ಮೈಸೂರು, ಫೆ.13- ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಮೌಲ್ವಿಯೊಬ್ಬರ ಪ್ರಚೋದನಕಾರಿ ಭಾಷಣ ಕಾರಣ ಎಂದು ಹೇಳಲಾಗುತ್ತಿದ್ದು, ತಲೆಮರೆಸಿಕೊಂಡಿರುವ ಮೌಲ್ವಿಯ ಬಂಧನಕ್ಕೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಪ್ರಚೋದನಕಾರಿ ಭಾಷಣ ಮಾಡಿರುವ ಮೌಲ್ವಿ ಕೇರಳ ಅಥವಾ ರಾಮನಗರ ಕಡೆ ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ಅವರ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ. ಅವಹೇಳನಕಾರಿ ಪೋಸ್ಟರ್ ವೈರಲ್ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲುತೂರಾಟ ನಡೆಸಿ ದಾಂಧಲೆ ನಡೆಸಿದ ಪ್ರಕರಣ ಸಂಬಂಧ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ.
ಮೈಸೂರಿನ ಶಾಂತಿನಗರದ ಸುಹೇಲ್, ರೆಹಲ್ ಪಾಷ, ಅಯಾನ್, ಗೌಸಿಯಾ ನಗರದ ಸೈಯದ್ ಸಾಧಿಕ್, ಸತ್ಯಾನಗರದ ಏಜಾಜ್, ರಾಜೀವ್ ನಗರದ ಸಾಧಿಕ್ ಪಾಷ, ಅರ್ಬಾನ್ ಷರೀಫ್ ಹಾಗೂ ಸೋಹೆಬ್ ಪಾಷ ಬಂಧಿತರು.
ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣದಲ್ಲಿ ಪೊಲೀಸರು 50ಕ್ಕೂ ಹೆಚ್ಚು ಮಂದಿ ಆರೋಪಿಗಳನ್ನು ಗುರುತಿಸಿದ್ದು ಈವರೆಗೆ 8 ಮಂದಿಯನ್ನು ಬಂಧಿಸಿದ್ದಾರೆ. ಉಳಿದವರು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಠಾಣೆ ಬಳಿ ಹೈಡ್ರಾಮ :
ತಡರಾತ್ರಿ ಉದಯಗಿರಿ ಠಾಣೆ ಬಳಿ ಅನ್ಯಕೋಮಿನ ಮಹಿಳೆಯರು ಜಮಾಯಿಸಿ ಬಂಧಿಸಿರುವ ತಮ್ಮ ಮಕ್ಕಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ತಮ್ಮ ಮಕ್ಕಳು ತಪ್ಪು ಮಾಡಿಲ್ಲ. ಅವರಿನ್ನೂ ಚಿಕ್ಕವರು ಎಂದು ಠಾಣೆ ಬಳಿ ಮಹಿಳೆಯರು ಅಳಲು ತೋಡಿಕೊಳ್ಳುತ್ತಿದ್ದರು. ಪೊಲೀಸರು ಮನವೊಲಿಸಲು ಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಆ ವೇಳೆ ಸ್ಥಳೀಯ ವಕೀಲರಾದ ಶರೀಫ್ ಎಂಬುವರು ಈ ಮಹಿಳೆಯರಿಗೆ ಬುದ್ದಿವಾದ ಹೇಳಿ ಕಳುಹಿಸಿದ್ದಾರೆ.