ಬೆಂಗಳೂರು,ಜೂ.1- ಕರಾವಳಿ ಜಿಲ್ಲೆಗಳಲ್ಲಿ ಹಿಂದೂ ಮುಸ್ಲಿಂ ನಡುವೆ ದ್ವೇಷ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸೂಕ್ತ ಎಚ್ಚರಿಕೆ ನೀಡಿದ್ದಾರೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸಭೆಗಳ ಮೂಲಕ ಸೌಹಾರ್ದತೆ, ಶಾಂತಿ ಪಾಲನೆಗೆ ಕ್ರಮ ಕೈಗೊಳ್ಳಲಾಗುವುದು. ಶೇ. 95 ರಷ್ಟು ಜನರಿಗೆ ಕೋಮುವಾದ, ಮಧ್ಯವಾದ ಬೇಕಿಲ್ಲ. ಕೆಲವೇ ಕೆಲವು ಶಕ್ತಿಗಳು ಕೋಮುಸಂಘರ್ಷದಲ್ಲಿ ತೊಡಗಿಸಿಕೊಂಡಿವೆ. ಅನಗತ್ಯವಾದ ಪ್ರಚೋದನೆ ನೀಡುತ್ತಿವೆ. ಅದನ್ನು ಮುಲಾಜಿಲ್ಲದೆ ಮಟ್ಟ ಹಾಕಲಾಗುವುದು. ಜನ ಬಯಸಿದಂತೆ ಶಾಂತಿ ಸುವ್ಯವಸ್ಥೆಯನ್ನು ಪಾಲನೆ ಮಾಡಲಾಗುವುದು ಎಂದು ಹೇಳಿದರು.
ಶಾಂತಿ ಸೌಹಾರ್ದತೆ, ಸಹಬಾಳ್ವೆ ಬಯಸುವವರು ಹಾಗೂ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಆಸಕ್ತಿ ಹೊಂದಿರುವವರು ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಧ್ವನಿಯೆತ್ತಬೇಕು. ಇಲ್ಲವಾದರೆ ವಿಛಿದ್ರಕಾರಿ ಶಕ್ತಿಗಳ ಧ್ವನಿಗಳೇ ಜೋರಾಗಿ ಅದೇ ಸತ್ಯ ಎಂಬಂತಾಗುತ್ತದೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಹಲವಾರು ರೀತಿ ಕ್ರಮ ಕೈಗೊಳ್ಳಲು ಸರ್ಕಾರ ಆಲೋಚಿಸಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಹಿಂದೂ, ಮುಸ್ಲಿಂ ಎರಡೂ ಸಮುದಾಯಗಳಲ್ಲಿ ಕೆಲವು ಸಂಘಟನೆಗಳು ಪ್ರಚೋದನೆ ನೀಡುತ್ತಿವೆ. ಅಂತಹ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲು ಕೋಮು ಹಿಂಸೆ ನಿಗ್ರಹ ಪಡೆ ರಚಿಸಲಾಗುತ್ತದೆ ಎಂದು ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ವಿಚಾರವಾಗಿ ಚರ್ಚೆ ಅನಗತ್ಯ. ಯಾರೋ ಒಂದಿಬ್ಬರು ಹೇಳಿಕೆ ನೀಡಿದಾಕ್ಷಣ ಅದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಕೆಲವರು ಭಾವೋದ್ವೇಗಕ್ಕೆ ಒಳಗಾಗಿ ಮಾತನಾಡಿರುವುದಕ್ಕೆ ಆದ್ಯತೆ ನೀಡುವುದಿಲ್ಲ ಎಂದರು.ನಾನು ಜಿಲ್ಲಾ ಉಸ್ತುವಾರಿ ಬದಲಾವಣೆ ಬಗ್ಗೆ ಹೇಳಿಲ್ಲ. ಅದು ಯಾವ ಮೂಲದಿಂದ ಸುದ್ದಿ ಹುಟ್ಟಿಕೊಂಡಿದೆಯೋ ಗೊತ್ತಿಲ್ಲ. ಗೃಹಸಚಿವ ಪರಮೇಶ್ವರ್ ಈ ಬಗ್ಗೆ ಹೇಳಿಕೆ ನೀಡಿರುವುದಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಮಂಗಳೂರಿನಲ್ಲಿ ಎಲ್ಲರೂ ನನ್ನೊಂದಿಗೆ ವಿಶ್ವಾಸದಿಂದಲೇ ಮಾತನಾಡಿದ್ದಾರೆ. ಉಸ್ತುವಾರಿ ಬಗ್ಗೆ ಯಾರೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಒಂದಿಬ್ಬರ ಮಾತುಗಳಿಗೆ ಒತ್ತು ನೀಡಬೇಕಿಲ್ಲ. ದಕ್ಷಿಣ ಕನ್ನಡದ ಉಸ್ತುವಾರಿ ಬಗ್ಗೆ ನನಗೆ ಯಾವುದೇ ಬೇಸರವಿಲ್ಲ. ಹೆಚ್ಚಿನ ಉತ್ಸಾಹದಿಂದಲೇ ಕೆಲಸ ಮಾಡುತ್ತಿದ್ದೇನೆ. ಮತ್ತಷ್ಟು ಪರಿಣಾಮಕಾರಿ ಕೆಲಸ ಮಾಡಲು ಮುಂದಾಗುತ್ತಿದ್ದೇನೆ ಎಂದರು.ನಿನ್ನೆ ತಾವು ಮಂಗಳೂರಿಗೆ ಭೇಟಿ ನೀಡಿದ್ದು, ಕೊಲೆಯಾದ ರಹೀಂಖಾನ್ ಮನೆಗೆ ತೆರಳಿ ಸಾಂತ್ವಾನ ಹೇಳಿದ್ದೇನೆ. ರಹೀಂ ಖಾನ್ ಗ್ರಾಮದಲ್ಲಿ ಎಲ್ಲರ ಜೊತೆಗೂ ಸೌಹಾರ್ದತೆಯಲ್ಲಿದ್ದ. ಆದರೂ ಆತನ ಹತ್ಯೆಯಾಗಿದೆ ಎಂದು ವಿಷಾದಿಸಿದರು.