ಮಂಡ್ಯ,ಸೆ.8- ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದ ಮದ್ದೂರು ಉದ್ವಿಗ್ನಗೊಂಡಿದೆ. ಘಟನೆ ಖಂಡಿಸಿ ಸಾಗರೋಪಾದಿಯಲ್ಲಿ ಸೇರಿದ್ದ ಜನ ಕೋಮು ಗಲಭೆಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಆದರೂ ಸ್ಥಳದಲ್ಲಿ ಬೂದಿ ಮುಚ್ಚಿದ ಕೆಂಡದಂತ ವಾತಾವರಣವಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಂತರವೇ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಿದ್ದರೂ ಪೊಲೀಸರ ಭಯವಿಲ್ಲದೆ ಏಕಾಏಕಿ ನೂರಾರು ಸಂಖ್ಯೆಯಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಜಮಾಯಿಸಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು.
ಹೀಗಾಗಿ ಸ್ಥಳದಲ್ಲಿ ನಿಷೇದಾಜ್ಞೆ ಜಾರಿಗೆ ತರಲಾಗಿತ್ತು. ಆದರೂ ಇಂದು ಬೆಳಗ್ಗೆ 10 ಗಂಟೆ ಸುಮಾರಿನಲ್ಲಿ ಘಟನೆ ನಡೆದ ಸ್ಥಳದಲ್ಲಿ ಜಮಾಯಿಸಿದ ಜನರ ಗುಂಪು ಕೆಲ ರಸ್ತೆಗಳಲ್ಲಿ ಅಳವಡಿಸಲಾಗಿದ್ದ ಅನ್ಯ ಕೋಮಿನ ಬಾವುಟಗಳನ್ನು ತೆರವುಗೊಳಿಸಿ ತಮ ಆಕ್ರೋಶ ಹೊರಹಾಕಿದರು.
ಇದ್ದಕ್ಕಿದ್ದಂತೆ ನಾಲ್ಕು ದಿಕ್ಕಿನಿಂದಲೂ ಜನ ಸಾಗರ ಹರಿದು ಬರುತ್ತಿರುವುದನ್ನು ಮನಗಂಡ ಪೊಲೀಸರು ಸ್ಥಳೀಯ ಅಂಗಡಿಗಳನ್ನು ಮುಚ್ಚಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಪೊಲೀಸರು ಗುಂಪನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರೂ ಜನ ಕ್ಯಾರೆ ಎನ್ನಲಿಲ್ಲ. ಸುದ್ದಿ ತಿಳಿಯುತ್ತಿದ್ದಂತೆ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿಯವರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದ್ದು, ನಾಳೆ ಬೆಳಗ್ಗೆವರೆಗೂ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಎಸ್‌ಪಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮಹಿಳೆಯ ಆಕ್ರೋಶ: ಗಣೇಶಮೂರ್ತಿ ವಿಸರ್ಜನಾ ವೇಳೆ ಅನ್ಯ ಕೋಮಿನ ಯುವಕರು ಕಲ್ಲು ತೂರಾಟ ನಡೆಸಿರುವ ಬಗ್ಗೆ ಸ್ಥಳೀಯ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಪ್ರದೇಶವನ್ನು ಮಿನಿ ಪಾಕಿಸ್ತಾನವನ್ನಾಗಿ ಮಾಡಿಕೊಳ್ಳಲು ನಾವು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂಗಳು ಒಗ್ಗಾಟ್ಟಾಗಿ ಇದ್ದಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಒಂದು ರೀತಿ ಭಯದ ವಾತಾವರಣ ಸೃಷ್ಟಿಸಿದ್ದಾರೆ. ರಾತ್ರಿಯಾಯಿತೆಂದರೆ ಮಾರಕಾಸ್ತ್ರ ಹಿಡಿದುಕೊಂಡು ರಸ್ತೆಯಲ್ಲಿ ಅನ್ಯ ಕೋಮಿನವರು ಓಡಾಡುತ್ತಾರೆ. ಪೊಲೀಸರ ಭಯವೇ ಅವರಿಗಿಲ್ಲ. ಇನ್ನು ನಮನ್ನು ಬಿಡುತ್ತಾರಾ ಎಂದು ಆ ಮಹಿಳೆಯರು ಪ್ರಶ್ನಿಸಿದ್ದಾರೆ.
ಏನದು ಘಟನೆ; ಮದ್ದೂರು ಪಟ್ಟಣದ ಸಿದ್ದಾರ್ಥನಗರದ 5ನೇ ಕ್ರಾಸ್‌ನಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ನಿನ್ನೆ ಸಂಜೆ 7.30 ರ ಸುಮಾರಿನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಸಾಗುತ್ತಿದ್ದಾಗ ರಾಮ್ ರಹೀಂ ನಗರದ ಬಳಿ ಕೆಲ ಕಿಡಿಗೇಡಿಗಳು ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದರು.
ಆ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿದ್ದರಿಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದರು. ಗುಂಪನ್ನು ಚದುರಿಸುತ್ತಿದ್ದಾಗ ಕಲ್ಲುಗಳು ತೂರಿ ಬಂದಿದ್ದರಿಂದ ನಾಲ್ವರು ಹೋಂ ಗಾರ್ಡ್‌ಗಳು ಸೇರಿದಂತೆ ಎಂಟು ಮಂದಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಧರಣಿ: ಈ ಘಟನೆಯಿಂದ ಆಕ್ರೋಶಗೊಂಡ ಗಣೇಶಮೂರ್ತಿ ವಿಸರ್ಜನಾ ತಂಡದ ಕೆಲವು ಸದಸ್ಯರು ಪಟ್ಟಣದ ಪೇಟೆ ಬೀದಿಯ ಕೆಮಣ್ಣು ನಾಲಾ ವೃತ್ತದ ಬಳಿ ತೆರಳಿ ಅಲ್ಲಿನ ಮಸೀದಿ ಮುಂಭಾಗ ಧರಣಿ ಕುಳಿತು ನ್ಯಾಯಕ್ಕಾಗಿ ಆಗ್ರಹಿಸಿ ಘೋಷಣೆ ಕೂಗಿದ್ದರು. ಈ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಮುನ್ನೆಚ್ಚರಿಕಾ ಕ್ರಮವಾಗಿ ಪೇಟೆ ಬೀದಿಯ ಎಲ್ಲಾ ಅಂಗಡಿಗಳನ್ನು ಮುಚ್ಚಿಸಿದ್ದಾರೆ.
ಕಳೆದ ವರ್ಷ ನಾಗಮಂಗಲ ಪಟ್ಟಣದಲ್ಲಿ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಮಸೀದಿ ಬಳಿಯೇ ಕಲ್ಲು ತೂರಾಟ ನಡೆಸಿ ಹತ್ತಾರು ಅಂಗಡಿಗಳಿಗೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ದಾಂದಲೆ ನಡೆಸಿದ್ದರು.ಅಂದಿನ ಘಟನೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಮೆರವಣಿಗೆಯಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದರೂ ಸಹ ಮತ್ತೆ ಮದ್ದೂರಿನಲ್ಲಿ ಇಂತಹ ಘಟನೆ ನಡೆದಿರುವುದು ಗಮನಿಸಿದರೇ ಇದು ಪೂರ್ವಯೋಜಿತ ಕೃತ್ಯವಿರಬಹುದೆಂಬ ಶಂಕೆ ವ್ಯಕ್ತವಾಗಿದೆ.