ಬೆಂಗಳೂರು,ಜೂ.29– ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಿ ಎಂದು ನೀಡಿರುವ ಹೇಳಿಕೆ ಹಿಂದೆ ಯಾರ ಒತ್ತಡವೂ ಇರಲಿಲ್ಲ. ಮನಸ್ಸಿನಲ್ಲಿ ಇದ್ದದ್ದನ್ನು ನೇರವಾಗಿ ಹೇಳಿರುವುದಾಗಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದ್ದಾರೆ.
ಖಾಸಗಿ ವಾಹಿನಿಯೊಂದಿಗೆ ಮಾತನಾಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪರಿಶ್ರಮ ಅರಿತು ಪ್ರೀತಿಯಿಂದ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟರೆ ಒಳ್ಳೆಯದು ಎಂದರು.
ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಿ ಎಂದು ನಿಗದಿಪಡಿಸಲು ನಾವು ಯಾರು ಎಂದ ಅವರು, ಸಿದ್ಧರಾಮಯ್ಯನವರ ನಂತರ ಮುಖ್ಯಮಂತ್ರಿಯಾಗುವುದು ಡಿ.ಕೆ.ಶಿವಕುಮಾರ್ ಸರದಿಯೇ ಹೊರತು ಬೇರೆಯವರಲ್ಲ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ 6 ತಿಂಗಳೋ, ವರ್ಷವೋ ಕಳೆದ ನಂತರ ಯಾರೂ ಬೇಕಾದರೂ ಮುಖ್ಯಮಂತ್ರಿಯಾಗಲಿ ಎಂದು ಅವರು ಹೇಳಿದರು.
ನಾನು ಸಮುದಾಯವನ್ನು ಇಟ್ಟುಕೊಂಡು ಡಿ.ಕೆ.ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ಕೇಳಿಲ್ಲ. ಮುಂದಿನ ಸರದಿ ಇರುವುದು ಡಿ.ಕೆ.ಶಿವಕುಮಾರ್‌ರದೇ ಹೊರತು ಬೇರೆ ಸಮುದಾಯದವರಲ್ಲ. ಜಾತಿ, ಜನಾಂಗ, ಸಮುದಾಯದ ಬಗ್ಗೆ ಮಾತನಾಡುವುದಿಲ್ಲ. ನಮ ವೈಯಕ್ತಿಕ ಅಭಿಪ್ರಾಯವನ್ನು ಅಂದು ಹೇಳಿದ್ದೇವೆ. ಮನಸ್ಸಿನಲ್ಲಿತ್ತು. ಅದನ್ನು ಹೇಳಿದ್ದೇವೆ. ದೇವರ ದಯೆಯಿಂದ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದರೆ ಒಳ್ಳೆಯದು.
ಈಗಾಗಲೇ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾರೆ. ಈ ಸಮಯ ಬಿಟ್ಟರೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗಲು ಬೇರೆ ಸಮಯ ಬರುವುದಿಲ್ಲ. ಸಿದ್ದರಾಮಯ್ಯನವರು ಮನಸ್ಸು ಮಾಡಿದರೆ ಇದು ಕಾರ್ಯ ಸಾಧ್ಯವಾಗುತ್ತದೆ. ಹಾಗಾಗಿ ಈ ವಿಚಾರವನ್ನು ಪ್ರಸ್ತಾಪಿಸಿರುವುದಾಗಿ ಸ್ವಾಮೀಜಿ ತಿಳಿಸಿದರು.