ಬೆಂಗಳೂರು,ಆ.1- ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನೋಟಿಸ್ ನೀಡುತ್ತಿದ್ದಂತೆ ಅಲರ್ಟ್ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಾತ್ಮಕವಾಗಿ ನಾನಾ ರೀತಿಯ ತಂತ್ರಗಾರಿಕೆಗಳನ್ನು ಅನುಸರಿಸಲಾರಂಭಿಸಿದ್ದಾರೆ.
ನಿನ್ನೆ ರಾತ್ರಿ ಆಪ್ತಸಚಿವರ ಜೊತೆ ಕೆ.ಜೆ.ಜಾರ್ಜ್ ಅವರ ಮನೆಯಲ್ಲಿರಹಸ್ಯ ಸಭೆ ನಡೆಸಿ ಚರ್ಚೆ ನಡೆಸಿದ್ದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಇಂದು ಬೆಳಿಗ್ಗೆ ಸಂಪುಟದ ಬಹುತೇಕ ಸಚಿವರೊಂದಿಗೆ ಉಪಾಹಾರ ಕೂಟ ನಡೆಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.ಒಂದು ವೇಳೆ ರಾಜ್ಯಪಾಲರು ಅಭಿ ಯೋಜನೆಗೆ ಅನುಮತಿ ನೀಡಿದರೆ ಅನುಸರಿ ಸಬಹುದಾದ ಕಾನೂನಾತಕ ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿದ್ದರಾಮಯ್ಯನವರು ರಾಜ್ಯಪಾಲರನ್ನು ಭೇಟಿ ಮಾಡಿ ವಿವರಣೆ ನೀಡಿದ್ದು, ದಾಖಲಾತಿಗಳನ್ನು ಕೂಡ ಸಲ್ಲಿಸಿದ್ದಾರೆ. ಅದರ ಹೊರತಾಗಿಯೂ ಖಾಸಗಿ ವ್ಯಕ್ತಿ ಅಬ್ರಹಾಂ ಹಾಗೂ ಬಿಜೆಪಿ ನೀಡಿದ ದೂರು ಆಧರಿಸಿ ರಾಜ್ಯಪಾಲರು ನೋಟಿಸ್ ನೀಡಿರುವುದು ಪರಿಸ್ಥಿತಿಯನ್ನು ಬಿಗಿಗೊಳಿಸಿದೆ. ಮುಖ್ಯಮಂತ್ರಿಯವರು ರಾಜಕೀಯ ಒತ್ತಡಕ್ಕೆ ಸಿಲುಕಿದ್ದಾರೆ.
ರಾಜ್ಯಪಾಲರ ನೋಟಿಸ್ಗೆ ಇಂದು ಉಪಹಾರ ಕೂಟದಲ್ಲಿ ತೀವ್ರ ಆಕ್ರೋಶಗಳು ವ್ಯಕ್ತವಾಗಿವೆ. ಕೇಂದ್ರದ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಹಾಗೂ ಕೆಲವು ರಾಜ್ಯದ ಪ್ರಮುಖ ನಾಯಕರು ಷಡ್ಯಂತ್ರ ನಡೆಸಿ ಸಿದ್ದರಾಮಯ್ಯ ಅವರನ್ನು ಕಾನೂನಿನ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿವೆ. ರಾಷ್ಟ್ರಮಟ್ಟದಲ್ಲೂ ಬಿಜೆಪಿ ಸಂಸತ್ನಲ್ಲಿ ಮುಡಾ ಹಾಗೂ ವಾಲೀಕಿ ಅಭಿವೃದ್ಧಿ ನಿಗಮದ ಪ್ರಕರಣವನ್ನು ಪ್ರಸ್ತಾಪಿಸಿದೆ.
ಈ ಹಿನ್ನೆಲೆಯಲ್ಲಿ ಹೈಕಮಾಂಡ್ ನಾಯಕರ ಕರೆಯ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರವರು ದೆಹಲಿಗೆ ತೆರಳಿ ವಿವರಣೆ ನೀಡಿ ಬಂದಿದ್ದಾರೆ.ಇಂದಿನ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರ ನೋಟಿಸ್ಗೆ ಪ್ರತಿಕ್ರಿಯಿಸುವ ಹಾಗೂ ಅಭಿಯೋಜನೆಗೆ ವಿರೋಧ ವ್ಯಕ್ತಪಡಿಸುವ ನಿರ್ಣಯ ಕೈಗೊಳ್ಳುವಂತೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.
ರಾಜ್ಯಪಾಲರ ನಡವಳಿಕೆ ಸಾಂವಿಧಾನಿಕ ಸಂಘರ್ಷಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಇದೆ. ಈ ಹಿಂದೆ ಯಡಿಯೂರಪ್ಪ ಅವರ ಪ್ರಕರಣದಲ್ಲಿ ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ನೀಡಿದ್ದರಿಂದಾಗಿಯೇ ಸಾಕಷ್ಟು ಕಾನೂನಾತಕ ಸಮಸ್ಯೆಗಳು ಎದುರಾದವು. ಈಗ ಮುಡಾ ಪ್ರಕರಣದಲ್ಲಿ ಯಾವುದೇ ಲೋಪ ಇಲ್ಲದೇ ಇದ್ದರೂ ಉದ್ದೇಶಪೂರಕವಾಗಿ ರಾಜಕೀಯ ಕಾರಣಕ್ಕೆ ಮುಖ್ಯಮಂತ್ರಿ ಹಾಗೂ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ ಎಂಬ ಟೀಕೆಗಳು ಸಭೆಯಲ್ಲಿ ಕೇಳಿಬಂದಿವೆ.
ಉಪಹಾರಕೂಟ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಜೆ.ಜಾರ್ಜ್, ಚೆಲುವರಾಯಸ್ವಾಮಿ, ಶಿವರಾಜ್ ತಂಗಡಗಿ, ರಾಮಲಿಂಗಾರೆಡ್ಡಿ, ಮಧುಬಂಗಾರಪ್ಪ, ಲಕ್ಷ್ಮಿ ಹೆಬ್ಬಾಳ್ಕರ್, ದಿನೇಶ್ ಗುಂಡೂರಾವ್, ಶಿವಾನಂದ ಪಾಟೀಲ್, ಜಮೀರ್ ಅಹಮದ್ ಖಾನ್, ಸಂತೋಷ್ ಲಾಡ್, ಎಚ್.ಸಿ.ಮಹದೇವಪ್ಪ, ಎಚ್.ಕೆ.ಪಾಟೀಲ್, ಕೆ.ಎನ್.ರಾಜಣ್ಣ, ಎಂ.ಬಿ.ಪಾಟೀಲ್, ಎನ್.ಎಸ್.ಬೋಸರಾಜ್, ಶರಣಬಸಪ್ಪ ದರ್ಶನಾಪೂರ್, ರಹೀಂಖಾನ್, ಕೆ.ವೆಂಕಟೇಶ್, ಈಶ್ವರ್ ಖಂಡ್ರೆ, ಡಿ.ಸುಧಾಕರ್, ಡಾ.ಎಂ.ಸಿ.ಸುಧಾಕರ್, ಶರಣಪ್ರಕಾಶ್ ಪಾಟೀಲ್, ಎಸ್.ಎಸ್.ಮಲ್ಲಿಕಾರ್ಜುನ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಬಹುತೇಕರು ಭಾಗವಹಿಸಿದ್ದರು. ಕೆ.ಎಚ್.ಮುನಿಯಪ್ಪ ಹಾಗೂ ಕೃಷ್ಣಭೈರೇಗೌಡ ಅವರು ಜಿಲ್ಲಾ ಪ್ರವಾಸದಲ್ಲಿದ್ದುದರಿಂದಾಗಿ ಸಭೆಯಿಂದ ದೂರ ಉಳಿದಿದ್ದರು.