೇ.25ಕ್ಕಿಂತಲೂ ಹೆಚ್ಚಿನ ಸಾಲ ಹೊಂದಿದ್ದವು. ಆದರೆ ವಿತ್ತೀಯ ಕೊರತೆ ಆರಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಬಾಧಿಸುತ್ತಿದೆ. 14 ಪ್ರಮುಖ ರಾಜ್ಯಗಳ ಪೈಕಿ 10 ರಾಜ್ಯಗಳು ಮಿತಿ ಮೀರಿದ ಸಾಲಕ್ಕೆ ಸಿಲುಕಿವೆ.
ಮನಮೋಹನ್ ಸಿಂಗ್ ಸರ್ಕಾರ ನಿರ್ಗಮಿಸುವ ವೇಳೆಗೆ ಎಲ್ಲಾ ರಾಜ್ಯಗಳ ಒಟ್ಟು ಸಾಲ 25.1 ಲಕ್ಷ ಕೋಟಿಯಷ್ಟಿತ್ತು. 2024ರ ಮಾರ್ಚ್ ಅಂತ್ಯಕ್ಕೆ 83.32 ಕೋಟಿಯಷ್ಟಾಗಲಿದೆ. ಈ ವರ್ಷದ ಕೊನೆಗೆ 100 ಲಕ್ಷ ಕೋಟಿ ದಾಟುವ ಅಂದಾಜಿದೆ. ಕೇಂದ್ರ ಸರ್ಕಾರದ ಬಜೆಟ್ 53.11 ಲಕ್ಷ ಕೋಟಿಗಳಿಂದ 216 ಲಕ್ಷ ಕೋಟಿಗೆ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ನಾನು 16 ಬಜೆಟ್‌ಗಳನ್ನು ಮಂಡಿಸಿದ್ದು, ದಾಖಲೆ ಮಾಡುವ ಕಾರಣಕ್ಕಾಗಿ ಅಲ್ಲ. ಮಹಿಳೆಯರು, ಮಕ್ಕಳು, ಬಡವರು, ಶೋಷಿತರು, ದುರ್ಬಲ ವರ್ಗದವರು, ಯುವಜನರು, ಕಾರ್ಮಿಕರು, ರೈತರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಏಳ್ಳೆಯ ಜೊತೆಗೆ ಸಂಪತ್ತು ಉತ್ಪಾದನೆ ಮಾಡುವತ್ತ ಗಮನಹರಿಸಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ. ರಾಜ್ಯ ಮತ್ತು ಕೇಂದ್ರದ ಸಾಲವೂ ಹೆಚ್ಚಾಗುತ್ತಿದೆ.
ಒಟ್ಟು ವೆಚ್ಚಗಳಲ್ಲಿ ರಾಜ್ಯಗಳ ಪಾಲು ಶೇ.65ರಷ್ಟಿರಬೇಕು ಎಂಬುದು ನಿಯಮ. ಈಗ ಅದು ವ್ಯತ್ಯಾಸವಾಗುತ್ತಿದೆ. ಕೇಂದ್ರ ಸರ್ಕಾರ ಸೆಸ್ ರೂಪದಲ್ಲಿ ವಸೂಲಿ ಮಾಡುತ್ತಿದೆ. ಸೆಸ್‌ಗಳನ್ನು ತೆರಿಗೆ ವ್ಯಾಪ್ತಿಗೆ ಸೇರಿಸಬೇಕೆಂಬುದು ನಮ್ಮ ವಾದ ಎಂದಿದ್ದಾರೆ. ನಮ್ಮ ಸರ್ಕಾರದಲ್ಲಿ ಸಾಲದ ಪ್ರಮಾಣ ಹೆಚ್ಚಾಗಿದೆ ಎಂದು ಆರೋಪಿಸಲಾಗಿದೆ. ಹಿಂದಿನ ಸರ್ಕಾರಗಳು ಮಾಡಿದ 75,856 ಕೋಟಿ ರೂ.ಗಳ ಸಾಲವನ್ನು ತಾವು ತೀರಿಸಿದ್ದು, 2,37,524 ಕೋಟಿ ರೂ.ಗಳನ್ನು ಬಂಡವಾಳ ಕಾಮಗಾರಿಗಳಿಗೆ ಖರ್ಚು ಮಾಡಿದ್ದೇನೆ.
2013ರಿಂದ 2018 ಹಾಗೂ 2023ರಿಂದ ಈವರೆಗೂ ತಾವು ಮಾಡಿರುವ ಸಾಲ 3,21,037 ಕೋಟಿ ರೂ.ಗಳು. ರಾಜ್ಯದಲ್ಲಿ ಜಿಎಸ್‌ಡಿಪಿ ಪ್ರಮಾಣ 6.95 ಲಕ್ಷ ಕೋಟಿಯಿಂದ 30.70 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಾಗಿದೆ ಎಂದು ತಿಳಿಸಿದರು. ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ವಿದ್ಯುತ್ ಸುಧಾರಣೆ ಹಾಗೂ ತೆರಿಗೆ ಸಂಗ್ರಹಗಳನ್ನು ಮಿತಿಗೊಳಿಸಬೇಕೆಂದು ಸೂಚನೆ ನೀಡಿತ್ತು.
ಈ ಬಾಬ್ದುಗಳನ್ನು ಸಾಲದ ವ್ಯಾಪ್ತಿಯಿಂದ ಹೊರಗಿಡಲಾಯಿತು. ಹೀಗಾಗಿ 2020ರಿಂದ ಸಾಲದ ಪ್ರಮಾಣ ಕಡಿಮೆ ತೋರಿಸಲಾಗುತ್ತಿದೆ ಎಂದು ಆರೋಪಿಸಿದರು. ವಿತ್ತೀಯ ಕೊರತೆಗಳಿಗೆ ಕೇಂದ್ರ ಸರ್ಕಾರದ ನೀತಿಗಳೇ ಕಾರಣ. ಅದನ್ನು ಮರೆಮಾಚಿ ಗ್ಯಾರಂಟ್ ಯೋಜನೆಗಳಿಂದ ಕೊರತೆಯಾಗುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ ಎಂದು ದೂರಿದರು. ತಮ್ಮ ಭಾಷಣದುದ್ದಕ್ಕೂ ಕೇಂದ್ರದಿಂದ ತೆರಿಗೆ ಹಂಚಿಕೆಯಾಗಲಿರುವ ವಂಚನೆಯನ್ನು ಸಿದ್ದರಾಮಯ್ಯ ಎಳೆ ಎಳೆಯಾಗಿ ಬಿಡಿಸಿಟ್ಟರು. ಕರ್ನಾಟಕಕ್ಕಿಂತಲೂ ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಉತ್ತರಪ್ರದೇಶದಂತಹ ರಾಜ್ಯಗಳಿಗೆ ಕೇಂದ್ರ ಹೆಚ್ಚಿನ ಆದ್ಯತೆ ನೀಡುತ್ತಿದೆ. ರಸ್ತೆ ನಿರ್ಮಾಣ, ಹಣಕಾಸು ಹಂಚಿಕೆ ಮತ್ತಿತರ ವಿಚಾರಗಳಲ್ಲಿ ಈ ರಾಜ್ಯಗಳು ಹೆಚ್ಚಿನ ಪಾಲು ಪಡೆಯುತ್ತಿವೆ ಎಂದು ಆಕ್ಷೇಪಿಸಿದ್ದಾರೆ.