ಬೆಂಗಳೂರು, ಸೆ.8- ಮದ್ದೂರಿನಲ್ಲಿ ಗಣೇಶೋತ್ಸವದ ಮೇಲೆ ಕಲ್ಲು ತೂರಾಟ ನಡೆಸಿದವರನ್ನು ಈಗಾಗಲೇ ಬಂಧಿಸಲಾಗಿದ್ದು, ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಲಕ್ಷಾಂತರ ಗಣೇಶನ ವಿಸರ್ಜನೆಗಳಾಗಿವೆ. ಈ ಬಾರಿ ಎಲ್ಲಿಯೂ ಗಲಾಟೆಗಳಾಗಿಲ್ಲ, ಗಣೇಶೋತ್ಸವ ಶಾಂತಿಯುತವಾಗಿ ನಡೆದಿದೆ ಎನ್ನುವ ಹಂತದಲ್ಲೇ ಮದ್ದೂರಿನಲ್ಲಿ ಕಲ್ಲು ತೂರಾಟವಾಗಿದೆ. ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ನಂತರ ಗಣೇಶನ ವಿಸರ್ಜನೆಯಾಗಿದೆ ಎಂದರು.
ಮದ್ದೂರು ಹೊರತು ಪಡಿಸಿ ಕೆಲವು ಕಡೆ ಸಣ್ಣಪುಟ್ಟ ಘಟನೆಗಳಾಗಿವೆ. ಒಂದು ಕಡೆ ಧ್ವಜ ತಂದಿದ್ದಾರೆ ಎಂಬ ಕಾರಣಕ್ಕೆ ಚೂರಿ ಇರಿತಕ್ಕೆ ಪ್ರಯತ್ನಿಸಲಾಗಿದೆ. ಮತ್ತೊಂದು ಕಡೆ ಮೂರು ನಾಲ್ಕು ವರ್ಷದ ಚಿಕ್ಕಮಕ್ಕಳು ಮನೆ ಮೇಲೆ ನಿಂತು ಗಣೇಶನ ಮೆರವಣಿಗೆ ಹೋಗುವಾಗ ಉಗಿದಿದ್ದಾರೆ. ಈ ರೀತಿಯ ಘಟನೆಗಳಾಗಿವೆ ಎಲ್ಲಾ ಕಡೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಣ್ಣಪುಟ್ಟ ಗಲಾಟೆಗಳ ನಡುವೆಯೂ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಎಲ್ಲಿಯೂ ದೊಡ್ಡ ಪ್ರಮಾಣದ ದುರ್ಘಟನೆಗಳಾಗಿಲ್ಲ. ರಾಜ್ಯ ಸರ್ಕಾರ ಕಾಲ ಕಾಲಕ್ಕೆ ಸಭೆಗಳನ್ನು ನಡೆಸಿ ಪೊಲೀಸರಿಗೆ ಮುನ್ಸೂಚನೆಗಳನ್ನು ನೀಡಿತ್ತು. ಶಾಂತಿ ಪಾಲನೆ ಮಾಡುವಂತೆ ಮನವಿ ಮಾಡಿದ್ದೇವೆ. ಅಗತ್ಯದಷ್ಟು ಭದ್ರತಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿತ್ತು. ಜನ ಕೂಡ ಸಹಕರಿಸಬೇಕು, ಎರಡು ಸಮುದಾಯವರು ಸಹನೆಯಿಂದ ವರ್ತಿಸಬೇಕು ಎಂದು ಹೇಳಿದರು.
ಈ ಬಾರಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ಕೆಎಸ್ ಆರ್ ಪಿ ಸೇರಿದಂತೆ ಭದ್ರತಾ ಸಿಬ್ಬಂದಿಗಳನ್ನು ಬೇರೆ ಜಿಲ್ಲೆಗೆ ನಿಯೋಜಿಸದೆ, ಈ ವರ್ಷ ವಿಶೇಷವಾಗಿ ಆಯಾ ಜಿಲ್ಲೆಗಳಲ್ಲೇ ಉಳಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಿಗೆ ಎಡಿಜಿಪಿ, ಡಿಐಜಿ ಹಂತದ ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿತ್ತು ಎಂದು ವಿವರಿಸಿದರು.
ಒಂದೂ ಗಲಭೆಯಾಗಬಾರದು ಎಂದು ಬಹಳ ಎಚ್ಚರಿಕೆಯಿಂದ ಕ್ರಮ ಕೈಗೊಳ್ಳಲಾಗಿತ್ತು. ಅದೇ ರೀತಿ ನಡೆದಿದೆ. ಎರಡು ಮೂರು ಸಣ್ಣ ಪ್ರಮಾಣದ ಗಲಾಟೆಗಳಾಗಿವೆ. ಗಲಭೆಗಳಾಗಿರುವ ಕಡೆಗಳಲ್ಲಿ ನಿಷೇಧಾಜ್ಞೆ ಸೇರಿದಂತೆ ಪೊಲೀಸರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಪರಿಸ್ಥಿತಿಯನ್ನು ನಿಯಂತ್ರಿಸುತ್ತಾರೆ. ಬಿಜೆಪಿಯವರು ರಾಜಕೀಯ ಕಾರಣಕ್ಕಾಗಿ ಪ್ರತಿಭಟನೆ ಮಾಡುತ್ತಾರೆ. ಅದಕ್ಕೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ ಎಂದರು.
ಧರ್ಮಸ್ಥಳದ ತನಿಖೆ ಸೌಜನ್ಯ ಕುಟುಂಬಕ್ಕೆ ಸುತ್ತಿಕೊಳ್ಳುತ್ತಿದೆ ಎಂದು ಭಾವಿಸುವುದು ಬೇಡ. ಎಸ್ ಐ ಟಿ ಅಧಿಕಾರಿಗಳು ಪ್ರಕರಣವನ್ನು ನೋಡುವ ದೃಷ್ಟಿಕೋನವೇ ಬೇರೆಯಾಗಿರುತ್ತದೆ. ಯೂಟ್ಯೂಬರ್ ಗಳು, ಮಾಧ್ಯಮದವರು ಸೇರಿದಂತೆ ಎಲ್ಲರನ್ನು ಅಧಿಕಾರಿಗಳು ಪರಿಶೀಲಿಸುತ್ತಾರೆ. ತನಿಖೆ ಮುಗಿದು ವರದಿ ಸಲ್ಲಿಸುವವರೆಗೂ ನಾವು ಹೆಚ್ಚಿನ ಮಾಹಿತಿ ನೀಡುವುದಿಲ್ಲ ಎಂದರು.
ಧರ್ಮಸ್ಥಳದ ವಿಷಯದಲ್ಲಿ ಷಡ್ಯಂತ್ರವಾಗಿದೆ ಎಂದು ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗಳಿಗೆ ಕಡಿವಾಣ ಹಾಕುವಂತೆ ಕಾಂಗ್ರೆಸ್ ಪಕ್ಷದ ಮಹಿಳಾ ಮುಖಂಡರು ಪಕ್ಷದ ವರಿಷ್ಠ ನಾಯಕಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಆ ಪತ್ರ ನೋಡಿಲ್ಲ. ಆದರೆ ಎಸ್ ಐ ಟಿ ತನಿಖೆಯಲ್ಲಿ ತಾವಾಗಲಿ, ಮುಖ್ಯಮಂತ್ರಿಯಾಗಲಿ ಅಥವಾ ಬೇರೆ ಇನ್ಯಾರು ಹಸ್ತಕ್ಷೇಪ ಮಾಡುತ್ತಿಲ್ಲ. ಯಾವ ದಿಕ್ಕಿನಲ್ಲಿ ತನಿಖೆ ಮಾಡಬೇಕು ಎಂದು ಅಧಿಕಾರಿಗಳೇ ನಿರ್ಧರಿಸುತ್ತಾರೆ. ವಿಚಾರಣೆ ಪೂರ್ಣಗೊಂಡ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ ಎಂದು ಹೇಳಿದರು.